Bengaluru: ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ನಡೆಸುತ್ತಿದ್ದು, ಹಲವು ಸೆಲೆಬ್ರಿಟಿಗಳು ಸ್ಥಳಕ್ಕೆ ಭೇಟಿ ನೀಡಿ, ಆಶಾ ಕಾರ್ಯಕರ್ತೆಯರಿಗೆ ಬೆಂಬಲ ಸೂಚಿಸುತ್ತಿದ್ದಾರೆ.
ಅದೇ ರೀತಿ ಚೆನ್ನೈನಿಂದ ಬೆಂಗಳೂರಿಗೆ ಬಂದಿರುವ ನಟ ವಿನೋದ್ ರಾಜ್ 10 ಮೂಟೆ ಅಕ್ಕಿ ಮತ್ತು ಧವಸ ಧಾನ್ಯ ತಂದು ಆಶಾ ಕಾರ್ಯಕರ್ತೆಯರ ಬೆಂಬಲಕ್ಕೆ ಬಂದಿದ್ದಾರೆ.
ಈ ವೇಳೆ ಮಾತನಾಡಿರುವ ವಿನೋದ್ ರಾಜ್, ಕೋರೋನಾ ಸಮಯದಲ್ಲಿ ಜನರಿಗೆ ಧೈರ್ಯ ತುಂಬಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದು ಆಶಾ ಕಾರ್ಯಕರ್ತೆಯರು. ನನ್ನ ತಾಯಿಗೆ ಆರೋಗ್ಯ ಸಮಸ್ಯೆಯಾದಾಗಲೂ ಅವರ ಕಾಳಜಿ ವಹಿಸಿದ್ದವರು ಇದೇ ಆಶಾಕಾರ್ಯಕರ್ತೆಯರು. ಅವರು ದೇವರ ಸಮಾನರು. ಆದರೆ ನಿಶ್ಕಲ್ಮಶ ಮನಸ್ಸಿನಿಂದ ಸಮಾಜ ಸೇವೆ ಮಾಡುವ ಆಶಾ ಕಾರ್ಯಕರ್ತೆಯರಿಗೆ ಇಂದು ನೋವಾಗಿದೆ ಎಂದು ವಿನೋದ್ ರಾಜ್ ಹೇಳಿದ್ದಾರೆ.
ಅಲ್ಲದೇ ನಾವೆಲ್ಲರೂ ಆಶಾ ಕಾರ್ಯಕರ್ತೆಯರ ಬೆಂಬಲಕ್ಕೆ ನಿಲ್ಲಬೇಕು. ಬೆಲೆ ಏರಿಕೆ ಸೇರಿದಂತೆ ಅವರ ಜೀವನ ಹಲವು ಸಮಸ್ಯೆಗಳಿಂದ ಕೂಡಿದೆ. ಅವರ ಸಮಸ್ಯೆಯನ್ನೂ ಸರ್ಕಾರ ಬಗೆಹರಿಸಬೇಕು ಎಂದು ವಿನೋದ್ ರಾಜ್ ಹೇಳಿದ್ದಾರೆ.




