ವಿದ್ಯಾರ್ಥಿಗಳು ಜಾಣರಿಲ್ಲ ಅಂತ ಶಾಲೆಯಿಂದ ವರ್ಗಾವಣೆ ಪತ್ರ ಕೊಟ್ಟು ಶಾಲೆಯಿಂದ ಹೊರಹಾಕಿದ್ದಾರೆ. ಕೊಪ್ಪಳದಲ್ಲಿ 200ಕ್ಕೂ ಹೆಚ್ಚು ಮಕ್ಕಳ ಭವಿಷ್ಯ ಅಂಧಕಾರವಾಗುತ್ತಿದೆ. ಶೇಕಡ 100ರಷ್ಟು ಫಲಿತಾಂಶದ ಬೆನ್ನಲ್ಲೆ ‘ಜಾಣರಿಲ್ಲದ’ ಮಕ್ಕಳಿಗೆ ಖಾಸಗಿ ಶಾಲೆಗಳು ಬಾಗಿಲು ಮುಚ್ಚಿದ ಘಟನೆ ಬೆಳಕಿಗೆ ಬಂದಿದೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇಕಡ 100 ಕ್ಕೆ 100 ಬರಬೇಕು ಅಂತ ಖಾಸಗಿ ಶಾಲೆಗಳು ಈ ನಿರ್ಧಾರ ತೆಗೆದುಕೊಂಡಿವೆ. ಆದರೆ, ಈ ನಿರ್ಧಾರದ ಬೆನ್ನಲ್ಲೆ ನೂರಾರು ಮಕ್ಕಳ ಮೇಲೆ ಒತ್ತಡ ಬಿದ್ದಿದೆ. ಕೊಪ್ಪಳ ಜಿಲ್ಲೆಯ 50ಕ್ಕೂ ಹೆಚ್ಚು ಖಾಸಗಿ ಶಾಲೆಗಳು, ನೀವು ಪಾಸಾಗಲಿಕ್ಕೆ ಲಾಯಕ್ ಇಲ್ಲ ಅಂತ ಹೇಳಿ ಟೀಸಿ ಕೊಟ್ಟು ಅಂದ್ರೆ ವರ್ಗಾವಣೆ ಪತ್ರ ಕೊಟ್ಟು ಮಕ್ಕಳನ್ನೇ ಹೊರಹಾಕಿವೆ. ಶಾಲೆಗಳ ಪ್ರತಿಷ್ಠೆ ಉಳಿಸಿಕೊಳ್ಳಲು ಮಕ್ಕಳ ಭವಿಷ್ಯವನ್ನೆ ನಿರ್ನಾಮ ಮಾಡ್ತಿವೆ.
ಕೊಪ್ಪಳ ತಾಲೂಕಿನ ಮುನಿರಾಬಾದಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ 20 ಮಕ್ಕಳು ಎಸ್ಸೆಸ್ಸೆಲ್ಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ‘ಜಾಣರಲ್ಲ’ ಎಂದು 8 ವಿದ್ಯಾರ್ಥಿಗಳನ್ನು ಹೊರಹಾಕಲಾಗಿದೆ. ಈ ಸಮಯದಲ್ಲಿ ಪೋಷಕರು ಕೂಡ ಅಸಕಾಯಕ ಸ್ಥಿತಿಯಲ್ಲಿದ್ದಾರೆ.
ಎಸ್‌ಎಸ್‌ಎಲ್‌ಸಿಯಲ್ಲಿ ಬೋಗಸ್ ಪರೀಕ್ಷೆ ನಡೆಸಿ ಹೆಚ್ಚಿನ ಫಲಿತಾಂಶ ಪಡೆಯುತ್ತಿದ್ದ ಸಂಸ್ಥೆಗಳಿಗೆ ವೆಬ್ ಕಾಸ್ಟಿಂಗ್ ಪರಿಣಾಮದಿಂದ ಅಕ್ರಮಕ್ಕೆ ಕಡಿವಾಣ ಬಿದ್ದಿದೆ. ಇದರಿಂದ ತಮ್ಮ ಸಂಸ್ಥೆಗೆ ಪೆಟ್ಟು ಬೀಳಲಿದೆ ಎಂದು ಫೇಲಾಗುವ ಮಕ್ಕಳನ್ನು ಶಾಲೆಯಿಂದ ಹೊರ ಹಾಕುತ್ತಿವೆ.
ಪಾಸಾಗುವ ಸಾಧ್ಯತೆ ಇಲ್ಲ ಅಂತ ಮಕ್ಕಳನ್ನು ಶಾಲೆಯಿಂದ ಹೊರಹಾಕೋದು – ಇದು ಯಾವ ಶಿಕ್ಷಾ ನೀತಿಯ ಭಾಗ? ಯಾರು ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ? ಮಕ್ಕಳಲ್ಲಿ ಕಲಿಕೆ ನಿರಾಸೆ ಉಂಟುಮಾಡೋ ಈ ಕ್ರಮವನ್ನು ತಡೆಯುವ ಹೊಣೆ ಯಾರದು? ಮಕ್ಕಳ ಭವಿಷ್ಯವನ್ನು ಖಾಸಗಿ ಫಲಿತಾಂಶದ ಲೆಕ್ಕಾಚಾರಕ್ಕೆ ಬದಲಾಯಿಸುತ್ತಿದ್ದರೆ, ಈ ರೀತಿ ಮಕ್ಕಳ ಮೇಲೆ ಮಾನಸಿಕ ಒತ್ತಡ ತಂದರೆ ಅವರ ಭವಿಷ್ಯ ಏನು? ಅನ್ನೋ ಪ್ರಶ್ನೆ ಮೂಡ್ತಾಯಿದೆ.
ವರದಿ: ಲಾವಣ್ಯ ಅನಿಗೋಳ