ತೆಲಂಗಾಣದಲ್ಲಿ ಒಬಿಸಿಗೆ ಶೇ.42 ರಷ್ಟು ಮೀಸಲು : ಸಿಎಂ ರೇವಂತ್‌ ರೆಡ್ಡಿಗೆ ಭೇಷ್‌! ಎಂದ ರಾಹುಲ್

Telangana News: ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯದಲ್ಲಿ ತೆಲಂಗಾಣದ ಹಿಂದುಳಿದ ವರ್ಗದ ಒಬಿಸಿ ಜನರಿಗೆ ಶೇ. 42ರಷ್ಟು ಮೀಸಲಾತಿಯನ್ನು ನೀಡುವುದಾಗಿ ಅಲ್ಲಿನ ಸಿಎಂ ರೇವಂತ್‌ ರೆಡ್ಡಿ ಘೋಷಿಸಿದ್ದಾರೆ. ಇನ್ನೂ ಇತ್ತೀಚಿಗೆ ನಡೆದಿದ್ದ ಜಾತಿ ಗಣತಿಯ ವರದಿಯ ಪ್ರಕಾರ ರಾಜ್ಯದಲ್ಲಿ ಶೇ.56.36ರಷ್ಟು ಹಿಂದುಳಿದ ವರ್ಗದ ಜನಸಂಖ್ಯೆ ಇದೆ. ಇನ್ನೂ ಈ ವರದಿಯನ್ನು ಆಧರಿಸಿ ಮೀಸಲಾತಿ ನೀಡಬೇಕೆಂಬ ಸಮುದಾಯದ ಹಲವು ವರ್ಷಗಳ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ರಾಜ್ಯದಲ್ಲಿ ಹಿಂದುಳಿದ ವರ್ಗದ ಜನರಿಗೆ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಪ್ರಾತಿನಿಧ್ಯದ ಎಲ್ಲ ಹಂತಗಳಲ್ಲಿ ಶೇ.42 ಮೀಸಲಾತಿಯನ್ನು ಖಚಿತಪಡಿಸಲು ನಾವು ಸಂಕಲ್ಪ ಮಾಡಿದ್ದೇವೆ. ಹಿಂದಿನ ಸರ್ಕಾರವು ಒಬಿಸಿ ಮೀಸಲಾತಿಯನ್ನು ಶೇ. 37 ಕ್ಕೆ ಹೆಚ್ಚಿಸಲು ರಾಜ್ಯಪಾಲರಿಗೆ ಪ್ರಸ್ತಾವನೆಯನ್ನು ಕಳುಹಿಸಿತ್ತು. ಆದರೆ ಈ ಸರ್ಕಾರವು ಅದನ್ನು ಹಿಂತೆಗೆದುಕೊಳ್ಳುತ್ತಿದೆ ಮತ್ತು ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಅವಕಾಶಗಳಲ್ಲಿಒಬಿಸಿಗಳಿಗೆ ಶೇ. 42 ರಷ್ಟು ಮೀಸಲಾತಿಯ ನೀಡುವ ನೂತನ ಪ್ರಸ್ತಾವನೆಯನ್ನು ಕಳುಹಿಸುತ್ತಿದೆ ಎಂದು ತಿಳಿಸಿದ್ದಾರೆ.

ಕಳೆದ ಫೆಬ್ರವರಿ 4 ರಂದು ನಮ್ಮ ಸರ್ಕಾರವು ಒಬಿಸಿ ಕೋಟಾದ ಹೆಚ್ಚಳಕ್ಕಾಗಿ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಿದ್ದರಿಂದ ಆ ದಿನವನ್ನು ಸಾಮಾಜಿಕ ನ್ಯಾಯ ದಿನವಾಗಿ ಆಚರಿಸಲಾಗುತ್ತದೆ. ಅಲ್ಲದೆ ಈ ಕುರಿತು ಹಲವಾರು ವಲಯಗಳಿಂದ ಅಭಿಪ್ರಾಯಗಳನ್ನು ಪಡೆದ ನಂತರ, ರಾಜ್ಯ ಸರ್ಕಾರವು ಒಬಿಸಿಗಳಿಗೆ ಮೀಸಲಾತಿ ನೀಡುವ ಮಸೂದೆಯನ್ನು ಪರಿಚಯಿಸಿದೆ ಎಂದು ಸಿಎಂ ರೆಡ್ಡಿ ಹೇಳಿದ್ದಾರೆ. ಇನ್ನೂ ಸದನದ ನಾಯಕನಾಗಿ, ಇದು ಜಾರಿಗೆ ಬರಲು ಕೈಗೊಳ್ಳಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಂಡು ಶೇ. 42ರಷ್ಟು ಮೀಸಲಾತಿಯನ್ನು ಸಾಧಿಸಲು ಮುಂದಾಗುತ್ತೇನೆ. ಈ ವಿಷಯದಲ್ಲಿ ಎಲ್ಲಾ ಪಕ್ಷಗಳ ನಾಯಕರು ಒಟ್ಟಾಗಿ ಸೇರಿ ಪ್ರಧಾನಿಯವರನ್ನು ಭೇಟಿ ಮಾಡುವಂತೆ ಅವರು ಮನವಿ ಮಾಡಿದ್ದಾರೆ.

ಅಲ್ಲದೆ ಈ ಮೀಸಲಾತಿಯನ್ನು ಅನುಷ್ಠಾನಕ್ಕೆ ತರಲು ಅಗತ್ಯವಾದ ಕಾನೂನು ನೆರವನ್ನೂ ಸಹ ಪಡೆಯೋಣ. ಪ್ರಧಾನಿ ಮೋದಿಯವರ ಅಪಾಯಿಂಟ್ಮೆಂಟ್ ಪಡೆಯುವ ಜವಾಬ್ದಾರಿಯನ್ನು ಕೇಂದ್ರ ಸಚಿವರಾದ ಕಿಶನ್ ರೆಡ್ಡಿ, ಬಂಡಿ ಸಂಜಯ್ ಮತ್ತು ರಾಜ್ಯ ಬಿಜೆಪಿ ನಾಯಕರು ವಹಿಸಿಕೊಳ್ಳುವಂತೆ ವಿನಂತಿಸುತ್ತೇನೆ. ಅಂದಹಾಗೆ ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವಂತೆ ರಾಹುಲ್ ಗಾಂಧಿಯವರನ್ನು ವಿನಂತಿಸೋಣ. ಈ ಕುರಿತು ರಾಹುಲ್ ಗಾಂಧಿಯನ್ನು ಶೀಘ್ರದಲ್ಲೇ ಭೇಟಿ ಮಾಡಲು ಸಮಯ ನೀಡುವಂತೆ ಕೋರಿ ಟಿಪಿಸಿಸಿ ಅಧ್ಯಕ್ಷ ಮಹೇಶ್ ಕುಮಾರ್ ಗೌಡ್ ಅವರಿಗೆ ತಿಳಿಸಿದ್ದೇನೆ ಎಂದಿದ್ದಾರೆ. ಅಲ್ಲದೆ ಸದನದ ನಾಯಕನಾಗಿ, ನಾನು ಒಬಿಸಿ ಜನಗಣತಿ ವರದಿ ಶೇ. 100 ರಷ್ಟು ಸರಿಯಾಗಿದೆ ಎಂದು ಭರವಸೆ ನೀಡುತ್ತಿದ್ದೇನೆ. ಸಂಸತ್ತಿನಲ್ಲಿ ಒಬಿಸಿ ಮಸೂದೆಯನ್ನು ಅಂಗೀಕರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಒಬಿಸಿಗಳಿಗೆ ಶೇ. 42 ರಷ್ಟು ಮೀಸಲಾತಿ ಒದಗಿಸುವವರೆಗೂ ನಾವು ಸುಮ್ಮನಿರುವುದಿಲ್ಲ ಎಂದು ರೇವಂತ್‌ ರೆಡ್ಡಿ ಪ್ರತಿಜ್ಞೆ ತೊಟ್ಟಿದ್ದಾರೆ.

ಕ್ರಾಂತಿಕಾರಿ ನಡೆ ಎಂದ ರಾಹುಲ್..

ಇನ್ನೂ ತೆಲಂಗಾಣ ವಿಧಾನಸಭೆಯು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇ. 42ಕ್ಕೆ ಹೆಚ್ಚಿಸುವ ಎರಡು ಮಸೂದೆಗಳನ್ನು ಅಂಗೀಕರಿಸಿದ ಕ್ರಮವನ್ನು ಕ್ರಾಂತಿಕಾರಿ ನಡೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಬಣ್ಣಿಸಿದ್ದಾರೆ. ಅಲ್ಲದೆ ಈ ಮೂಲಕ ದೇಶಾದ್ಯಂತ ಜನಗಣತಿ ನಡೆಯುವುದನ್ನು ಕಾಂಗ್ರೆಸ್ ಪಕ್ಷ ಖಾತರಿಪಡಿಸಲಿದೆ ಎಂದು ಹೇಳಿದ್ದಾರೆ. ತೆಲಂಗಾಣದಲ್ಲಿ ಒಬಿಸಿ ಮೀಸಲಾತಿಯನ್ನು ಹೆಚ್ಚಿಸುವ ಭರವಸೆಯನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಿದೆ. ರಾಜ್ಯದಲ್ಲಿ ವೈಜ್ಞಾನಿಕ ಜಾತಿ ಗಣತಿಯ ಮೂಲಕ ಪಡೆದ ಒಬಿಸಿ ಸಮುದಾಯದ ನಿಜವಾದ ಸಂಖ್ಯೆಯನ್ನು ಒಪ್ಪಿಕೊಳ್ಳಲಾಯಿತು ಮತ್ತು ಶಿಕ್ಷಣ, ಉದ್ಯೋಗ ಮತ್ತು ರಾಜಕೀಯದಲ್ಲಿ ಅವರ ಸಮಾನ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಶೇಕಡಾ 42ರಷ್ಟು ಮೀಸಲಾತಿಯ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಇದು ನಿಜಕ್ಕೂ ಸಾಮಾಜಿಕ ನ್ಯಾಯದ ಕಡೆಗೆ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಇದರ ಮೂಲಕ ರಾಜ್ಯದಲ್ಲಿ ಶೇಕಡಾ 50ರಷ್ಟು ಮೀಸಲಾತಿಯ ಅಡ್ಡಿಯನ್ನು ಸಹ ನಿವಾರಿಸಲಾಗಿದೆ ಎಂದು ರಾಹುಲ್ ಗಾಂಧಿ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಒಟ್ನಲ್ಲಿ.. ಕಳೆದ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಒಬಿಸಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ಮಾತುಗಳನ್ನಾಡಿದ್ದರು. ಅಲ್ಲದೆ ಮುಖ್ಯವಾಗಿ ತೆಲಂಗಾಣದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಒಬಿಸಿ ಸಮುದಾಯದ ನಾಯಕ ಆಯ್ಕೆಯಾಗುತ್ತಾನೆ ಎಂದು ಹೇಳುವ ಮೂಲಕ ಒಬಿಸಿಯನ್ನು ಓಲೈಸುವ ಪ್ರಯತ್ನ ಮಾಡಿದ್ದರು. ಆದರೆ ಇದೀಗ ಕಾಂಗ್ರೆಸ್‌ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಆ ಸಮುದಾಯವನ್ನು ಇನ್ನಷ್ಟು ಮುನ್ನೆಲೆಗೆ ತರುವ ಕೆಲಸ ಮಾಡುವ ಮೂಲಕ ಬಿಜೆಪಿಗೆ ಟಕ್ಕರ್‌ ಕೊಡಲು ಮುಂದಾಗಿರುವುದು ಸುಳ್ಳಲ್ಲ..

About The Author