ನವದೆಹಲಿ: ಶಿಸ್ತಿನ ಪಕ್ಷ ಅಂತಾನೇ ಕರೆಸಿಕೊಳ್ಳುವ ಭಾರತೀಯ ಜನತಾ ಪಕ್ಷ (BJP)ದಲ್ಲಿ ಯಾವುದೇ ನಾಯಕನಾಗಲಿ 75 ವರ್ಷ ತುಂಬಿದ ಕೂಡಲೇ ನಿವೃತ್ತಿ ಘೋಷಿಸಬೇಕು. ಇದು ಆರ್‌ಎಸ್‌ಎಸ್ (RSS)ನ ನಿಯಮ ಕೂಡ ಹೌದು. ಸಂಘದ ಈ ನಿಯಮದ ಅನುಸಾರವೇ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು (BS YEDEYURAPPA) 75 ವರ್ಷ ಪೂರ್ಣಗೊಂಡ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ, ಚುನಾವಣಾ ರಾಜಕೀಯಕ್ಕೂ ನಿವೃತ್ತಿಯನ್ನು ಘೋಷಿಸಿದ್ದರು. ಇದೀಗ ಕೇಸರಿ ಪಾಳಯದಲ್ಲಿ ವಯಸ್ಸಿನ ವಿಚಾರದ ಚರ್ಚೆ ಮತ್ತೆ ಮುನ್ನಲೆಗೆ ಬಂದಿದ್ದು, ಸ್ವತಃ ಬಿಜೆಪಿ ನಾಯಕರೇ ಈ ಬಗ್ಗೆ ಬಹಿರಂಗವಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ.
ಆರ್‌ಎಸ್‌ಎಸ್ ನಿಯಮದಂತೆ ಪ್ರಧಾನಿ ನರೇಂದ್ರ ಮೋದಿ (NARENDRA MODI) ಅವರು 75ನೇ ವರ್ಷಕ್ಕೆ ನಿವೃತ್ತಿ (retirement) ಘೋಷಿಸದಿದ್ದರೆ ಬೇರೆ ಮಾರ್ಗದಲ್ಲಿ ಅವರು ಕುರ್ಚಿಯನ್ನು ಕಳೆದುಕೊಳ್ಳುತ್ತಾರೆ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ (SUBRAMANIAN SWAMY) ಹೇಳಿದ್ದಾರೆ. ಈ ಬಗ್ಗೆ ಬುಧವಾರ X ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಮೋದಿಯವರು ಆರ್‌ಎಸ್‌ಎಸ್ ಪ್ರಚಾರಕನ ಸಂಸ್ಕಾರಕ್ಕೆ ಬದ್ಧರಾಗಿ ತಮ್ಮ 75ನೇ ವರ್ಷದ ಹುಟ್ಟುಹಬ್ಬದ ನಂತರ ಸೆಪ್ಟೆಂಬರ್ 17ರಂದು ನಿವೃತ್ತಿಯನ್ನು ಘೋಷಿಸಬೇಕು. ಇಲ್ಲವಾದರೆ ಇತರೆ ವಿಧಾನಗಳಿಂದ ತಮ್ಮ ಪ್ರಧಾನಿ ಕುರ್ಚಿಯನ್ನು ಕಳೆದುಕೊಳ್ಳುತ್ತಾರೆ ‘ ಎಂದು ಸುಬ್ರಹ್ಮಣಿಯನ್ ಸ್ವಾಮಿ ತಮ್ಮ ಅಧಿಕೃತ X ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬಿಜೆಪಿ ಹಿರಿಯ ನಾಯಕ ಸುಬ್ರಹ್ಮಣಿಯನ್ ಸ್ವಾಮಿಯವರು ಮಾಡಿರುವ ಈ ಒಂದು ಪೋಸ್ಟ್ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಒಂದರ್ಥದಲ್ಲಿ ಸುಬ್ರಹ್ಮಣಿಯನ್ ಸ್ವಾಮಿಯವರ ಈ ಹೇಳಿಕೆ ಪ್ರಧಾನಿ ಮೋದಿಯವರನ್ನ ತೀವ್ರ ಮುಜುಗರಕ್ಕೆ ಒಳಗಾಗುವಂತೆ ಮಾಡಿರೋದಂತೂ ಸುಳ್ಳಲ್ಲ. ಹಾಗೆಯೇ ಸ್ವಾಮಿಯವರ ಈ ಹೇಳಿಕೆ ವಿರೋಧ ಪಕ್ಷಗಳು ಹಾಗೂ ಮೋದಿಯವರ ರಾಜಕೀಯ ವಿರೋಧಿಗಳಿಗೆ ಪ್ರಬಲ ಅಸ್ತ್ರವಾಗಿದೆ.
ಹಾಗಾದರೆ ಪ್ರಧಾನಿ ಮೋದಿ ವಯಸ್ಸು ಎಷ್ಟು..?
ಪ್ರಧಾನಿ ನರೇಂದ್ರ ಮೋದಿಯವರು 1950ರ ಸೆಪ್ಟೆಂಬರ್ 17ರಂದು ಜನಿಸಿದ್ದಾರೆ. 2024ರ ಸೆಪ್ಟೆಂಬರ್ 17ಕ್ಕೆ 74 ವರ್ಷ ಪೂರ್ಣಗೊಂಡು 75ನೇ ವರ್ಷಕ್ಕೆ ಮೋದಿ ಕಾಲಿಡುತ್ತಾರೆ. ಈ ಸಂದರ್ಭದಲ್ಲೇ ಪ್ರಧಾನಿ ಮೋದಿ ನಿವೃತ್ತಿಯ ಬಗ್ಗೆ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ X ನಲ್ಲಿ ಪೋಸ್ಟ್ ಮಾಡಿರುವುದು ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಮೋದಿಗೆ ನಿಯಮ ನೆನಪಿಸಿದ್ದ ಕೇಜ್ರಿವಾಲ್:
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಬಿಡುಗಡೆಯಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆರ್‌ಎಸ್‌ಎಸ್ ನಿಯಮಗಳ ಬಗ್ಗೆ ನೆನಪಿಸಿದ್ದರು. ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಮೋದಿ ಅವರು 75ನೇ ವರ್ಷಕ್ಕೆ ಕಾಲಿಡುತ್ತಿದ್ದು, ಅವರ ಪಕ್ಷದ ನಿಯಮದ ಪ್ರಕಾರ 75 ವರ್ಷ ತುಂಬಿದವರು ನಿವೃತ್ತಿಯಾಗಬೇಕು ಎಂದಿದ್ದರು. 2014ರಲ್ಲಿ ನರೇಂದ್ರ ಮೋದಿಯವರೇ ಈ ನಿಯಮವನ್ನು ಮಾಡಿದ್ದರು. ಹೀಗಾಗಿ 75 ವರ್ಷ ತುಂಬಿದ ಬಳಿಕ ಮೋದಿ ಪ್ರಧಾನಿಯಾಗಿ ಮುಂದುವರೆಯಲು ಸಾಧ್ಯವಿಲ್ಲ. ಮೋದಿ ಬದಲು ಅಮಿತ್ ಶಾ ದೇಶದ ಪ್ರಧಾನಿಯಾಗುತ್ತಾರೆ. ಅಮಿತ್ ಶಾ ಪರವಾಗಿ ಮೋದಿ ಮತಯಾಚಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಕೇಜ್ರಿವಾಲ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ಅಮಿತ್ ಶಾ (AMIT SHAH) ಪ್ರಧಾನಿ ನರೇಂದ್ರ ಮೋದಿ ಅವರು 75 ವರ್ಷ ತುಂಬಿದ ನಂತರ ನಿವೃತ್ತಿಯಾಗುವುದಿಲ್ಲ. ಅಂತಹ ಯಾವುದೇ 75 ವರ್ಷಗಳ ಮಿತಿ ನಿಯಮ ಬಿಜೆಪಿಯಲ್ಲಿಲ್ಲ. ಮೋದಿಯವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತಾರೆ. ಈ ಬಗ್ಗೆ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಅಮಿತ್ ಶಾ ಹೇಳಿಕೆ ನೀಡಿದ್ದರು.