Sandalwood News: ಹೆಣ್ಣು ಮಗುವಿಗೆ ತಾಯಿಯಾಗಿರುವ ನಟಿ ಹರ್ಷಿಕಾ ಪೂಣಚ್ಛ, ಸದ್ಯ ಚಿತ್ರರಂಗದಿಂದ ದೂರ ಉಳಿದು, ತಾಯ್ತನದ ಸಂತೋಷ ಅನುಭವಿಸುತ್ತಿದ್ದಾರೆ. ಇಂದು ಹರ್ಷಿಕಾ ತಮ್ಮ ಪತಿ, ನಟ ಭುವನ್ ಮತ್ತು ಮಗಳ ಜೊತೆ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಗೆ ಬಂದು, ಹರಕೆ ತೀರಿಸಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಹರ್ಷಿಕಾ ಮತ್ತು ಭುವನ್‌ಗೆ ಮುದ್ದಾದ ಹೆಣ್ಣು ಮಗು ಜನಿಸಿದೆ. ಪುಟ್ಟ ಕೂಸು ಆರೋಗ್ಯವಾಗಿರಲಿ ಎಂದು, ಮಗಳಿಗೆ ಎಲ್ಲವೂ ಒಳ್ಳೆಯದಾಗಲಿ ಎಂದು ಕೊಲ್ಲೂರು ದೇವಸ್ಥಾನಕ್ಕೆ ಬಂದು, ಪೂಜೆ ಸಲ್ಲಿಸುತ್ತೇನೆ ಎಂದು ಹರ್ಷಿಕಾ ದಂಪತಿ ಹರಕೆ ಹೊತ್ತಿದ್ದರು. ಅದರಂತೆ ಇಂದು ಹರ್ಷಿಕಾ ಕುಟುಂಂಬದವರೊಂದಿಗೆ ಕೊಲ್ಲೂರಿಗೆ ಆಗಮಿಸಿ, ದೇವಿಗೆ ಪೂಜೆ ಸಲ್ಲಿಸಿ, ಹರಕೆ ತೀರಿಸಿದ್ದಾರೆ.
ಈ ಬಗ್ಗೆ ಇನ್‌ಸ್ಟಾ ಪೋಸ್ಟ್ ಆಗಿರುವ ಹರ್ಷಿಕಾ, ಹೊಸ ವರ್ಷ 2025 ರಲ್ಲಿ ಪೋಷಕರಂತೆ ಹೊಸ ಆರಂಭಕ್ಕೆ, ನಮ್ಮ ಶಕ್ತಿ ದೇವತೆಯಾದ ಕೊಲ್ಲೂರು ಮೂಕಾಂಬಿಕೆಯ ದೈವಿಕ ಆಶೀರ್ವಾದವನ್ನು ಪಡೆಯಲು ನಾವು ನಮ್ಮ ಪುಟ್ಟ ದೇವತೆಯೊಂದಿಗೆ ಕುಟುಂಬ ಸಮೇತರಾಗಿ ಕೊಲ್ಲೂರಿಗೆ ಭೇಟಿ ನೀಡಿದ್ದೇವೆ. ದೇವಿಯು ನಿಮ್ಮೆಲ್ಲರನ್ನು ಆಶೀರ್ವದಿಸಲಿ ಎಂದು ಹರ್ಷಿಕಾ ಬರೆದುಕೊಂಡಿದ್ದಾರೆ. ಇನ್ನು ನೆಚ್ಚಿನ ನಟ, ನಟಿಯನ್ನು ದೇವಸ್ಥಾನದಲ್ಲಿ ಭೇಟಿಯಾದ ಫ್ಯಾನ್ಸ್, ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.