ನಾನು ದಲಿತ, ನಾನೇಕೆ ಮುಖ್ಯಮಂತ್ರಿಯಾಗಬಾರದು?: ಸಚಿವ ಆರ್.​ಬಿ.ತಿಮ್ಮಾಪುರ

Hubli News: ಹುಬ್ಬಳ್ಳಿ: ಆಡಳಿತಾರೂಢ ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಕುರ್ಚಿಗಾಗಿ ಕಾದಾಟ ಜೋರಾಗಿದ್ದು, ನಾಯಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಆಗುವ ಡ್ಯಾಮೇಜ್​ ಅನ್ನು ತಡೆಯಲು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೆವಾಲಾ ​ ನೇತೃತ್ವದಲ್ಲಿ ಸೋಮವಾರ ಸಭೆ ನಡೆಯಿತು. ಸಭೆಯಲ್ಲಿ ಸುರ್ಜೆವಾಲಾ ರಾಜ್ಯ ನಾಯಕರಿಗೆ ಖಡಕ್​ ಸೂಚನೆ ನೀಡಿದ ಬಳಿಕವೂ ಸಿಎಂ ಆಗುವ ಕೂಗು ನಿಂತಿಲ್ಲ. ದಲಿತ ಸಿಎಂ ಕೂಗು ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ನಾನು ದಲಿತ, ನಾನೇಕೆ ಮುಖ್ಯಮಂತ್ರಿಯಾಗಬಾರದು? ಎಂದು ಸಚಿವ ಆರ್​ಬಿ ತಿಮ್ಮಾಪುರ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಲಿತರು ಯಾಕೆ ಸಿಎಂ ಆಗಬಾರದು? ನಾನು ಯಾಕೆ ಸಿಎಂ ಆಗಬಾರದು? ಮುಖ್ಯಮಂತ್ರಿ ಮಾಡಿದರೆ ಯಾರು ಬೇಡ ಅಂತಾರೆ. ನನಗೆ ಅಷ್ಟು ಶಕ್ತಿ ಇದೆಯೋ ಇಲ್ವೋ, ಸಿಎಲ್​ಪಿಯಲ್ಲಿ ನನ್ನ ಒಪ್ಪುತ್ತಾರೋ ‌ಇಲ್ವೋ? ಇವೆಲ್ಲವೂ ಪರಿಗಣನೆಗೆ ಬರುತ್ತದೆ. ಹೈಕಮಾಂಡ್ ಹೇಳಿದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದರು.

ಸೋಮವಾರ ನಡೆದ ಸಭೆಯಲ್ಲಿ ಬೆಳಗಾವಿ ಕಾರ್ಯಕ್ರಮದ ಬಗ್ಗೆ ಚರ್ಚೆಯಾಗಿದೆ. ಶಾಸಕಾಂಗ ಸಭೆಯಲ್ಲಿ ಯಾರೂ ಅಸಮಾಧಾನ‌ ವ್ಯಕ್ತಪಡಿಸಿಲ್ಲ. ದಲಿತ ಶಾಸಕರ ಡಿನ್ನರ್ ಸಭೆ ರದ್ದಾಗಿಲ್ಲ, ಮುಂದೂಡಿದ್ದೇವೆ. ದಲಿತ ಶಾಸಕರ ಕಷ್ಟ ನೋವು ಆಲಿಸಬೇಕು. ತ್ಯಾಗದ ಬಗ್ಗೆ ನಾನು ಮಾತಾಡಿದ್ದೇನೆ ಎಂದು ತಿಳಿಸಿದರು.

ಸಿಎಂ ಬದಲಾವಣೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸ್ತಾರೆ. ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳೆಗೆ ಇಳಿಸುತ್ತಾರೆ ಎಂದು ಹೇಳಿದ್ದು ಯಾರು? ಅಧಿಕಾರ ಹಂಚಿಕೆ ನನಗೆ ಗೊತ್ತಿಲ್ಲ. ಸಚಿವ ಸಂಪುಟ ಪುನರಾಚನೆ ವಿಚಾರ ನನಗೆ ಗೊತ್ತಿಲ್ಲ ಎಂದರು.

ಹಸುಗಳ ಕೆಚ್ಚಲು ಕೊಯ್ದಿದ್ದನ್ನು ವಿರೋಧಿಸಿ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ದಲಿತರ ಕೊಲೆಯಾಗುತ್ತದೆ. ಆಗ ಪ್ರತಿಭಟನೆ ಮಾಡಿದ್ದಾರಾ? ತಂದೆ-ತಾಯಿಯ ಕೊಲೆಯಾಗುತ್ತದೆ, ಅಂತವರಿಗೆ ಬಲಿ ಹಾಕಬೇಕು. ಇದರಲ್ಲಿ ರಾಜಕೀಯ ಮಾಡಬಾರದು. ಬಿಜೆಪಿ ಎಲ್ಲದರಲ್ಲೂ ರಾಜಕೀಯ ಮಾಡುತ್ತಿದೆ. ಸಣ್ಣತನದ ರಾಜಕೀಯದಿಂದ ಹೊರಬರದಿದ್ದರೇ ಬಿಜೆಪಿಯವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ಮಾಡಿದರು.

About The Author