Saturday, April 19, 2025

Latest Posts

2.5ಲಕ್ಷ ಮೌಲ್ಯದ ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ NWKRTC ಸಾರಿಗೆ ಸಿಬ್ಬಂದಿ

- Advertisement -

Hubli News: ಹುಬ್ಬಳ್ಳಿ: ಬಸ್ಸಿನಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಅಂದಾಜು 2.50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತಿತರ ಪ್ರಮುಖ ವಸ್ತುಗಳಿದ್ದ ಬ್ಯಾಗನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಪ್ರಾಮಾಣಿಕತೆ ಮೆರೆದಿದ್ದಾರೆ.

ಜನೆವರಿ 26ರಂದು ರವಿವಾರ ನವಲಗುಂದ ತಾಲ್ಲೂಕಿನ ಶಿರಕೋಳದಿಂದ ಹುಬ್ಬಳ್ಳಿಗೆ ಬಂದಿರುವ ಹುಬ್ಬಳ್ಳಿ ಗ್ರಾಮಾಂತರ 2ಡಿಪೋ ಬಸ್ಸಿನಲ್ಲಿ ಶಿರಕೋಳ ನಿವಾಸಿ ಚಂದ್ರಗೌಡ ಬೊಮ್ಮಕ್ಕಗೌಡ ಎಂಬವರು ತಮ್ಮ ತಾಯಿ, ಹಾಗೂ ಪತ್ನಿ ಮತ್ತು ಇಬ್ಬರು ಸಣ್ಣ ಮಕ್ಕಳೊಂದಿಗೆ ಬೆಂಗಳೂರಿಗೆ ಹೋಗುವ ಸಲುವಾಗಿ ಶಿರಕೋಳದಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಇಳಿಯುವಾಗ ಅಂದಾಜು 2 ಲಕ್ಷ 50 ಸಾವಿರ ರೂಪಾಯಿ ಮೌಲ್ಯದ ಪತ್ನಿಯ ಚಿನ್ನದ ಮಂಗಳಸೂತ್ರ, ಮನೆಯ ಬೀಗದ ಕೀ ಮತ್ತಿತರ ಪ್ರಮುಖ ವಸ್ತುಗಳಿದ್ದ ಒಂದು ಬ್ಯಾಗನ್ನು ಬಸ್ಸಿನಲ್ಲಿಯೇ ಮರೆತು ಹೋಗಿದ್ದಾರೆ.

ಎರಡು ಗಂಟೆ ನಂತರ ಬ್ಯಾಗನ್ನು ಮರೆತು ಬಂದಿರುವುದು ನೆನಪಾಗಿದೆ. ಕೂಡಲೇ ಹೊಸೂರು ಬಸ್ ನಿಲ್ದಾಣದ ಸಂಚಾರ ನಿಯಂತ್ರಕರಾದ ಮಂಜುಳಾ ಗರಸರಂಗಿ ಮೂಲಕ ಬಸ್ಸಿನ ಚಾಲಕರಾದ ಜೆ. ಎಂ. ಹವಾಲ್ದಾರ ಮತ್ತು ನಿರ್ವಾಹಕರಾದ ಫರಿದಾ ಮತ್ತೇಸಾಬ ರವರನ್ನು ಸಂಪರ್ಕಿಸಿದಾಗ ಬ್ಯಾಗು ಸುರಕ್ಷಿತವಾಗಿರುವುದು ತಿಳಿದು ಬಂದಿದೆ. ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ಚಾಲಕ ಹಾಗೂ ನಿರ್ವಾಹಕರ ಮೂಲಕ ಚಿನ್ನಾಭರಣ ಸಹಿತ ಬ್ಯಾಗ್ ನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.

ಚಿನ್ನಾಭರಣದ ಬ್ಯಾಗ ಮರಳಿ ಪಡೆದ ಪ್ರಯಾಣಿಕ ಚಂದ್ರೇಗೌಡ ಭಾವುಕರಾಗಿ ಮಾತನಾಡಿ ಲಕ್ಷಾಂತರ ಚಿನ್ನಾಭರಣ, ಮನೆಯ ಬೀಗದ ಕೀ ಹಾಗೂ ವಸ್ತುಗಳು ಕಳೆದು ಹೋಗಿದ್ದರಿಂದ ತುಂಬಾ ಗಾಬರಿಯಾಗಿತ್ತು. ಎಲ್ಲಾ ವಸ್ತುಗಳನ್ನು ಸುರಕ್ಷಿತವಾಗಿ ಹಿಂದಿರುಗಿಸಿದ ಚಾಲಕರು ಮತ್ತು ನಿರ್ವಾಹಕರು ಹಾಗೂ ಅಧಿಕಾರಿಗಳಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದರು.

ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಸಂಸ್ಥೆಯ ಸಿಬ್ಬಂದಿಗಳ ಪ್ರಯಾಣಿಕ ಸ್ನೇಹಿ ವರ್ತನೆ ಅಭಿನಂದನೀಯ ಹಾಗೂ ಇತರೆ ನೌಕರರಿಗೆ ಪ್ರೇರಣೆಯಾಗಿದೆ ಎಂದು ಶ್ಲಾಘಿಸಿದ್ದಾರೆ.

- Advertisement -

Latest Posts

Don't Miss