ಮಾರ್ಚ್ 22 ರಂದು ಕರ್ನಾಟಕ ಬಂದ್..
ವಾಟಾಳ್ ನೇತೃತ್ವದಲ್ಲಿ ಸ್ಥಬ್ಧವಾಗಲಿರುವ ಕರುನಾಡು..
ಎಂಇಎಸ್ ಗೂಂಡಾಗಿರಿ ಖಂಡಿಸಿ ಕನ್ನಡಿಗರ ಹೋರಾಟ..
ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ತೀರ್ಮಾನ..
ಎಂಇಎಸ್ ನಿಷೇಧಕ್ಕೆ ಕನ್ನಡಪರ ಹೋರಾಟಗಾರರ ಅಗ್ರಹ..
Belagavi News: ಬೆಳಗಾವಿಯಲ್ಲಿ ನಿರಂತರವಾಗಿ ಕನ್ನಡಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಹಾಗೂ ದೌರ್ಜನ್ಯವನ್ನು ಖಂಡಿಸಿ ಮಾರ್ಚ್ 22 ರಂದು ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನಗೆಳು ತೀರ್ಮಾನಿಸಿವೆ. ಬೆಂಗಳೂರಿನಲ್ಲಿ ನಡೆದ ರಾಜ್ಯದ ವಿವಿಧ ಕನ್ನಡಪರ ಮುಖಂಡರ ಸಭೆಯಲ್ಲಿ ಕರ್ನಾಟಕ ಬಂದ್ ಮಾಡುವ ಮೂಲಕ ರಾಜ್ಯದ ಗಡಿಭಾಗದ ಕನ್ನಡಿಗರ ರಕ್ಷಣೆಗಾಗಿ ಸರ್ಕಾರ ಮುಂದಾಗಬೇಕು ಎಂಬ ಚರ್ಚೆಯಾಗಿದೆ. ಅಲ್ಲದೆ ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸಬೇಕೆಂದು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಗಿದೆ. ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಈ ಬಂದ್ ನಡೆಸುವ ಕುರಿತು ಮುಖಂಡರು ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ.
ಬಂದ್‌ಗೂ ಮೊದಲು ಅಂದರೆ ಮಾರ್ಚ್ 4 ರಂದು ಎಲ್ಲ ಕನ್ನಡಪರ ಹೋರಾಟಗಾರರು ಸೇರಿ ರಾಜಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆಯನ್ನು ನಡೆಸಲಿದ್ದಾರೆ. ಅಲ್ಲದೆ ಮಾರ್ಚ್ 7 ರಂದು ಬೆಳಗಾವಿ ಚಲೋ ನಡೆಸಿ ಅಲ್ಲಿಯ ಕನ್ನಡಿಗರ ಜೊತೆ ನಾವಿದ್ದೇವೆ ಎಂಬ ಸಂದೇಶ ನೀಡಲು ಕನ್ನಡಪರ ಹೋರಾಟಗಾರರು ಸಜ್ಜಾಗಿದ್ದಾರೆ. ಟಿಕೆಟ್ ನೀಡುವ ವಿಚಾರದಲ್ಲಿ ಕನ್ನಡ ಮಾತನಾಡಿದ್ದ ಕಂಡಕ್ಟರ್ ಮೇಲೆ ಎಂಇಎಸ್ ಗೂಂಡಾಗಳು ಹಲ್ಲೆ ಮಾಡಿದ್ದರು. ಇದಾದ ಬಳಿಕ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದರು. ಅಲ್ಲದೆ ಕನ್ನಡಪರ ಸಂಘಟನಗೆಳೂ ಸಹ ಘಟನೆಯನ್ನು ಖಂಡಿಸಿ ಹೋರಾಟಕ್ಕೆ ಇಳಿದಿದ್ದವು, ಈ ಒತ್ತಡಕ್ಕೆ ಮಣಿದ ಸರ್ಕಾರ ಆರೋಪಿಗಳನ್ನು ಬಂಧಿಸಿತ್ತು. ಅಲ್ಲದೆ ಇದೇ ವಿಚಾರಕ್ಕೆ ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‌ಗಳ ಮೇಲೆ ಅಲ್ಲಿನ ಶಿವಸೇನೆಯ ಗೂಂಡಾಗಳು ದಾಳಿ ಮಾಡಿದ್ದರು. ಇದರಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವಿನ ಬಸ್ ಸಂಚಾರ ಸ್ಥಬ್ದವಾಗಿತ್ತು. ಇದೀಗ ಬೆಳಗಾವಿಯ ರಾಜಕಾರಣಿಗಳ ವಿರುದ್ದ ಸಿಡಿದೆದ್ದಿರುವ ಕನ್ನಡಪರ ಹೋರಾಟಗಾರರು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.