International News: ಕಾಮನ್ ಆಗಿ ನಮ್ಮ ಕೆಲಸದ ಸ್ಥಳದಿಂದ ಮನೆಗೆ ಹೋಗಲು ಬಸ್, ಆಟೋ, ಬೈಕ್ ಇನ್ನೂ ಹೇಳೋದಾದ್ರೆ ಕಾರನ್ನ ಬಳಸುತ್ತೇವೆ. ಆದರೆ ಎಲ್ಲ ಇದ್ದರೂ ಕೆಲವೊಂದು ಸಲ ಈ ಪರಿಸ್ಥಿತಿ ಅನ್ನೋದು ಯಾವ ರೀತಿ ಸಂಕಷ್ಟಕ್ಕೆ ದೂಡಿ ಬಿಡುತ್ತೆ, ಕೆಲವೊಂದು ಜನರನ್ನ ಹಿಂಡಿ ಹಿಪ್ಪೆ ಮಾಡಿಬಿಡುತ್ತೆ. ಆದ್ರೆ ಇಲ್ಲೊಬ್ಬ ಮಹಿಳೆಗೆ ಮನೆ ಹಾಗೂ ಕೆಲಸದ ಸ್ಥಳದ ನಡುವಿನ ಅಂತರ ನೂರಾರು ಕಿಲೋ ಮೀಟರ್ ಆದ್ರೆ ಏನಾಗಬೇಡ ಅವಳ ಪರಿಸ್ಥಿತಿ.?. ಆದ್ರೆ ಅವಳು ಅಷ್ಟು ದೂರದಲ್ಲಿ ಒಂದೇ ದಿನಕ್ಕೆ ಹೋಗಿ ಬಂದು ಮನೆಯಲ್ಲಿ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾಳೆ ಅಂದ್ರೆ ನಿಜಕ್ಕೂ ನಂಬಲೇಬೇಕು. ಅಲ್ದೆ ಆ ಮಹಿಳೆ ದೂರದ ಪ್ರಯಾಣ ಮಾಡುತ್ತಿದ್ದರೂ ಸಹ ಹಣ ಉಳಿತಾಯ ಮಾಡ್ತಾರಂದ್ರೆ ನಿಜಕ್ಕೂ ಅಚ್ಚರಿ ಅಲ್ವಾ.. ಅಷ್ಟಕ್ಕೂ ಯಾರು ಆ ಮಹಿಳೆ, ಅವಳು ಮಾಡುತ್ತಿರೋ ಕೆಲಸವಾದ್ರು ಏನು..? ಅವಳು ಉಳಿತಾಯ ಮಾಡ್ತಿರೋ ಹಣವೆಷ್ಟು..? ಅನ್ನೋದರ ಕುರಿತ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ.
ಎಸ್.. ಈ ದಿನನಿತ್ಯದ ಬದುಕಿನ ಜಂಜಾಟದಲ್ಲಿ ಆಫೀಸ್ಸು, ಮನೆ ಮತ್ತು ಟ್ರಾಫಿಕ್ ಈ ಮೂರರ ನಡುವೆಯೇ ಬಹುತೇಕ ಜನರು ತಮ್ಮ ದಿನಗಳನ್ನ ಕಳೆಯುತ್ತಿದ್ದಾರೆ. ಅಲ್ದೆ ಕೆಲಸ.. ಕೆಲಸ.. ಅಂತ ಬೆಳಿಗ್ಗೆ ಮನೆಯಿಂದ ಆಫೀಸ್ಸಿಗೆ ಬಂದಿದ್ದೆ ಬಂದಿದ್ದು.. ಮತ್ತೆ ವಾಪಸ್ ಮನೆಗೆ ಹೋಗೋದು ರಾತ್ರಿ ಹೊತ್ತಿಗೆನೇ ಅನ್ನೋದು ಎಲ್ಲರಿಗೂ ರೂಢಿಯಾಗಿ ಬಿಟ್ಟಿದೆ. ಆದರೆ ಇದನ್ನೆಲ್ಲವನ್ನ ಮೀರಿಯೂ ಬರೊಬ್ಬರಿ 700 ಕಿಲೋ ಮೀಟರ್ ಒಂದು ದಿನಕ್ಕೆ ಪ್ರಯಾಣಿಸಿ ಕಚೇರಿ ಕೆಲಸಗಳಲ್ಲಿ ಭಾಗಿಯಾಗಿ ಮತ್ತೆ ಪುನಃ ಮನೆಗೆ ಬಂದು ಮಕ್ಕಳ ಜೊತೆ ಸಮಯ ಕಳೆಯಲು ಸಾಧ್ಯ ಅಂತ ಭಾರತೀಯ ಮೂಲದ ರೇಚೆರ್ ಕೌರ್ ಎನ್ನುವ ಮಹಿಳೆ ತೋರಿಸುವ ಮೂಲಕ ಸೂಪರ್ ವುಮೆನ್ ಆಗಿದ್ದಾರೆ. ಅಲ್ದೆ ಈ ದೂರದ ಪ್ರಯಾಣದಿಂದ ತಾನು ಹಣವನ್ನ ಉಳಿಸುತ್ತಿರುವುದಾಗಿ ರೇಚೆರ್ ಮಾಹಿತಿ ನೀಡಿದ್ದಾರೆ.
ದಿನಂಪ್ರತಿ ಕಚೇರಿಗೆ ಈ ಸೂಪರ್ ವುಮೆನ್ ವಿಮಾನ ಪ್ರಯಾಣ..
ಫ್ಲೈಟ್ ಜರ್ನಿಯಿಂದ ಮಹಿಳೆಗೆ ಸಾವಿರಾರು ರೂಪಾಯಿ ಉಳಿಕೆ..
ಇನ್ನೂ ಈ ಮಹಿಳೆಯ ಕುಟುಂಬವು ಪ್ರಸ್ತುತ ಮಲೇಷ್ಯಾದ ಪೆನಾಂಗ್‌ನಲ್ಲಿ ವಾಸಿಸುತ್ತಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ತಮ್ಮ ವಿದ್ಯಾಭ್ಯಾಸದ ಬಳಿಕ ಅವರು ಏರ್ ಏಷ್ಯಾ ಏರ್ಲೈನ್ಸ್ನಲ್ಲಿ ಕೆಲಸ ಆರಂಭಿಸಿದ್ದಾರೆ.
ಆದರೆ ಇವರು ವಾಸಿಸುವ ಸ್ಥಳ ಪೆನಾಂಗ್‌ನಿಂದ, ಕೌಲಾಲಂಪೂರದಲ್ಲಿರುವ ತಮ್ಮ ಕಚೇರಿಗೆ ಹೋಗಿ ಕೆಲಸ ಮಾಡುವುದು ತೀರ ಕಷ್ಟಕರವಾಗಿರುತ್ತಿತ್ತು. ಅಲ್ದೆ ಅದರಲ್ಲೂ ಮಕ್ಕಳನ್ನಷ್ಟೇ ಬಿಟ್ಟು ದಿನಾಲೂ ನೂರಾರು ಕಿಲೋ ಮೀಟರ್ ಪ್ರಯಾಣ ಅದು ಹೇಗೆ ಸಾಧ್ಯ..? ಇನ್ನೂ ಕುಟುಂಬದ ನಿರ್ವಹಣೆಗಾಗಿ ದುಡಿಮೆಯು ಅನಿವಾರ್ಯ, ಹೀಗಿದ್ದ ಸಮಯದಲ್ಲಿ ಸಿಕ್ಕ ಕೆಲಸ ಬಿಟ್ಟರೆ ಮುಂದೇನು ಅನ್ನೋ ದೊಡ್ಡ ಪ್ರಶ್ನೆ.. ಇಂಥ ಕಠಿಣ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ತೋಚದೆ ಕೌರ್ ಅವರಿಗೆ ಈ ಸಮಸ್ಯೆ ನುಂಗಲಾರದ ತುಪ್ಪವಾಗಿ ಪರಿಣಮಿಸಿತ್ತು. ಅಲ್ದೆ ಬೆಳಿಗ್ಗೆ ಬೇಗ 4 ಗಂಟೆಗೆ ಎದ್ದು, 5 ಗಂಟೆಯಷ್ಟರಲ್ಲಿ ರೆಡಿಯಾಗಬೇಕು. ನಂತರ 6.30ಕ್ಕೆ ವಿಮಾನ ಹತ್ತಬೇಕಾದ ಸ್ಥಿತಿ ರೇಚೆಲ್ ಕೌರ್ ಅವರದ್ದಾಗಿತ್ತು.
ಜಾಗತಿಕ ಮಟ್ಟದಲ್ಲಿ ಸುದ್ದಿಯಾದ ಭಾರತದ ಮಹಿಳೆ..
ಮಕ್ಕಳಿಗಾಗಿ ತಾಯಿ ಮಾಡಿದ ತ್ಯಾಗಕ್ಕೆ ನೆಟ್ಟಿಗರ ಮೆಚ್ಚುಗೆ..
ಬಳಿಕ ಹೇಗಾದರೂ ಮಾಡಿ ಬದುಕಿನ ಬಂಡಿ ಸಾಗಿಸಬೇಕಲ್ವಾ..? ಅದರಲ್ಲೂ ಮಕ್ಕಳಿದ್ದಾವೆ ಅವರ ಪೋಷಣೆಗಾಗಿಯೂ ಹಣದ ಅವಶ್ಯಕತೆ ಇದೆ ಅನ್ನೋದನ್ನ ಗಂಭೀರವಾಗಿ ಪರಿಗಣಿಸಿ ಅನಿವಾರ್ಯವಾಗಿ ವಿಮಾನ ಪ್ರಯಾಣದ ಮೊರೆ ಹೋಗುತ್ತಾರೆ ಈ ರೇಚೆಲ್. ಅಲ್ದೆ ಇದಕ್ಕೂ ಮುನ್ನ 354 ಕಿಲೋ ಮೀಟರ್ ದೂರದ ಪ್ರಯಾಣ ಕಷ್ಟ ಅಂತ ಆರಂಭದಲ್ಲಿ ಕೌಲಾಲಂಪೂರದಲ್ಲಿನ ಕಚೇರಿಯ ಬಳಿಯೇ ಒಂದು ಬಾಡಿಗೆ ಕೋಣೆ ಮಾಡಿ ಅಲ್ಲಿಯೇ ಉಳಿದುಕೊಳ್ಳುತ್ತಿದ್ದೆ. ಈ ಅವಧಿಯಲ್ಲಿ ವಾರಕ್ಕೆ ಒಂದು ದಿನ ಬಂದು ಮಕ್ಕಳ ಜೊತೆ ಸಮಯ ಕಳೆಯುತ್ತಿದ್ದೆ. ಆದರೆ ದಿನಕಳೆದಂತೆ ಒಂದೊಂದು ಜವಾಬ್ದಾರಿಗಳು ಹೆಚ್ಚಾಗುತ್ತಾ ಹೋದವು. ಅಲ್ದೆ ಮಕ್ಕಳ ಪರೀಕ್ಷೆಗಳ ಸಮಯದಲ್ಲಿ ಅವರೊಂದಿಗೆ ಸಮಯ ನೀಡಿ ಅವರ ನೋವಿನ ಜೊತೆಗೆ ನನ್ನ ಒತ್ತಡವನ್ನ ದೂರಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದೆ. ಇದಕ್ಕೆ ಅನುಗುಣವಾಗಿ ಸೂಕ್ತ ಪ್ಲಾನ್ ಮಾಡಿದೆ. ಅದರಂತೆ ದಿನಾಲೂ ವಿಮಾನದಲ್ಲಿಯೇ ಕಚೇರಿಗೆ ಹೋಗಿ ಬಂದು ಮನೆಯಲ್ಲಿಯೂ ದಿನನಿತ್ಯದ ಕೆಲಸಗಳನ್ನ ಮಾಡಿಕೊಂಡು, ಮಕ್ಕಳ ಜೊತೆ ಬೆರೆತು ಹೋಗುವುದನ್ನ ರೂಢಿ ಮಾಡಿಕೊಂಡೆ. ಈಗ ಅದನ್ನೇ ಮುಂದುವರೆಸಿದ್ದೇನೆ ಎಂದು ರೇಚೆಲ್ ಕೌರ್ ತಿಳಿಸಿದ್ದಾರೆ.
ಇನ್ನೂ ಇದಕ್ಕೂ ಮುನ್ನ ನಾನು ನೀಡುತ್ತಿದ್ದ ಬಾಡಿಗೆಯ ಹಣವೂ ಉಳಿತಾಯವಾಗುತ್ತಿದೆ. ಆಗ ವಿಮಾನ ಟಿಕೆಟ್, ಕೊಠಡಿ ಬಾಡಿಗೆ ಸೇರಿದಂತೆ ಊಟಕ್ಕಾಗಿ ತಿಂಗಳಿಗೆ ಖರ್ಚು ಮಾಡುತ್ತಿದ್ದ ಸುಮಾರು 41 ಸಾವಿರ ರೂಪಾಯಿಗಳಲ್ಲಿ, ಈಗ ಕೇವಲ 27 ಸಾವಿರ ರೂಪಾಯಿಗಳನ್ನ ಖರ್ಚು ಮಾಡುತ್ತಿರುವೆ ಎಂದು ರೇಚೆಲ್ ಕೌರ್ ತಮ್ಮ ಫ್ಲೈಟ್ ಜರ್ನಿಯ ಕುರಿತು ಬಹಳ ಸೊಗಸಾಗಿ ಹೇಳಿದ್ದಾರೆ. ಅಲ್ದೆ ಘಟನೆಯ ಬಗ್ಗೆ ನೆಟ್ಟಿಗರು ರೇಚೆಲ್ ಕೌರ್ ಅವರ ಬದ್ದತೆಯನ್ನ ಮೆಚ್ಚಿ ಒಳ್ಳೆಯ ಛಲಗಾತಿ ಅಂತಲೂ ಕರೆಯುತ್ತಿದ್ದಾರೆ.
ಇನ್ನೂ ಈ ವಿಚಾರ ಇದೀಗ ಎಲ್ಲೆಡೆ ಭಾರಿ ಚರ್ಚೆಯಲ್ಲಿದ್ದು, ರೇಚೆಲ್ ಅವರ ಮಾತೃ ವಾತ್ಸಲ್ಯ ಹಾಗೂ ಕುಟುಂಬ ನಿರ್ವಹಣೆಯ ಕುರಿತ ಅವರ ದೃಢ ನಿಲುವಿನ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಟ್ನಲ್ಲಿ…. ಪ್ರಸ್ತುತ ಸಮಾಜದಲ್ಲಿ ಹೆತ್ತ ಹಸುಳೆಗಳನ್ನೇ ತಾಯಿಯು ಬೀದಿಪಾಲು ಮಾಡಿ , ಅನಾಥವಾಗಿ ಬಿಟ್ಟು ಹೋಗಿರುವ ಅದೆಷ್ಟೋ ಘಟನೆಗಳನ್ನ ನೋಡುತ್ತಿರುತ್ತೇವೆ, ಕೇಳಿದ್ದೇವೆ. ಆದರೆ ಇದಕ್ಕೆಲ್ಲ ಅನ್ವರ್ಥ ಎನ್ನುವಂತೆ ಈ ರೇಚಲ್ ತನ್ನ ಮಕ್ಕಳಿಗಾಗಿ ತೆಗೆದುಕೊಂಡ ನಿರ್ಧಾರಕ್ಕೆ ನಿಜಕ್ಕೂ ಸೆಲ್ಯೂಟ್ ಹೇಳಲೇಬೇಕು. ತನ್ನ ಮಕ್ಕಳಿಗಾಗಿ ಸದಾ ಕಾಲ ಮಿಡಿಯುವ ಇವರು ಅಕ್ಷರಶಃ ಮಹಾತಾಯಿಯೇ ಅಂದ್ರೆ ತಪ್ಪಾಗಲಾರದು..