ರಾಜ್ಯದಲ್ಲಿ ಹೆಚ್ಚಿದ ಹಕ್ಕಿ ಜ್ವರ ಭೀತಿ..! ಚಿಕ್ಕಬಳ್ಳಾಪುರ, ಬಳ್ಳಾರಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ..

News: ರಾಜ್ಯಾದ್ಯಂತ ಹಕ್ಕಿ ಜ್ವರ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇದೀಗ ಆರೋಗ್ಯ ಇಲಾಖೆ ಅಗತ್ಯವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅಲ್ಲದೆ ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ಕಡ್ಡಾಯವಾಗಿ ಹಕ್ಕಿ ಜ್ಬರ ಪೀಡಿತ ಎಲ್ಲ ಜಿಲ್ಲೆಗಳಲ್ಲೂ ಈ ಸೂಚನೆಗಳ ಪಾಲನೆಯಾಗಬೇಕೆಂದು ಹೇಳಿದೆ. ಇದರ ಅನ್ವಯದಂತೆ ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರದಲ್ಲಿ ಹಕ್ಕಿ ಜ್ವರ ಹರಡಿರುವ ಹಿನ್ನೆಲೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಭೂಪಾಲ್‌ನ ಎನ್‌ಐಎಚ್‌ಎಸ್‌ಎಡಿ ಅಂದ್ರೆ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೈ ಸೆಕ್ಯುರಿಟಿ ಆನಿಮಲ್‌ ಡಿಸೀಸಸ್‌ ಲ್ಯಾಬ್‌ನ ವರದಿಯಲ್ಲಿ ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕೋಳಿಜ್ವರ ಪತ್ತೆಯಾಗಿರುವುದು ದೃಢಪಟ್ಟಿದೆ. ಈ ವರದಿಯ ಬಳಿಕ ವೈಜ್ಞಾನಿಕವಾಗಿ 2,400 ಕೋಳಿಗಳನ್ನು ವಿಲೇವಾರಿ ಮಾಡಲಾಗಿದೆ.

ಆರೋಗ್ಯ ಇಲಾಖೆ ಮಾರ್ಗಸೂಚಿ ಏನಿದೆ..?

ಅಲ್ಲದೆ ಹಕ್ಕಿ ಜ್ವರ ಪತ್ತೆಯಾದ ಒಂದು ಕಿಲೋ ಮೀಟರ್‌ ವ್ಯಾಪ್ತಿಯಲ್ಲಿರುವ ಎಲ್ಲ ಫಾರಂಗಳಲ್ಲಿನ ಕೋಳಿಗಳನ್ನು ಕೊಂದು ಹೂಳುವಂತೆ ಆರೋಗ್ಯ ಇಲಾಖೆಯ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಇನ್ನೂ ರಾಜ್ಯದ ಯಾವುದೇ ಭಾಗದಲ್ಲೂಈ ಹಕ್ಕಿಜ್ವರ ಪತ್ತೆಯಾದರೆ ಈ ಮಾರ್ಗಸೂಚಿಯನ್ವಯ ಕ್ರಮ ಕೈಗೊಳ್ಳುವ ಕುರಿತು ಉಲ್ಲೇಖಿಸಲಾಗಿದೆ. ಅಲ್ಲದೆ ಕೋಳಿಫಾರಂ ಸುತ್ತಲಿನ 3 ಕಿಲೋ ಮೀಟರ್‌ ವ್ಯಾಪ್ತಿಯನ್ನು ಸೋಂಕಿತ ಪ್ರದೇಶವೆಂದು ಗುರುತು ಮಾಡಬೇಕು. ಹಕ್ಕಿ ಜ್ವರ ಕಂಡು ಬಂದ 10 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಪೌಲ್ಟ್ರಿ ಹಾಗೂ ಮೊಟ್ಟೆಯ ಅಂಗಡಿಯನ್ನು ಬಂದ್‌ ಮಾಡಿಸಬೇಕು. ಈ ವೇಳೆ ಕಾರ್ಮಿಕರು ಪಿಪಿಪಿ ಧಿರಿಸು ತೊಟ್ಟಿರಬೇಕು. ಕೋಳಿ ಕೊಂದ ಕಾರ್ಮಿಕರು ಮುಂದಿನ 10 ದಿನಗಳ ಕಾಲ ಐಸೋಲೇಟ್‌ ಆಗಿರಬೇಕು. ಪ್ರಮುಖವಾಗಿ ಯಾವುದೇ ರೀತಿಯ ಜ್ವರ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಆರೋಗ್ಯ ಇಲಾಖೆ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಇನ್ನೂ ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಜಿಲ್ಲೆಯಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಹಕ್ಕಿ ಜ್ವರವು ಹೆಚ್5ಎನ್1 ವೈರಸ್‌ನಿಂದ ಪಕ್ಷಿಗಳಿಗೆ ಹರಡುವ ಖಾಯಿಲೆಯಾಗಿದ್ದು, ಮನುಷ್ಯರಿಂದ ಮನುಷ್ಯರಿಗೆ ಸಾಂಕ್ರಮಿಕವಾಗಿ ಹರಡುವುದಿಲ್ಲ. ಹಾಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಸಾಮಾನ್ಯವಾಗಿ ಶೀತಲ ಪ್ರದೇಶದ ವಲಸೆ ಹಕ್ಕಿಗಳು ವಂಶಾಭಿವೃದ್ಧಿಗಾಗಿ ಬಂದಾಗ ಹಿಕ್ಕೆ, ಪುಕ್ಕ ಹಾಗೂ ಬಾಯಿ ಮತ್ತು ಕಣ್ಣಿನಿಂದ ಹೊರ ಬರುವ ಸ್ರವಿಕೆಯಿಂದ ಕಾಯಿಲೆ ಹರಡು ಸಂಭವವಿದ್ದು, ಇದು ಪಕ್ಷಿಗಳಿಗೆ ರೋಗವು ಹರಡುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಅಲ್ಲದೆ ಹಕ್ಕಿ ಜ್ವರದ ಹಿನ್ನೆಲೆ ಸಾರ್ವಜನಿಕರು ಮಾಂಸ ಮತ್ತು ಮೊಟ್ಟೆಗಳನ್ನು 70 ಡಿಗ್ರಿಗೂ ಅಧಿಕ ಉಷ್ಣಾಂಶದಲ್ಲಿ 30 ನಿಮಿಷಕ್ಕೂ ಹೆಚ್ಚು ಚೆನ್ನಾಗಿ ಬೇಯಿಸುವ ಮೂಲಕ ಸೇವಿಸಬೇಕು. ಇದರಿಂದ ವೈರಾಣುಗಳು ನಾಶವಾಗುತ್ತವೆ. ಈ ಹಿನ್ನೆಲೆಯಲ್ಲಿ ಬೇಯಿಸಿದ ಆಹಾರವನ್ನು ಸೇವಿಸಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಏನಿದು ಹಕ್ಕಿ ಜ್ವರ..?

ಹಕ್ಕಿ ಜ್ವರವನ್ನು ಏವಿಯನ್ ಇನ್ಫ್ಲುಯೆನ್ಸ ಎಂದು ಕರೆಯುತ್ತಾರೆ, ಇದು ಮುಖ್ಯವಾಗಿ ಪಕ್ಷಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಅದು ಮನುಷ್ಯರಿಗೂ ಹರಡಬಹುದು ಎನ್ನುವ ಭಯವಿದೆ. ಅಲ್ಲದೆ ಹೆಚ್ಚಾಗಿ ಕೋಳಿಗಳು, ಬಾತುಕೋಳಿಗಳು ಮತ್ತು ಇತರ ಕೋಳಿಗಳಂತಹ ಪಕ್ಷಿಗಳ ಮೇಲೆ ಪರಿಣಾಮ ಬೀರುತ್ತದೆ. ವೈರಸ್‌ನ H5N1 ತಳಿಯು ಅಪರೂಪದ ಸಂದರ್ಭಗಳಲ್ಲಿ, ವಿಶೇಷವಾಗಿ ಜನರು ಪಕ್ಷಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುವ ಸ್ಥಳಗಳಲ್ಲಿ ಮನುಷ್ಯರಿಗೆ ಹರಡುತ್ತದೆ ಎಂದು ತಿಳಿದುಬಂದಿದೆ.

About The Author