Thursday, October 30, 2025

Latest Posts

ಹೈಕೋರ್ಟ್‌ ಆದೇಶದ ನಕಲಿ ಪ್ರತಿ ಸೃಷ್ಟಿಸಿ ಯುವತಿಗೆ ಮಕ್ಮಲ್‌ ಟೋಪಿ.. ಆರೋಪಿಗಳು ಅರೆಸ್ಟ್

- Advertisement -

Bengaluru News: ಹೈಕೋರ್ಟ್‌ ನ್ಯಾಯಾಧೀಶರ ಹೆಸರಿನಲ್ಲಿ ನಕಲಿ ಆದೇಶ ಪ್ರತಿ ಸಿದ್ದಪಡಿಸಿ ಬರೊಬ್ಬರಿ 1.5 ಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ಯುವತಿ ಸೇರಿದಂತೆ ನಾಲ್ವರಿಗೆ ವಂಚಿಸಿರುವ ಖದೀಮರನ್ನು ವಿಧಾನಸೌಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಇನ್ನೂ ಈ ಪ್ರಕರಣದಲ್ಲಿ ತುಮಕೂರಿನ ಕುಣಿಗಲ್‌ ಸಮೀಪದ ಕೆಆರ್‌ಎಸ್‌ ಅಗ್ರಹಾರ ನಿವಾಸಿ 32 ವರ್ಷದ ವಿಜೇತ್‌ ರಾಜೇಗೌಡ ಹಾಗೂ ನೆಲಮಂಗಲ ತಾಲೂಕಿನ ಚಿನ್ನಮಂಗಲದ ನಿವಾಸಿ 30 ವರ್ಷದ ಲೋಹಿತ್‌ ಬಂಧಿತ ಆರೋಪಿಗಳಾಗಿದ್ದಾರೆ. ಅಲ್ಲದೆ ಹೈಕೋರ್ಟ್‌ನ ಕಾನೂನು ಸೆಲ್‌ನ ಜಂಟಿ ರಿಜಿಸ್ಟ್ರಾರ್‌ ಆಗಿರುವ ಎಂ ರಾಜೇಶ್ವರಿ ಅವರು ನೀಡಿರುವ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುವಲ್ಲಿ ಪೊಲೀಸರು ಸಫಲರಾಗಿದ್ದಾರೆ.

ಇನ್ನೂ ಐಟಿಐ ವ್ಯಾಸಂಗ ಮಾಡುತ್ತಿರುವ ಲೋಹಿತ್‌ ಹಾಗೂ ಡಿಪ್ಲೋಮಾ ಓದುತ್ತಿರುವ ವಿಜೇತ್‌ ಇಬ್ಬರೂ ಆರೋಪಿಗಳು ಸೇರಿಕೊಂಡು ಹೈಕೋರ್ಟ್‌ ಆದೇಶಗಳನ್ನು ನಕಲು ಮಾಡಿ ಯುವತಿ ಸೇರಿ ನಾಲ್ವರು ಎಂಜಿನಿಯರ್‌ಗಳಿಗೆ ಕಳುಹಿಸಿ 1.5 ಕೋಟಿ ರೂಪಾಯಿಗಳನ್ನು ಪಡೆದು ವಂಚನೆ ಮಾಡಿದ್ದರು. ಅಲ್ಲದೆ ಪ್ರಮುಖ ಆರೋಪಿ ವಿಜೇತ್‌ನಿಗೆ, ಲೋಹಿತ್‌ ಈ ವಂಚನೆ ಕೃತ್ಯಕ್ಕೆ ಸಹಕರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇನ್ನೂ ಮ್ಯಾಟ್ರಿಮೊನಿಯಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ ಲೋಹಿತ್‌ ತನ್ನ ವೆಬ್ ಸೈಟ್‌ ಪ್ರೊಪೈಲ್‌ನಲ್ಲಿ ತಾನೊಬ್ಬ ಸಾಫ್ಟ್‌ವೇರ್ ಎಂಜಿನಿಯರ್‌ ಒಂದು ಬರೆದುಕೊಂಡಿದ್ದ. ಇದನ್ನು ಗಮನಿಸಿದ್ದ ಯುವತಿಯೊಬ್ಬಳು ಅವನನ್ನು ಮದುವೆಯಾಗಲು ಆಸಕ್ತಿ ತೋರಿದ್ದಳು. ಅಲ್ಲದೆ ಇಬ್ಬರು ಪರಸ್ಪರ ಮೊಬೈಲ್‌ ನಂಬರ್‌ ವಿನಿಮಯ ಮಾಡಿಕೊಂಡು ಫೋನ್‌ನಲ್ಲಿ ಮಾತನಾಡುತ್ತಿದ್ದರು.

ಇಡಿ ದಾಳಿಯ ನಾಟಕವಾಡಿದ್ದ ವಂಚಕ..!

ಅಂದಹಾಗೆ, ನನ್ನ ಮೇಲೆ ಇಡಿ ಅಧಿಕಾರಿಗಳು ಈ ಹಿಂದೆ ದಾಳಿ ಮಾಡುವ ಮೂಲಕ 1.50 ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿರುವ ಹೈಕೋರ್ಟ್‌, ಇಡಿ ನಡೆಸಿರುವ ದಾಳಿಯಲ್ಲಿ ಯಾವುದೇ ಹುರುಳಿಲ್ಲ, ಕೂಡಲೇ ಹಣವನ್ನು ವಾಪಸ್‌ ನೀಡುವಂತೆ ಆದೇಶ ಮಾಡಿದೆ. ಅಲ್ಲದೆ ಅನವಶ್ಯಕವಾಗಿ ದಾಳಿ ನಡೆಸಿರುವ ಇಡಿ ಅಧಿಕಾರಿಗಳಿಗೆ ದಂಡ ವಿಧಿಸಿದೆ. ಇನ್ನೂ ಈ ಹಣವು ಸದ್ಯದಲ್ಲೇ ನನ್ನ ಖಾತೆಗೆ ಬರಲಿದೆ. ಅಲ್ಲಿಯವರೆಗೆ ಕೆಲ ತಿಂಗಳು ಹಣದ ಅವಶ್ಯಕತೆ ಇದೆ ಎಂದು ಇನ್ನೊಬ್ಬ ಆರೋಪಿಯಾಗಿರುವ ವಿಜೇತ್‌ ಕಟ್ಟು ಕಥೆ ಹೆಣೆದಿದ್ದಾನೆ.

ಈ ಮಾತನ್ನು ನಂಬಿದ್ದ ಯುವತಿಯು ವಿಜೇತ್‌ ಖಾತೆಗೆ 50 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ವರ್ಗಾಯಿಸಿದ್ದಾರೆ. ಅಲ್ಲದೆ ಇಷ್ಟಕ್ಕೆ ಸುಮ್ಮನಾಗದ ಆರೋಪಿಯು ಪರಿಚಯಸ್ಥರ ಮೂಲಕ ತನ್ನ ಖಾತೆಗೆ ಇನ್ನಷ್ಟು ಹಣ ಹಾಕಿಸುವಂತೆ ಬೇಡಿಕೆ ಇಟ್ಟಿದ್ದಾನೆ. ಇದಕ್ಕೆ ಮರುಳಾಗಿ ಮತ್ತೆ ಯುವತಿ ತನಗೆ ಪರಿಚಯವಿದ್ದ ಮೂರು ಎಂಜಿನಿಯರ್‌ಗಳ ಬಳಿಯಿಂದ 1 ಕೋಟಿ ರೂಪಾಯಿ ಸಾಲಮಾಡಿ ಒಟ್ಟು 1.50 ಕೋಟಿ ರೂಪಾಯಿ ಆತನಿಗೆ ನೀಡಿದ್ದಾರೆ. ಹಣ ಪಡೆದ ಬಳಿಕ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿದ್ದಾನೆ. ವಂಚನೆಯ ಅನುಮಾನ ಬಂದ ಬಳಿಕ ಯುವತಿ ಹೈಕೋರ್ಟ್‌ನ ಲೀಗಲ್‌ ಸೆಲ್‌ನ ರಿಜಿಸ್ಟ್ರಾರ್‌ ಅವರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

- Advertisement -

Latest Posts

Don't Miss