Tuesday, March 11, 2025

Latest Posts

ಕಳ್ಳತನದ ಲಿಸ್ಟ್‌ಗೆ ಹೊಸದೊಂದು ಸೇರ್ಪಡೆ.. ಬರೊಬ್ಬರಿ 70 ಲಕ್ಷದ ತಲೆಗೂದಲು ಕದ್ದ ಖದೀಮರು..

- Advertisement -

Bengaluru News: ಸಾಮಾನ್ಯವಾಗಿ ಹಣ, ಒಡವೆ, ಬೈಕ್‌ ಇಂತಹ ವಸ್ತುಗಳನ್ನು ಕಳವು ಮಾಡಿರುವ ಅದೆಷ್ಟೋ ಪ್ರಕರಣಗಳನ್ನು ನೋಡಿರುತ್ತೇವೆ. ಆದರೆ ಬೆಂಗಳೂರಿನ ಸೋಲದೇವನಹಳ್ಳಿಯಲ್ಲೊಂದು ವಿಚಿತ್ರ ಪ್ರಕರಣ ನಡೆದಿದ್ದು, ತಲೆಗೂದಲನ್ನೂ ಸಹ ಬಿಡದೆ ಖರ್ತನಾಕ್‌ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ಸುಮಾರು 10 ವರ್ಷಗಳಿಂದ ಇಲ್ಲಿನ ಸ್ಥಳೀಯ ನಿವಾಸಿ ವೆಂಕಟಸ್ವಾಮಿ ಎನ್ನುವವರು ಕೂದಲು ವ್ಯಾಪಾರ ಮಾಡುತ್ತಿದ್ದಾರೆ. ಅಲ್ಲದೆ ಅವರು ಹೆಸರುಘಟ್ಟದ ಸುತ್ತಮುತ್ತಲಿನ ಗ್ರಾಮಗಳ ಜನರಿಂದ ಕೂದಲನ್ನು ಕಳೆದ ಫೆಬ್ರವರಿ 28ರಂದು ಖರೀದಿಸಿದ್ದರು. ಇನ್ನೂ ವಿದೇಶಕ್ಕೆ ರವಾನೆ ಮಾಡುವ ಸಲುವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಈ ತಲೆಗೂದಲನ್ನು ತಮ್ಮ ಗೋದಾಮಿನಲ್ಲಿ ದಾಸ್ತಾನು ಮಾಡಿದ್ದರು. ಬಳಿಕ ಎಂದಿನಂತೆ ಗೋದಾಮಿಗೆ ಬೀಗ ಹಾಕಿ ಮನೆಗೆ ಹೋಗಿದ್ದಾರೆ. ಇದನ್ನು ಗಮನಿಸಿದ್ದ ಕಳ್ಳರು ಅವರು ಹೋದ ಬಳಿಕ ಗೋದಾಮಿನ ಶಟರ್‌ ಮುರಿದು ಒಳಗೆ ನುಗ್ಗಿ ಎಲ್ಲ ತಲೆಗೂದಲನ್ನು ದೋಚಿದ್ದರು. ಬಳಿಕ ಈ ಕುರಿತು ವೆಂಕಟಸ್ವಾಮಿ ಪೊಲೀಸರಿಗೆ ದೂರು ನೀಡಿದ್ದರು.

ಇನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ತಮ್ಮ ವ್ಯವಹಾರ ನಡೆಸುತ್ತಿರುವ ವೆಂಕಟಸ್ವಾಮಿ ಅವರು ಹೈದರಾಬಾದ್‌ ಮೂಲಕ ಚೀನಾ, ಬರ್ಮಾ, ಹಾಂಕಾಂಗ್‌ ದೇಶಗಳಿಗೆ ಕೂದಲನ್ನು ರಪ್ತು ಮಾಡುತ್ತಿದ್ದರು. ಅಲ್ಲದೆ ಕಳ್ಳತನ ನಡೆಯುವ ನಾಲ್ಕೈದು ದಿನಗಳ ಮೊದಲು ವೆಂಕಟಸ್ವಾಮಿ ಗೋದಾಮಿಗೆ ಚೀನಾದ ವ್ಯಕ್ತಿಗಳು ಆಗಮಿಸಿ ವಿಗ್‌ ತಯಾರಿಕೆಗೆ ಕೂದಲನ್ನು ಕಳುಹಿಸಿಕೊಡುವಂತೆ ವ್ಯವಹಾರದ ಮಾತುಕತೆ ನಡೆಸಿ ಹೋಗಿದ್ದರು. ಈ ಹಿನ್ನೆಲೆಯಲ್ಲಿ 850ಕೆ.ಜಿ ಕೂದಲನ್ನು ತೂಕ ಮಾಡುವ ಮೂಲಕ ವೆಂಕಟಸ್ವಾಮಿ ಮೂಟೆಗಳಿಗೆ ತುಂಬಿಸಿ ಗೋದಾಮಿನಲ್ಲಿಟ್ಟಿದ್ದರು.

ಅಂದಹಾಗೆ ಹೀಗೆ ಸಂಗ್ರಹಿಸಿಟ್ಟಿದ್ದ ಕೂದಲನ್ನು ಮಾರ್ಚ್‌ 2ರಂದು ವಿದೇಶಗಳಿಗೆ ರಪ್ತು ಮಾಡಬೇಕಿತ್ತು. ಅಷ್ಟರಲ್ಲಿಯೇ ಕಳ್ಳರು ಈ ಕೃತ್ಯವನ್ನು ಎಸಗಿದ್ದಾರೆ. ಅಲ್ಲದೆ ಆರು ಮಂದಿ ಕಳ್ಳರು ಗೋದಾಮಿಗೆ ನುಗ್ಗಿ 27 ಮೂಟೆಗಳಲ್ಲಿ ತುಂಬಿಟ್ಟಿದ್ದ ಕೂದಲನ್ನು ಸರಕು ಸಾಗಾಟ ಮಾಡುವ ವಾಹನದಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಇನ್ನೂ ಈ ಕಳ್ಳತನದ ದೃಶ್ಯಗಳು ಅಕ್ಕಪಕ್ಕದ ಅಂಗಡಿಗಳ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಈ ದೃಶ್ಯಗಳ ಆಧಾರದಲ್ಲಿ ಕಳ್ಳರ ಪತ್ತೆ ಹಚ್ಚಲು ಮುಂದಾಗಿದ್ದೇವೆ. ಇಷ್ಟೇ ಅಲ್ಲದೆ ವೆಂಕಟಸ್ವಾಮಿ ಅವರಿಗೆ ತಲೆಗೂದಲನ್ನು ತಂದು ಕೊಡುತ್ತಿದ್ದ ಜನರೇ ಈ ಕಳ್ಳತನದಲ್ಲಿ ಭಾಗಿಯಾಗಿರುವ ಅನುಮಾನವಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಗ್‌ ತಯಾರಿಕೆಗೆ ಕೂದಲು ಬಳಕೆ..

ವೆಂಕಟಸ್ವಾಮಿ ಅವರು ದಾಸ್ತಾನು ಮಾಡಿಟ್ಟಿದ್ದ ತಲೆಗೂದಲಿನ ಬೆಲೆಯು ಕೆ.ಜಿ.ಗೆ 8 ಸಾವಿರ ರೂಪಾಯಿಗಳಷ್ಟಿತ್ತು.ಅಲ್ಲದೆ ಅವರು ರಪ್ತು ಮಾಡುತ್ತಿದ್ದ ಕೂದಲಿನಿಂದ ವಿದೇಶಗಳಲ್ಲಿ ಗುಣಮಟ್ಟದ ವಿಗ್‌ ತಯಾರಿಕೆ ಮಾಡಲಾಗುತ್ತಿದೆ. ಅಲ್ಲದೆ ಕಳ್ಳತನವಾಗಿರುವ ಕೂದಲಿನ ಮೌಲ್ಯವು ಸುಮಾರು 70 ಲಕ್ಷ ರೂಪಾಯಿ ಅಂತ ಅಂದಾಜಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ನಲ್ಲಿ.. ಸಮಾಜದಲ್ಲಿ ದಿನಂಪ್ರತಿ ನಡೆಯುವ ಕಳ್ಳತನದ ಪ್ರಕರಣಗಳಿಗೂ ಹಾಗೂ ಈ ಪ್ರಕರಣಕ್ಕೂ ಬಹಳಷ್ಟು ವ್ಯತ್ಯಾಸವಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕು. ಯಾಕೆಂದರೆ ನಾವು ತಲೆಗೂದಲಿನ ಬಗ್ಗೆ ಅಷ್ಟೊಂದು ಹೆಚ್ಚು ಗಮನ ಹರಿಸುವುದಿಲ್ಲ ಆದರೆ ಇದೇ ಕೂದಲನ್ನು ತನ್ನ ವೃತ್ತಿಯ ಭಾಗವಾಗಿಸಿಕೊಂಡಿದ್ದ ವೆಂಕಟಸ್ವಾಮಿ ಅವರ ಕ್ರಿಯಾಶೀಲತೆಯನ್ನು ನಾವಿಲ್ಲಿ ಮೆಚ್ಚಲೇಬೇಕು. ಅದೇನೆ ಇರಲಿ.. ಇಷ್ಟು ದಿನ ಕೇವಲ ಹಣ, ಚಿನ್ನ,ಕಾರು, ಬೈಕ್‌ಗಳ ಕಳ್ಳತನ ನಡೆಯುತ್ತಿತ್ತು, ಆದರೆ ಇದೀಗ ಈ ಸಾಲಿಗೆ ತಲೆಗೂದಲೂ ಸಹ ಸೇರಿಕೊಂಡಿದ್ದು ನಿಜಕ್ಕೂ ಶಾಕಿಂಗ್!..

- Advertisement -

Latest Posts

Don't Miss