Political News: ತಮ್ಮ ಕುಟುಂಬದ ವಿರುದ್ಧ ಅವಹೇಳಕಾರಿ ಪೋಸ್ಟ್ಗೆ ಸಂಬಂಧಿಸಿದಂತೆ ಇಬ್ಬರು ಮಹಿಳಾ ಪತ್ರಕರ್ತರ ಬಂಧನ ಬೆನ್ಲಲ್ಲೇ ಇದೀಗ ಸುಳ್ಳು ಸುದ್ದಿ ಹರಡುವವರ ವಿರುದ್ಧ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇನ್ನೂ ಪತ್ರಕರ್ತರ ಬಂಧನವನ್ನು ಸಮರ್ಥಿಸಿ ತೆಲಂಗಾಣದ ವಿಧಾನಸಭೆಯಲ್ಲಿ ಮಾತನಾಡಿರುವ ಅವರು, ಪತ್ರಕರ್ತರ ಸೋಗಿನಲ್ಲಿ ಜನಪ್ರತಿನಿಧಿಗಳ ಕುರಿತು ಆಕ್ಷೇಪಾರ್ಹ ಹಾಗೂ ಅವಹೇಳನಕಾರಿ ಪೋಸ್ಟ್ ಹಂಚಿಕೊಳ್ಳುವವರ ಬಟ್ಟೆ ಬಿಚ್ಚಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ ನನ್ನ ಕುಟುಂಬದ ಮಹಿಳೆಯರ ವಿಚಾರದಲ್ಲಿ ಅಸಭ್ಯವಾಗಿ ಮಾತನಾಡುವ ಹಕ್ಕು ಯಾರಿಗೂ ಇಲ್ಲ. ಅಂಥವರನ್ನು ಈ ಶಿಕ್ಷೆಗೆ ಗುರಿ ಪಡಿಸಲಾಗುವುದು ಎಂದು ಹೇಳಿದ್ದಾರೆ. ನಿಜವಾದ ಪತ್ರಕರ್ತ ಯಾರೂ ಎಂಬುದನ್ನು ಗುರುತಿಸಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಅದರ ಬಗ್ಗೆ ವ್ಯಾಖ್ಯಾನವನ್ನು ತಿಳಿದುಕೊಳ್ಳಬೇಕಾದ ಸಮಯ ಎದುರಾಗಿದೆ. ಇನ್ನೂ ಆನ್ಲೈನ್ನಲ್ಲಿ ಸುಳ್ಳು ಹಾಗೂ ಕೆಟ್ಟ ಪ್ರಚಾರಗಳನ್ನು ಮಾಡುವುದಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನುಗಳನ್ನು ತರಬೇಕಾಗಿದೆ ಎಂದು ರೇವಂತ್ ರೆಡ್ಡಿ ಪ್ರತಿಪಾದಿಸಿದ್ದಾರೆ. ಯಾರಾದರೂ ಕೂಡ ಯೂಟ್ಯೂಬ್ ಚಾನೆಲ್ ಓಪನ್ ಮಾಡಿ ತಮಗೆ ಇಷ್ಟವಾದದ್ದನ್ನು ಹೇಳುತ್ತಿದ್ದಾರೆ.
ಅಲ್ಲದೆ ನಮ್ಮ ಕುಟುಂಬ ಸದಸ್ಯರ ವಿರುದ್ಧ ಕೆಟ್ಟ ಭಾಷೆಯನ್ನು ಕೇಳಿದಾಗ ನನ್ನ ರಕ್ತ ಕುದಿಯುತ್ತಿದೆ. ನಾನು ಮುಖ್ಯಮಂತ್ರಿಯಾಗಿ ಹೇಳುತ್ತಿದ್ದೇನೆ, ಹೀಗೆ ಮಾಡುವ ಪ್ರತಿಯೊಬ್ಬರನ್ನೂ ನಾನು ವಿವಸ್ತ್ರಗೊಳಿಸಿ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತೇನೆ. ನಾವು ರಾಜಕೀಯ ಹಾಗೂ ಸಾರ್ವಜನಿಕ ಜೀವನದಲ್ಲಿರುವುದರಿಂದ, ನೀವು ನಮ್ಮ ಕೆಲಸಗಳನ್ನು ಟೀಕಿಸಬಹುದು ಮತ್ತು ವಿಶ್ಲೇಷಿಸಬಹುದು. ಆದರೆ ನಮ್ಮ ಕುಟುಂಬದ ಮಹಿಳೆಯರ ಮೇಲೆ ಏಕೆ ದಾಳಿ ಮಾಡಬೇಕು? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಕರ್ಮಾನೇ ಹೀಗೆ..
ಮುಖ್ಯಮಂತ್ರಿ ರೇವಂತ್ ರೆಡ್ಡಿಯವರ ಈ ಹೇಳಿಕೆಯು ಪ್ರತಿಪಕ್ಷ ಬಿಆರ್ಎಸ್ ಅನ್ನು ಕೆರಳುವಂತೆ ಮಾಡಿದ್ದು, ಈ ಹಿಂದೆ ನಮ್ಮ ಸರ್ಕಾರದ ವಿರುದ್ಧ ಕಂಟೆಂಟ್ ರಚಿಸುವಂತೆ ಯುಟ್ಯೂಬ್ ಪತ್ರಕರ್ತರನ್ನು ನೀವೇ ಬೆಂಬಲಿಸಿದ್ದೀರಿ. ಈ ಕರ್ಮ ಅನ್ನೋದೇ ಹೀಗೆ ನಮ್ಮ ಬಿಆರ್ಎಸ್ ನಾಯಕರ ವಿರುದ್ಧ ಅಸಹ್ಯಕರವಾಗಿ ಮಾತನಾಡುತ್ತಿದ್ದವರು ನೀವು. ಈಗ ನಿಮ್ಮ ಸಂಚೇ ನಿಮಗೆ ಮರಳಿ ಬಂದಿದೆ ಎಂದು ಶಾಸಕಿ ಕೆ. ಕವಿತಾ, ರೇವಂತ್ ರೆಡ್ಡಿಗೆ ಟಾಂಗ್ ನೀಡಿದ್ದಾರೆ. ಅಲ್ಲದೆ ತಮ್ಮ ನಿಂದನಾರ್ಹ ಮಾತುಗಳಿಂದಲೇ ಅಪಖ್ಯಾತಿ ಪಡೆದು ಅನರ್ಹರಾಗಿದ್ದ ಎಂಎಲ್ಸಿ ಚಿಂತಪಂಡು ನವೀನ್ ಅವರಂತಹ ಜನರನ್ನು ಬೆಂಬಲಿಸಿ ಈಗ ಬೂಟಾಟಿಕೆಯ ನಾಟಕ ನಡೆಸುತ್ತಿದ್ದೀರಿ ಎಂದು ಬಿಆರ್ಎಸ್ ಆರೋಪಿಸಿದೆ.
ರಾಜ್ಯ ಸರ್ಕಾರದ ವಿರುದ್ಧ ವಿಡಿಯೋ ಹಂಚಿಕೊಂಡಿದ್ದ ಪತ್ರಕರ್ತರು..
ತೆಲಂಗಾಣದ ಸರ್ಕಾರವು ರಾಜ್ಯದ ಅಭಿವೃದ್ದಿ ಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ, ರೈತನೊಬ್ಬ ರೇವಂತ್ ರೆಡ್ಡಿ, ಅವರ ತಾಯಿ ಮತ್ತು ತೆಲಂಗಾಣ ಕಾಂಗ್ರೆಸ್ ಅನ್ನು ನಿಂದಿಸುತ್ತಿರುವ ಕ್ಲಿಪ್ ಅನ್ನು ಹಂಚಿಕೊಂಡಿದ್ದಕ್ಕಾಗಿ ಹೈದರಾಬಾದ್ ಸೈಬರ್ ಅಪರಾಧ ವಿಭಾಗದ ಪೊಲೀಸರು ಇಬ್ಬರು ಪತ್ರಕರ್ತರನ್ನು ಬಂಧಿಸಿದ್ದರು.
ಒಟ್ನಲ್ಲಿ.. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯವಿದೆ. ಹಾಗಂತ ನಾವು ಮಾತನಾಡುವ ಒಂದೊಂದು ಮಾತಿನ ಮೇಲೂ ನಮಗೆ ಪರಿಜ್ಞಾನವಿರಬೇಕು. ಅಂದಹಾಗೆ ಮಾತಿನಲ್ಲಿ ಸ್ಪಷ್ಟ ನಿಲುವಿರಬೇಕು, ಅಲ್ಲದೆ ಇನ್ನೊಬ್ಬರ ಮನಸ್ಸಿಗೆ ನೋವಾಗುವಂತೆ ನಮ್ಮ ಮಾತು ಇರಬಾರದು ಅನ್ನೋದು ಸತ್ಯವಾಗಿದೆ. ಅಲ್ಲದೆ ಬಟ್ಟೆ ಬಿಚ್ಚಿ ಸಾರ್ವಜನಿಕವಾಗಿ ಮೆರವಣಿಗೆ ಮಾಡುತ್ತೇನೆ ಎಂಬ ರೇವಂತ್ ರೆಡ್ಡಿಯವರ ಈ ಮಾತಿನಲ್ಲಿ ಪ್ರಶ್ನಿಸೋ ಧ್ವನಿಗಳನ್ನು ಹತ್ತಿಕ್ಕುವ ವಿಚಾರವೂ ಅಡಗಿದೆ ಎನ್ನುವುದು ಸುಳ್ಳಲ್ಲ.. ಆದರೆ ಇದೇ ಒಂದು ವಿಚಾರವನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರು ಜನಪ್ರತಿನಿಧಿಗಳನ್ನು ಪ್ರಶ್ನಿಸದೇ ಇದ್ದರೆ ಅವರು ಮನಬಂದಂತೆ ಆಡಳಿತ ನಡೆಸಬಹುದು. ಯಾರೇ ಆಗಲಿ ಪ್ರಶ್ನಿಸುವವರು, ಟೀಕಿಸುವವರು ಮುಖ್ಯವಾಗಿ ರಚನಾತ್ಮಕ ಹಾಗೂ ವಸ್ತು ನಿಷ್ಠ ವಿಷಯಗಳ ಮೇಲೆ ಟೀಕೆ ಮಾಡಬಹುದು, ಖಂಡನೆ ವ್ಯಕ್ತಪಡಿಸಹುದು. ಆದರೆ ಅವುಗಳು ಆರೋಗ್ಯಕರವಾಗಿರಬೇಕಿರುವುದೂ ಸಹ ಅಷ್ಟೇ ಮುಖ್ಯವಾಗಿದೆ. ಅದೇನೆ ಇರಲಿ.. ಜಿಡ್ಡು ಗಟ್ಟಿದ ರಾಜಕೀಯ ವ್ಯವಸ್ಥೆಯಲ್ಲಿ ಅಭಿವೃದ್ದಿ ಹಾಗೂ ಜನ ಕಲ್ಯಾಣದಂತಹ ಕಾರ್ಯಗಳು ಮುಂದುವರೆಯಲು, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಈ ಪ್ರಶ್ನೆಗಳು, ಟೀಕೆ, ಟಿಪ್ಪಣಿಗಳು ಅನಿವಾರ್ಯ ಅನ್ನೋದನು ನಾವು ತಳ್ಳಿ ಹಾಕುವಂತಿಲ್ಲ..




