Friday, April 25, 2025

Latest Posts

ವೃದ್ದೆಯ ಅಕೌಂಟ್‌ಗೆ 5 ಲಕ್ಷ ಪಂಗನಾಮ ಹಾಕಿದ್ದ ಬ್ಯಾಂಕ್‌ ವ್ಯವಸ್ಥಾಪಕಿ ಆಂಡ್‌ ಟೀಂ ಅಂದರ್

- Advertisement -

Bengaluru News: ವೃದ್ದೆಯ ಖಾತೆಯಲ್ಲಿದ್ದ 50 ಲಕ್ಷ ರೂಪಾಯಿಗಳನ್ನು ಬ್ಯಾಂಕ್‌ನ ಡೆಪ್ಯುಟಿ ಮಾನೇಜರ್‌ ತನ್ನ ಸ್ನೇಹಿತನ ಖಾತೆಗೆ ವರ್ಗಾಯಿಸಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಗಿರಿನಗರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಗಿರಿನಗರ ಇಂಡಸ್‌ ಇಂಡ್‌ ಬ್ಯಾಂಕ್‌ನಲ್ಲಿ ಮೇಘನಾ ಎನ್ನುವ ಮಹಿಳೆ ಡೆಪ್ಯುಟಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದಳು. ಅಲ್ಲದೆ ಹಣವನ್ನು ಎಗರಿಸುವ ಉದ್ದೇಶದಿಂದ ವೃದ್ದೆಗೆ ಸುಳ್ಳು ಹೇಳಿ ನಂಬಿಸಲಾಗಿತ್ತು. ನಿಮ್ಮ ಅಕೌಂಟಿನಲ್ಲಿರುವ ನಿಶ್ಚಿತ ಠೇವಣಿ ಅಂದರೆ ಎಫ್‌ಡಿ ಬಾಂಡ್‌ ನವೀಕರಣ ಮಾಡಬೇಕಿದೆ ಎಂದು ವೃದ್ದೆ ಸಾವಿತ್ರಮ್ಮ ಅವರಿಂದ ಬ್ಯಾಂಕ್‌ ಮ್ಯಾನೇಜರ್‌ ಆರ್‌ಟಿಜಿಎಸ್‌ ಫಾರಂಗೆ ಮೇಘನಾ ಸಹಿ ಹಾಕಿಸಿಕೊಂಡಿದ್ದರು. ಇದಾದ ಬಳಿಕ ವೃದ್ದೆ ಸಾವಿತ್ರಮ್ಮ ಖಾತೆಯಲ್ಲಿದ್ದ 1 ಕೋಟಿ ರೂಪಾಯಿ ಹಣದಲ್ಲಿ ತನ್ನ ಸ್ನೇಹಿತನ ಖಾತೆಗೆ 50 ಲಕ್ಷ ರೂಪಾಯಿಗಳನ್ನು ವರ್ಗಾವಣೆ ಮಾಡಿಸಿಕೊಂಡು ಮೇಘನಾ ವಂಚಿಸಿದ್ದರು.

ಇನ್ನೂ ಈ ಕುರಿತು ಗಿರಿನಗರದ ನಿವಾಸಿಯಾಗಿರುವ 76 ವರ್ಷದ ಸಾವಿತ್ರಮ್ಮ ಅವರು ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಮೇಘನಾ, ಆಕೆಯ ಪತಿ ಶಿವಪ್ರಸಾದ್‌, ಸ್ನೇಹಿತರಾದ ವರದರಾಜು ಹಾಗೂ ಅನ್ವರ್‌ ಗೌಸ್‌ ಎನ್ನುವವರನ್ನು ಬಂಧಿಸಿದ್ದಾರೆ. ಅಲ್ಲದೆ ಆರೋಪಿಗಳಿಂದ 50 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆ ಮಾರಾಟದ ಹಣ ಖಾತೆಯಲ್ಲಿತ್ತು..

ಚಾಮರಾಜಪೇಟೆಯಲ್ಲಿ ವೃದ್ದೆ ಸಾವಿತ್ರಮ್ಮ ತಮಗೆ ಸೇರಿದ್ದ ಮನೆಯೊಂದನ್ನು ಕಳೆದ ಜನವರಿಯಲ್ಲಿ ಮಾರಾಟ ಮಾಡಿದ್ದರು. ಹೀಗಾಗಿ ಮನೆಯನ್ನು ಖರೀದಿಸಿರುವವರು 1 ಕೋಟಿ ರೂಪಾಯಿ ಹಣವನ್ನು ಸಾವಿತ್ರಮ್ಮ ದಂಪತಿಗಳ ಖಾತೆಗೆ ಜಮೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಮೇಘನಾ ಅವರಿಗೆ ಹಣ ಇರುವ ಗೊತ್ತಾಗಿತ್ತು. ಅಲ್ಲದೆ ಫೆಬ್ರವರಿ 12ರಂದು ಸಾವಿತ್ರಮ್ಮ ತಮ್ಮ ಮಗಳ ಜೊತೆಗೆ ಬ್ಯಾಂಕ್‌ಗೆ ಹೋಗಿದ್ದರು. ಈ ಸಮಯದಲ್ಲಿ ನಿಮ್ಮ ಎಫ್‌ಡಿ ಬಾಂಡ್‌ಗಳ ಅವಧಿಯು ಮುಗಿದಿದೆ. ಇದನ್ನು ಹಿಂಪಡೆದು ಹೊಸದಾಗಿ ಎಫ್‌ಡಿ ಠೇವಣಿ ಮಾಡಿದರೆ ಇನ್ನಷ್ಟು ಹೆಚ್ಚಿನ ಲಾಭ ಬರಲಿದೆ ಎಂದು ಮೇಘನಾ ಸಾವಿತ್ರಮ್ಮ ಅವರಿಗೆ ಹೇಳಿದ್ದರು.

ಅಲ್ಲದೆ ಇದಕ್ಕೆ ಬೇಕಾಗುವ ದಾಖಲೆ ಹಾಗೂ ಚೆಕ್‌ ಅನ್ನು ನಿಮ್ಮ ಮನೆಗೆ ಬಂದು ತೆಗೆದುಕೊಂಡು ಹೋಗುವುದಾಗಿ ತಿಳಿಸಿದ್ದರು.ಇದಾದ ಬಳಿಕ ಮರುದಿನ ಅಂದರೆ ಫೆಬ್ರವರಿ 13ರಂದು ಸಾವಿತ್ರಮ್ಮ ಅವರ ಮನೆಗೆ ಹೋಗಿದ್ದ ಮೇಘನಾ ಎಫ್‌ಡಿ ರಿನಿವಲ್‌ ಮಾಡುವ ನೆಪದಿಂದ ಆತುರದಲ್ಲಿ ಎರಡು ಚೆಕ್‌ಗಳನ್ನು ಪಡೆದಿದ್ದಲ್ಲದೆ, ಕೆಲ ದಾಖಲೆಗಳಿಗೆ ಸಹಿ ಹಾಕಿಸಿಕೊಂಡಿದ್ದರು. ಅಲ್ಲದೆ ಇದರಿಂದ ಹೆಚ್ಚಿನ ಲಾಭಾಂಶ ಬರುವ ಎಫ್‌ಡಿಗೆ ಹಣ ಹೂಡುವುದಾಗಿ ಹೇಳಿದ್ದರು ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ.

ನೀವು ಹೇಳಿದಂತೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ವಾದಿಸಿದ್ದ ಮೇಘನಾ..

ಇನ್ನೂ ಹಣ ಕಟ್‌ ಆಗಿರುವ ವಿಚಾರ ತಿಳಿದ ತಕ್ಷಣ ಬ್ಯಾಂಕ್‌ಗೆ ತೆರಳಿ ವಿಚಾರಣೆ ನಡೆಸಿದ್ದ ಸಾವಿತ್ರಮ್ಮ ಅವರಿಗೆ ಬ್ಯಾಂಕ್‌ ಮ್ಯಾನೇಜರ್‌ ಮೇಘನಾ, ನೀವು ಹೇಳಿರುವ ವ್ಯಕ್ತಿಯ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ. ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು ವಾದ ಮಾಡಿದ್ದರು. ಬಳಿಕ ಈ ಕುರಿತು ಪರಿಶೀಲನೆ ಮಾಡಿದಾಗ ಅನ್ವರ್‌ ಗೌಸ್‌ ಅಕೌಂಟಿಗೆ ಹಣ ಹೋಗಿರುವ ಮಾಹಿತಿ ತಿಳಿದು ಬಂದಿದೆ.

ಅಲ್ಲದೆ ವೃದ್ದೆಯಾಗಿರುವ ಕಾರಣಕ್ಕೆ ಬ್ಯಾಂಕ್‌ಗೆ ಬಂದಾಗೊಮ್ಮೆ ಸಾವಿತ್ರಮ್ಮ ಅವರು ಅಲ್ಲಿನ ಸಿಬ್ಬಂದಿಗಳ ನೆರವು ಪಡೆಯುತ್ತಿದ್ದರು. ಇನ್ನೂ ಸಾವಿತ್ರಮ್ಮ ಹಾಗೂ ಬಸವರಾಜಯ್ಯ ದಂಪತಿ ಇಬ್ಬರೂ ಜಂಟಿ ಖಾತೆಯನ್ನು ಹೊಂದಿದ್ದರು. ಆಗಾಗ ಬ್ಯಾಂಕ್‌ ಮ್ಯಾನೇಜರ್‌ ಮೇಘನಾ ಅವರ ನೆರವನ್ನೂ ವೃದ್ದ ದಂಪತಿ ಪಡೆಯುತ್ತಿದ್ದರು. ಅತ್ಯಂತ ನಂಬಿಕೆ, ವಿಶ್ವಾಸದಿಂದ ಮಾತನಾಡಿಸುತ್ತಿದ್ದ ಮೇಘನಾ ಬಳಿ ಸಾವಿತ್ರಮ್ಮ ತಮ್ಮ ಮನೆಯ ಎಲ್ಲ ವಿಚಾರವನ್ನು ಹೇಳಿಕೊಳ್ಳುತ್ತಿದ್ದರು. ಇದರ ದುರುಪಯೋಗ ಪಡೆದು ಬ್ಯಾಂಕ್‌ ಮ್ಯಾನೇಜರ್‌ ಸಾವಿತ್ರಮ್ಮ ಅವರಿಗೆ ವಿಶ್ವಾಸ ಘಾತುಕ ಕೆಲಸವನ್ನು ಮಾಡಿರುವುದು ಗೊತ್ತಾಗಿದೆ. ಅಂದಹಾಗೆ ವೃದ್ದ ದಂಪತಿಯ ಪುತ್ರನ ಮೊಬೈಲ್‌ಗೆ ಹಣ ವರ್ಗಾವಣೆಯ ಸಂದೇಶ ಬಂದ ಬಳಿಕ ಈ ವಂಚನೆಯ ವಿಚಾರ ಹೊರಬಿದ್ದಿದೆ. ತಕ್ಷಣ ಸಾವಿತ್ರಮ್ಮ ಪೊಲೀಸರಿಗೆ ದೂರು ನೀಡಿದ್ದರು.

ಒಟ್ನಲ್ಲಿ.. ಸಾಮಾನ್ಯವಾಗಿ ನಾವು ಹಣ, ಚಿನ್ನ ಬ್ಯಾಂಕ್‌ನಲ್ಲಿ ಸೂಕ್ತವಾಗಿ ರಕ್ಷಣೆಯಾಗುತ್ತದೆ, ಇಲ್ಲಿ ಯಾವುದೇ ವಂಚನೆಗಳು ನಡೆಯುವುದಿಲ್ಲ ಎಂದು ಭಾವಿಸಿರುತ್ತೇವೆ. ಆದರೆ ಬ್ಯಾಂಕ್‌ನ ಲಾಕರ್‌ ಒಡೆದು ಅಪಾರ ಪ್ರಮಾಣದ ಚಿನ್ನಾಭರಣ ದೋಚಿದ್ದ ಪ್ರಕರಣ ಮಾಸುವ ಮುನ್ನವೇ ಇದೀಗ ಬ್ಯಾಂಕ್ ಅಕೌಂಟಿನಲ್ಲಿದ್ದ ಲಕ್ಷಾಂತರ ರೂಪಾಯಿಗೆ ಕನ್ನ ಹಾಕುವ ಕೆಲಸ ಮಾಡಿರುವುದನ್ನು ನೋಡಿದಾಗ ಈ ಬ್ಯಾಂಕ್‌ ಸಿಬ್ಬಂದಿಗಳಲ್ಲಿ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿರುವ ಆತಂಕ ಗ್ರಾಹಕರಲ್ಲಿ ಮೂಡುತ್ತಿದೆ. ಇನ್ನೂ ಗ್ರಾಹಕರಿಗೆ ನೆರವಾಗಬೇಕಿದ್ದ ಬ್ಯಾಂಕ್‌ ಸಿಬ್ಬಂದಿಗಳೇ ಈ ರೀತಿಯ ಪ್ರಕರಣಗಳಿಗೆ ಕಾರಣವಾಗುತ್ತಿರುವುದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ. ಅದೇನೆ ಇರಲಿ.. ಮನೆಯನ್ನು ಮಾರಾಟ ಮಾಡಿ ಬಂದಿದ್ದ ಹಣಕ್ಕೆ ಕನ್ನ ಹಾಕಿರುವ ಮೇಘನಾ ಮೇಲೆ ಇಟ್ಟುಕೊಂಡಿದ್ದ ವಿಶ್ವಾಸದಲ್ಲಿಯೇ ವಿಷ ಇದೆ ಅನ್ನೋದನ್ನು ಬಹುಶಃ ವೃದ್ದ ದಂಪತಿ ಅರಿಯದಿರುವುದೇ ಈ ಘಟನೆಗೆ ಕಾರಣವಾಗಿದೆ ಎನ್ನುವುದು ಸುಳ್ಳಲ್ಲ..

- Advertisement -

Latest Posts

Don't Miss