Political News: ಸರ್ಕಾರಿ ಗುತ್ತಿಗೆಯಲ್ಲಿ ಶೇ. 4ರಷ್ಟು ಮೀಸಲಾತಿ ನೀಡಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ವಿರುದ್ಧ ಸಂಸದ ಹಾಗೂ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಕಿಡಿ ಕಾರಿದ್ದಾರೆ. ಈ ಕುರಿತು ನವದೆಹಲಿಯಲ್ಲಿ ಮಾತನಾಡಿರುವ ಅವರು, ಮುಸ್ಲಿಂ ಮೀಸಲಾತಿ ವಿಚಾರದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ತಾನು ಮಾಡಿರುವ ತೀರ್ಮಾನವನ್ನು ಕೈಬಿಡಬೇಕು ಇಲ್ಲವಾದರೆ ಕಾನೂನು ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ಸರ್ಕಾರದ ಈ ನಿರ್ಧಾರವನ್ನು ಬಿಜೆಪಿಯು ಖಂಡ ತುಂಡವಾಗಿ ವಿರೋಧಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕೂಡಲೇ ತಮ್ಮ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನೂ ಕೇವಲ ಮುಸ್ಲಿಂ ಓಲೈಕೆಗಾಗಿ ಸಿದ್ದರಾಮಯ್ಯ ಸರ್ಕಾರ ಸರ್ಕಾರ ಗುತ್ತಿಗೆಗಳಲ್ಲಿ ಶೇ. 4ರಷ್ಟು ಮೀಸಲಾತಿ ಕಲ್ಪಿಸಲು ಮುಂದಾಗಿದೆ. ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿವರ ಮಾತನ್ನು ಕೇಳಿ, ಅವರ ಸೂಚನೆಯ ಮೇಲೆಯೇ ಇಂಥ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಅಂದಹಾಗೆ ಈ ನಿರ್ಧಾರವನ್ನು ಹಿಂಪಡೆಯವರೆಗೂ ನಿರಂತರವಾಗಿ ಬಿಜೆಪಿ ಇದರ ವಿರುದ್ಧ ಧ್ವನಿ ಎತ್ತಲಿದೆ. ಈ ವಿಚಾರವನ್ನು ಜನರ ಬಳಿ ಕೊಂಡೊಯ್ಯಲಿದ್ದೇವೆ ಎಂದು ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ವಾಗ್ದಾಳಿ ನಡೆಸಿದ್ದಾರೆ.
ಬಜೆಟ್ನಲ್ಲಿ ಘೋಷಿಸಿದ್ದ ಸಿದ್ದರಾಮಯ್ಯ..
ಮಾರ್ಚ್ 7ರಂದು ತಮ್ಮ 16ನೇ ಬಜೆಟ್ ಮಂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿದ್ದರು. ಇದಕ್ಕೆ ಹಲವರ ವಿರೋಧದ ನಡುವೆಯೂ ಸದ್ದಿಲ್ಲದೇ ಅವರು ತಮ್ಮ ಬಜೆಟ್ನಲ್ಲಿ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ-ಪಂಗಡ, ಹಿಂದುಳಿದವರಿಗೆ ನೀಡಿರುವಂತೆ ಮುಸ್ಲಿಮರಿಗೂ ಶೇ 4ರಷ್ಟು ಮೀಸಲಾತಿ ಕಲ್ಪಿಸಿದ್ದರು. ಇನ್ನೂ ಇದರ ಘೋಷಣೆಯಾದ ಬಳಿಕ ಬಿಜೆಪಿ ವಿರೋಧಿಸುತ್ತಲೇ ಇದೆ. ಅಲ್ಲದೆ ಮುಸ್ಲಿಮರಿಗೆ ನೀಡಿರುವ ಈ ಮೀಸಲಾತಿಯನ್ನು ಮುಂದಿಟ್ಟುಕೊಂಡು ಬಿಜೆಪಿ ಬಜೆಟನ್ನೇ ಹಲಾಲ್ ಕಟ್ ಎಂದು ಜರಿದಿತ್ತು.




