Political News: ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಹನಿಟ್ರ್ಯಾಪ್ ಪ್ರಕರಣಕ್ಕೆ ಈಗ ಖುದ್ದು ಸಚಿವ ರಾಜಣ್ಣ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ. ಅಧಿವೇಶನದ ಬಳಿಕ ಗೃಹ ಸಚಿವರನ್ನು ಭೇಟಿಯಾಗಿ ದಾಖಲೆಗಳ ಸಮೇತ ದೂರು ನೀಡುತ್ತೇನೆ ಎಂದು ಹೇಳಿ, ಸೈಲೆಂಟಾಗಿ ಬಿಟ್ಟಿದ್ದರು. ಆದರೆ ಅಂತಿಮವಾಗಿ ಇಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿಯಾಗಿ ದೂರಿನ ಬದಲು ಮನವಿ ನೀಡುವ ಮೂಲಕ ಗೊಂದಲ ಮೂಡುವಂತೆ ಮಾಡಿದ್ದಾರೆ. ಅಚ್ಚರಿಯೆಂದರೆ ತಮ್ಮ ಮನವಿಯಲ್ಲಿ ಯಾರ ಹೆಸರನ್ನೂ ಉಲ್ಲೇಖಿಸದೆ ಮನವಿಯನ್ನೇ ದೂರನ್ನಾಗಿ ಪರಿಗಣಿಸುವಂತೆ ರಾಜಣ್ಣ ಕೋರಿದ್ದಾರೆ.
ಸಿಎಂ ಜೊತೆ ಚರ್ಚಿಸಿ ಕ್ರಮ..
ಇಂದು ಸಂಜೆ ಪರಮೇಶ್ವರ್ ಅವರ ನಿವಾಸಕ್ಕೆ ತೆರಳಿ ಈ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಇನ್ನೂ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಪರಮೇಶ್ವರ್, ರಾಜಣ್ಣ ಅವರು ಇಂದು ಮನವಿ ನೀಡಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಮುಂದೆ ಯಾವ ರೀತಿ ತನಿಖೆ ನಡೆಸಬೇಕು ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಅಲ್ಲದೆ ಅವರು ನೀಡಿರುವ ಮನವಿ ಪ್ರತಿಯಲ್ಲಿ ಯಾವೆಲ್ಲ ಅಂಶಗಳಿವೆ ಎನ್ನುವುದರ ಬಗ್ಗೆ ಚರ್ಚೆ ನಡೆಸಲು ಆಗುವುದಿಲ್ಲ. ಅವರ ಮನವಿ ಆಧಾರದ ಮೇಲೆ ಯಾವ ಕ್ರಮ ಕೈಗೊಳ್ಳಬೇಕು, ಅದಕ್ಕೆ ತಕ್ಕಂತೆ ಏನು ಮಾಡಬೇಕು ಹಾಗೂ ಯಾರಿಗೆ ಅದನ್ನು ಕಳುಹಿಸಬೇಕು ಎಂಬುದನ್ನು ನಿರ್ಧಾರ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ ಈ ಹಿಂದೆ ಸದನದಲ್ಲಿ ಹನಿಟ್ರ್ಯಾಪ್ ವಿಚಾರದ ಚರ್ಚೆಯ ವೇಳೆ ರಾಜಣ್ಣನ ನನ್ನ ಮೇಲೂ ಪ್ರಯತ್ನ ಆಗಿದೆ ಎಂದು ಸರ್ಕಾರ, ಹಾಗೂ ಗೃಹ ಸಚಿವರಿಗೆ ಮನವಿ ಕೊಡುತ್ತೇನೆ ಎಂದು ಹೇಳಿದ್ದರು. ಅಂದಹಾಗೆ ಇದು ನಿಜವೇ ಆಗಿದ್ದರೆ ಉನ್ನತ ಮಟ್ಟದ ತನಿಖೆ ಮಾಡುವುದಾಗಿ ನಾನೂ ಹೇಳಿದ್ದೆ. ಆದರೆ, ರಾಜಣ್ಣ ಅವರಿಗೆ ಪೂರ್ವ ನಿಯೋಜಿತ ಕೆಲಸ ಹಾಗೂ ಕಾರ್ಯಕ್ರಮಗಳ ನಡುವೆ ದೂರು ಕೊಡಲು ಆಗಿರಲಿಲ್ಲ. ಆದರೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದಂತೆ ಇಂದು ನನಗೆ ಅವರು ಮನವಿ ಕೊಟ್ಟಿದ್ದಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.
3 ಪುಟಗಳ ಮನವಿ ನೀಡಿದ ರಾಜಣ್ಣ..
ಇನ್ನೂ ಗೃಹ ಸಚಿವರಿಗೆ ಮನವಿ ಪತ್ರ ನೀಡಿದ ಬಳಿಕ ಮಾತನಾಡಿದ ರಾಜಣ್ಣ, ಬೆಂಗಳೂರು ಮನೆಯಲ್ಲಿ ಸಿಸಿಟಿವಿಯೇ ಇರಲಿಲ್ಲ. ಇನ್ನೂ ಪರಿಸ್ಥಿತಿ ಹೀಗಿರುವಾಗ ಸಿಸಿಟಿವಿ ವಿಡಿಯೋ ನನ್ನ ಬಳಿ ಇಲ್ಲ. ಯಾರು ಬಂದು ಹೋಗಿರುತ್ತಾರೆ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕೇಳಿ ಕೊಂಡಿದ್ದೇನೆ. ಅಲ್ಲದೆ ವಿಡಿಯೋ ಇಲ್ಲವಾದ್ದರಿಂದ ಹನಿಟ್ರ್ಯಾಪ್‌ಗೆ ಯತ್ನಿಸಿದವರು ಅಪರಿಚಿತರು ಅಂತ ದೂರಿನಲ್ಲಿ ಉಲ್ಲೇಖಿಸಿದ್ದೇನೆ. ಅಂದಹಾಗೆ ಒಬ್ಬನೇ ಹುಡುಗ ಎರಡು ಬಾರಿ ಬಂದಿದ್ದ. ಆದರೆ ಮತ್ತೊಮ್ಮೆ ಬಂದಿದ್ದ ವೇಳೆ ಬೇರೆ ಹುಡುಗಿಯರಿದ್ದರು. ಇನ್ನೂ ಮೊದಲ ಬಾರಿಗೆ ಹೈಕೋರ್ಟ್ ಲಾಯರ್ ಎಂದು ಹೇಳಿ ಬಂದಿದ್ದರು, ಎರಡನೇ ಸಲ ಕೂಡ ಜೀನ್ಸ್ ಹಾಗೂ ಬ್ಲೂ ಟಾಪ್ ಹಾಕಿಕೊಂಡಿದ್ದ ಹುಡುಗಿ ಬಂದು ಪರಿಚಯ ಮಾಡಿಕೊಂಡಿದ್ದರು. ಅವರ ಫೋಟೋ ತೋರಿಸಿದ್ದರೆ ನಾನು ಗುರುತು ಹಿಡಿಯುತ್ತೇನೆ. ಈ ಸಂಬಂಧ 3 ಪುಟಗಳ ದೂರು ನೀಡುತ್ತಿದ್ದೇನೆ ಎಂದು ರಾಜಣ್ಣ ತಿಳಿಸಿದ್ದಾರೆ. ಅಲ್ಲದೆ ಈ ಕುರಿತು ಹೈಕಮಾಂಡ್ ಭೇಟಿಗೂ ತೆರಳುವುದಾಗಿ ಅವರು ತಿಳಿಸಿದ್ದಾರೆ.
ದಾಖಲೆ ಸಂಗ್ರಹವೇ ದೊಡ್ಡ ತಲೆ ನೋವು..
ಸದನದಲ್ಲಿ ಬಹಿರಂಗವಾಗಿ ಹನಿಟ್ರ್ಯಾಪ್ ಬಗ್ಗೆ ಮಾತನಾಡಿದ್ದ ರಾಜಣ್ಣ ಅವರಿಗೆ ಇದೀಗ ಸಾಕ್ಷ್ಯಾಧಾರಗಳ ಕೊರತೆ ಕಾಡಲಿದೆ. ಅಲ್ಲದೆ ಯಾವುದೇ ಕಡೆ ಸಿಸಿಟಿವಿ ಕ್ಯಾಮೆರಾ ಇಲ್ಲದ್ದರಿಂದ ದಾಖಲೆಗಳನ್ನು ಸಂಗ್ರಹಿಸಲು ಸಹಕಾರ ಸಚಿವರು ಪರದಾಡುವಂತಾಗಿದೆ. ಮುಖ್ಯವಾಗಿ ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿಯೂ ಹನಿಟ್ರ್ಯಾಪ್ ನಡೆಸುವ ಯತ್ನಗಳಾಗಿದ್ದವು ಎಂದು ಹೇಳಿದ್ದ ರಾಜಣ್ಣಗೆ ಇದೀಗ ದಾಖಲೆಗಳ ಹೊಂದಿಸುವುದೇ ಒಂದು ದೊಡ್ಡ ಸವಾಲಾಗಿ ಬಿಟ್ಟಿದೆ. ಅಲ್ಲದೆ ಪ್ರಮುಖವಾಗಿ ರಾಜ್ಯವಲ್ಲದೆ ಎಲ್ಲ ಕಡೆಗಳಲ್ಲಿಯೂ ಸದ್ದು ಮಾಡಿರುವ ಈ ಪ್ರಕರಣ ಹೈಕಮಾಂಡ್ ಅಂಗಳಕ್ಕೂ ತಲುಪಿದೆ. ಇನ್ನೂ ದೆಹಲಿಯ ನಾಯಕರು ಈ ಪ್ರಕರಣದ ಬಗ್ಗೆ ಸೂಕ್ತ ದಾಖಲೆಗಳನ್ನು ಹಾಗೂ ಸಿಸಿಟಿವಿ ದೃಶ್ಯಗಳನ್ನು ಕೇಳಿದರೆ ಅವರಿಗೆ ನೀಡಲು ಯಾವುದೇ ಸಮರ್ಪಕ ದಾಖಲೆಗಳೇ ಇಲ್ಲದಿರುವುದು ರಾಜಣ್ಣ ಅವರಿಗೆ ಇನ್ನಷ್ಟು ದೊಡ್ಡ ತಲೆನೋವಾಗಿ ಬಿಟ್ಟಿದೆ. ಒಂದು ವೇಳೆ ಉನ್ನತ ಮಟ್ಟದ ತನಿಖೆಗೆ ಸರ್ಕಾರ ಮುಂದಾದರೂ ಸಹ ಸಾಕ್ಷ್ಯಗಳಿಗಾಗಿ ಪರದಾಡುವ ಸ್ಥಿತಿ ರಾಜಣ್ಣರದ್ದಾಗಿದೆ.
ಒಟ್ನಲ್ಲಿ.. ಇಷ್ಟು ದಿನ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿದ್ದ ಹನಿಟ್ರ್ಯಾಪ್ ಪ್ರಕರಣವು ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ತಂದಿತ್ತು. ಈ ಹಿನ್ನೆಲೆಯಲ್ಲಿ ಇದು ಕಾಟಾಚಾರಕ್ಕೆ ನೀಡಿರುವ ಮನವಿಯಂತೆ ಕಂಡು ಬರುತ್ತಿದೆ. ಅಲ್ಲದೆ ಸದನದಲ್ಲಿಯೇ ಈ ಪ್ರಕರಣ ಸ್ಪೋಟಿಸಿದ್ದ ರಾಜಣ್ಣ ಇಷ್ಟು ದಿನ ದೂರು ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಿದ್ದರು. ಮುಖ್ಯವಾಗಿ ಈ ವಿಚಾರ ಹೊರಬೀಳುತ್ತಿದ್ದಂತೆಯೇ ವಿಪಕ್ಷ ಬಿಜೆಪಿಯು ತನ್ನ ಲಾಭದ ಪಾಲನ್ನು ಪಡೆಯಲು ಪ್ರಯತ್ನಿಸಿತ್ತು. ಆದರೆ ಒಬ್ಬ ಹಿರಿಯ ಸಚಿವರ ಈ ರೀತಿಯ ಹೇಳಿಕೆ ಗಂಭೀರತೆಯನ್ನು ಹೊತ್ತಿರುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದ್ದರೂ, ಸರ್ಕಾರ ಮಾತ್ರ ತಮ್ಮ ಸಚಿವರ ಈ ಸ್ಥಿತಿಯ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ಅಂತಿಮವಾಗಿ ಇದೀಗ ದೂರಿನ ಬದಲು ರಾಜಣ್ಣ ಮನವಿ ನೀಡಿದ್ದಾರೆ ಇದರ ಆಧಾರದ ಗೃಹ ಸಚಿವರು ಯಾವ ಕ್ರಮ ಕೈಗೊಳ್ಳುತ್ತಾರೆ ಅನ್ನೋದು ಸದ್ಯದ ಕುತೂಹಲವಾಗಿದೆ. ಆದರೆ ಸಾಮಾನ್ಯವಾಗಿ ಯಾವುದೇ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ದೂರನ್ನು ನೀಡಬೇಕಾಗುತ್ತದೆ, ಆದರೆ ಈ ರಾಜಣ್ಣ ಮನವಿಯನ್ನು ನೀಡುವ ಮೂಲಕ ಇನ್ನಷ್ಟು ಗೊಂದಲ ಮೂಡಿಸಿದ್ದಾರೆ. ಅದೇನೆ ಇರಲಿ.. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ತನಗಾಗುವ ಮುಖಭಂಗವನ್ನು ತಪ್ಪಿಸಲು, ಬಲವಂತವಾಗಿಯೋ..ಒತ್ತಾಯಪೂರ್ವಕವಾಗಿಯೋ.. ಗೊತ್ತಿಲ್ಲ ಮನವಿ ಕೊಡಿಸಿದೆ. ಆದರೆ ಈ ಮನವಿ ಯಾವ ರೀತಿಯಾಗಿ ಪರಿಣಾಮಕಾರಿ ತನಿಖೆಗೆ ಕಾರಣವಾಗುತ್ತದೆ. ಹನಿಟ್ರ್ಯಾಪ್ ಹಿಂದಿರುವ ಮಹಾನಾಯಕನ ಪತ್ತೆ ಹಚ್ಚುವಲ್ಲಿ ಸಕ್ಸಸ್ ಆಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.




