Wednesday, November 19, 2025

Latest Posts

ಎಲ್ಲವನ್ನೂ ಫ್ರೀ ಕೊಟ್ರೆ , ಸಾರಿಗೆ ಸಂಸ್ಥೆ ನಡೆಸುವುದು ಹೇಗೆ..? : ಗ್ಯಾರಂಟಿಗೆ ಕಾಂಗ್ರೆಸ್‌ನಲ್ಲೇ ಅಪಸ್ವರ..!

- Advertisement -

Political News: ರಾಜ್ಯದಲ್ಲಿ ಉಚಿತ ಯೋಜನೆಗಳನ್ನು ಘೋಷಿಸಿ ಅವುಗಳ ಬಲದ ಮೇಲೆಯೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರದಲ್ಲೀಗ ಗ್ಯಾರಂಟಿಗಳ ಬಗ್ಗೆಯೇ ಅಪಸ್ವರಗಳು ವ್ಯಕ್ತವಾಗುತ್ತಿವೆ. ಈ ಹಿಂದೆಯಷ್ಟೇ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ನಿಲ್ಲಿಸುವುದೇ ಒಳ್ಳೆಯದು. ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟ ಆಗಿಲ್ಲ. ಬಿಜೆಪಿಗರು ಗ್ಯಾರಂಟಿ ವಿರುದ್ಧ ಮಾತಾಡಿದ್ದರೂ ಸಹ ಜನ ಅವರನ್ನು ಬೆಂಬಲಿಸಿದ್ದಾರೆ. ಹಾಗಾಗಿ ಜನರಿಗೆ ನಮ್ಮ ಗ್ಯಾರಂಟಿ ಇಷ್ಟ ಆಗಿಲ್ಲ. ಈ ಗ್ಯಾರಂಟಿ ಯೋಜನೆ ಬಗ್ಗೆ ಸಿಎಂ ಮರು ಪರಿಶೀಲನೆ ಮಾಡಬೇಕು ಎಂದು ಕಳೆದ ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಎಂ.ಲಕ್ಷ್ಮಣ್‌ ತಮ್ಮದೇ ಸರ್ಕಾರದ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸಿದ್ದರು.

ಉಚಿತ ಯೋಜನೆಗಳೇ ಅಪಾಯಕರಿ..

ಆದರೆ ಇದೀಗ ಅದೇ ಸಾಲಿಗೆ ಹಿರಿಯ ಕಾಂಗ್ರೆಸ್‌ ಶಾಸಕ ಆರ್‌.ವಿ. ದೇಶಪಾಂಡೆ ಕೂಡ ಸೇರಿದ್ದಾರೆ. ಈ ವಿಚಾರವಾಗಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಹತ್ತಿರದ ಅಂಬೇವಾಡಿಯಲ್ಲಿ ಮಾತನಾಡಿರುವ ಅವರು, ಈ ಉಚಿತ ಎನ್ನುವ ಪದವೇ ಅತ್ಯಂತ ಅಪಾಯಕಾರಿಯಾಗಿದೆ. ನಾವು ಯಾವುದೇ ಸೇವೆ ನೀಡುವಾಗ ಅದಕ್ಕೆ ಅದರದೇ ಆದ ಶುಲ್ಕವನ್ನು ನಿಗದಿ ಮಾಡಬೇಕು, ಜನರಿಗೆ ಏನನ್ನೂ ಫ್ರೀ ಆಗಿ ನೀಡಬಾರದು ಎನ್ನುವ ಮೂಲಕ ತಮ್ಮದೇ ಸರ್ಕಾರದ ಯೋಜನೆಗಳ ಬಗ್ಗೆ ಟೀಕಿಸಿದ್ದಾರೆ.

ಹೀಗೆ ಫ್ರೀ ಕೊಟ್ರೆ ಸಾರಿಗೆ ಸಂಸ್ಥೆ ನಡೆಸುವುದು ಹೇಗೆ..?

ಇನ್ನೂ ಈಗಾಗಲೇ ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾಗಿದೆ, ಇದರಿಂದ ಮಹಿಳೆಯರು ದಿನಾಲೂ ಉಚಿತವಾಗಿ ಬಸ್‌ನಲ್ಲಿ ಪ್ರಯಾಣವನ್ನು ಮಾಡುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಈ ಯೋಜನೆಯ ಲಾಭವನ್ನು ಪುರುಷರಿಗೂ ನೀಡಬೇಕೆಂದು ಒತ್ತಾಯಗಳಿದ್ದವು. ಆದರೆ ಈಗಲೇ ಫ್ರೀ ನೀಡುತ್ತಿದ್ದೇವೆ, ಹೀಗೆ ಉಚಿತ ನೀಡುತ್ತಾ ಹೋದರೆ ನಮ್ಮ ಸಾರಿಗೆ ಸಂಸ್ಥೆಗಳನ್ನು ನಡೆಸುವುದು ಹೇಗೆ..? ಅದಕ್ಕೆ ಕಷ್ಟವಾಗುತ್ತದೆ ಎಂದು ಆಡಳಿದ ಪಕ್ಷದಲ್ಲಿದ್ದುಕೊಂಡೇ ಹೇಳುವ ಮೂಲಕ ದೇಶಪಾಂಡೆ ಕೈ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಒಟ್ನಲ್ಲಿ.. ತಾವು ರಾಜ್ಯದಲ್ಲಿ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪಂಚ ಗ್ಯಾರಂಟಿಗಳಾದ ಶಕ್ತಿ ಯೋಜನೆ, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನಭಾಗ್ಯ ಹಾಗೂ ಯುವನಿಧಿಗಳನ್ನು ಜಾರಿಗೆ ತಂದಿದ್ದಾರೆ. ಆದರೆ ಈ ಯೋಜನೆಗಳ ನಿರ್ವಹಣೆಗಾಗಿ ಹಾಗೂ ಇವುಗಳನ್ನು ಮುಂದುವರೆಸಿಕೊಂಡು ಹೋಗಲು ಸರ್ಕಾರಕ್ಕೆ ಅನುದಾನದ್ದೇ ದೊಡ್ಡ ಸವಾಲಾಗಿದೆ. ಯಾಕೆಂದರೆ ಈಗಾಗಲೇ ಗ್ಯಾರಂಟಿ ಯೋಜನೆಗಳನ್ನು ತಂದು ಹಲವು ರಾಜ್ಯಗಳು ಆರ್ಥಿಕ ಹೊಡೆತವನ್ನು ಅನುಭವಿಸುತ್ತಿವೆ. ಅಲ್ಲದೆ ಕರ್ನಾಟಕದಲ್ಲೂ ಇದರಿಂದ ರಾಜ್ಯದ ಬೊಕ್ಕಸಕ್ಕೆ ಅಪಾರ ಆರ್ಥಿಕ ನಷ್ಟವಾಗುತ್ತದೆ ಎಂದು ಬಿಜೆಪಿ ಹೇಳುತ್ತಿದೆ. ಆದರೂ ಸಹ ಇವುಗಳಿಗೆ ಅಂಟಿಕೊಂಡಿರುವ ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಗ್ಯಾರಂಟಿಗಳನ್ನು ನಿಲ್ಲಿಸುವ ಯೋಚನೆ ಸರ್ಕಾರದ ಮುಂದಿಲ್ಲ, ನಾವು ಇವುಗಳನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗುತ್ತೇವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸುತ್ತಿದಾರೆ. ಅದೇನೆ ಇರಲಿ.. ಈ ಎಲ್ಲದರ ನಡುವೆಯೇ ಹಿರಿಯ ಕೈ ಶಾಸಕರ ಈ ಹೇಳಿಕೆಯಿಂದ ರಾಜ್ಯ ಸರ್ಕಾರ ಗ್ಯಾರಂಟಿಗಳ ಬಗ್ಗೆ ಯಾವ ನಿಲುವು ತಾಳಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

- Advertisement -

Latest Posts

Don't Miss