Political News: ಅನೇಕ ದಿನಗಳಿಂದ ನಿರಂತರವಾಗಿ ತಮ್ಮ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರದಲ್ಲಿ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮೌನ ಮುರಿದಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನಾಗಲಿ ಅಥವಾ ಯಡಿಯೂರಪ್ಪ ಆಗಲಿ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಮಾಡಿಲ್ಲ. ಅದೆಲ್ಲ ಹೈಕಮಾಂಡ್ ಪಡೆದಿರುವ ನಿರ್ಧಾರವಾಗಿದೆ. ನಾವ್ಯಾರು ಅವರನ್ನು ಪಕ್ಷದಿಂದ ಹೊರಹಾಕುವಂತೆ ಹೈಕಮಾಂಡ್ ನಾಯಕರ ಮೇಲೆ ಒತ್ತಡವೂ ಹಾಕಿಲ್ಲ. ಅವರ ಉಚ್ಚಾಟನೆಯನ್ನು ನಾನು ಸಂಭ್ರಮಿಸುವುದಿಲ್ಲ, ಆ ರೀತಿಯ ಮನಸ್ಥಿತಿ ನನ್ನದಾಗಿದ್ದರೆ ನಾನು ಪಕ್ಷದ ಅಧ್ಯಕ್ಷನಾಗಲು ನಾಲಾಯಕ್ ಆಗುತ್ತೇನೆ ಎನ್ನುವ ಮೂಲಕ ಯತ್ನಾಳ್ ಹೇಳಿಕೆಗೆ ಕೌಂಟರ್ ನೀಡಿದ್ದಾರೆ.
ಇನ್ನೂ ಬಸನಗೌಡ ಪಾಟೀಲ್ ಯತ್ನಾಳ್ ಅವರ ಅಸಮಾಧಾನಕರ ವರ್ತನೆಯ ಬಗ್ಗೆ ಪಕ್ಷದ ವರಿಷ್ಠರು ಹಲವಾರು ಬಾರಿ ನೋಟಿಸ್ ನೀಡಿದ್ದರು. ಅಲ್ಲದೆ ನಾನು ಅಧ್ಯಕ್ಷನಾದ ನಂತರ ಎಂಎಲ್‌ಸಿ ರವಿಕುಮಾರ್ ಅವರ ಮೂಲಕ ಯತ್ನಾಳ್ ಯತ್ನಾಳ್ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ಮಾಡಿದ್ದೇನೆ. ಇಷ್ಟೇ ಅಲ್ಲದೆ ಸದನ ನಡೆಯುವಾಗ ಯತ್ನಾಳ್ ಅವರಿಗೆ ನಾನು ಭೋಜನಕ್ಕೂ ಆಹ್ವಾನಿಸಿದ್ದೆ. ಬನ್ನಿ ಯತ್ನಾಳ್ ಅವ್ರೇ ಏನೇ ಇದ್ದರೂ ಸರಿಪಡಿಸಿಕೊಳ್ಳೋಣ ಎಂದು ವಿನಂತಿಸಿಕೊಂಡಿದ್ದೆ ಅಂತ ವಿಜಯೇಂದ್ರ ಹೇಳಿದ್ದಾರೆ.
ಯತ್ನಾಳ್‌ಗಿಂತ ನಾನು ಚಿಕ್ಕವನು..!
ಅಲ್ಲದೆ ಯತ್ನಾಳ್ ಅವರಿಗೆ ಹೋಲಿಕೆ ಮಾಡಿ ನೋಡಿದಾಗ ನಾನು ರಾಜಕೀಯದಲ್ಲಿ, ವಯಸ್ಸಿನಲ್ಲಿ ತುಂಬಾ ಚಿಕ್ಕವನು. ನಮ್ಮ ಪಕ್ಷದಲ್ಲಿನ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದೇನೆ. ಹಿಂದೊಂದು ಮುಂದೊಂದು ಮಾತನಾಡುವ ವ್ಯಕ್ತಿ ಅಲ್ಲ. ಅಲ್ಲದೆ ಪಕ್ಷದಲ್ಲಿ ನನ್ನ ಕಡೆಯಿಂದ ಎಲ್ಲವೂ ಸರಿಪಡಿಸಲು ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇನೆ. ಇದೊಂದು ವಿಧಿಯಾಟನೋ ನನಗೆ ಗೊತ್ತಿಲ್ಲ, ಆದರೆ ವರಿಷ್ಠರು ಎಲ್ಲವನ್ನು ಗಮನಿಸಿಯೇ ಕೊನೆಗೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೈಕಮಾಂಡ್ ಪರ ಬ್ಯಾಟ್ ಮಾಡಿದ್ದಾರೆ.
ಯಡಿಯೂರಪ್ಪ ಯಾರನ್ನೂ ತುಳಿದಿಲ್ಲ..
ಯಡಿಯೂರಪ್ಪ ತಮ್ಮ ರಾಜಕೀಯ ಜೀವನದಲ್ಲಿ ಅನೇಕ ಜನರನ್ನು ಮೇಲಕ್ಕೆತ್ತುವ ಕೆಲಸ ಮಾಡಿದ್ದಾರೆ. ಅವರು ಯಾವತ್ತೂ ಕೂಡ ಇನ್ನೊಬ್ಬರನ್ನು ತುಳಿಯುವ ಕೆಲಸ ಮಾಡಿಲ್ಲ. ಯಡಿಯೂರಪ್ಪ , ಅನಂತಕುಮಾರ್, ವಿ.ಎಸ್. ಆಚಾರ್ಯ ಹಾಗೂ ತಂಗಾ ಅವರ ಆದಿಯಾಗಿ ರಾಜ್ಯದಲ್ಲಿನ ಲಕ್ಷಾಂತರ ಪರಿಶ್ರಮದಿಂದ ಪಕ್ಷಕ್ಕೆ ಭದ್ರ ಬುನಾದಿ ಸಿಕ್ಕಿದೆ. ಅಲ್ಲದೆ ರಾಜ್ಯದ ಯಾವುದೇ ಬಿಜೆಪಿ ನಾಯಕರ ಹೆಸರು ಹೇಳಿದರೂ ಸಹ ಅವರೆಲ್ಲರು ಯಡಿಯೂರಪ್ಪ ಅವರ ಹೋರಾಟದ ಶ್ರಮದಿಂದಲೇ ಬೆಳೆದಿದ್ದಾರೆ. ಆದರೆ ಕಳೆದ ಒಂದು ವರ್ಷದಿಂದಲೂ ಸಹ ಪಕ್ಷದ ಹಿತದೃಷ್ಟಿಯಿಂದ ಯಡಿಯೂರಪ್ಪ ಅವರಂತಹ ಒಬ್ಬ ಹೋರಾಟಗಾರನ ಮೇಲಿನ ಅಪಮಾನವನ್ನು ಸಹಿಸಿಕೊಂಡು ಬಂದಿದ್ದೇನೆ. ಯತ್ನಾಳ್ ವಿರುದ್ಧ ಕೇಂದ್ರದ ವರಿಷ್ಠರು ಮಾಡಿರೋ ತೀರ್ಮಾನ ವಿಜಯೇಂದ್ರ ಹಾಗೂ ಯಡಿಯೂರಪ್ಪ ಇವರಿಬ್ಬರದ್ದಲ್ಲ ಎಂದು ಹೇಳುವ ಮೂಲಕ ವಿಜಯೇಂದ್ರ ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.

