International News: ಭಾರತದ ಬದ್ಧವೈರಿ ಪಾಕಿಸ್ತಾನದಲ್ಲಿ ಇದೀಗ ಮತ್ತೊಂದು ಸೇನಾ ದಂಗೆಯ ಲಕ್ಷಣಗಳು ಕಂಡುಬರುತ್ತಿವೆ. ಅಲ್ಲಿನ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ವಿರುದ್ಧ ಕಿರಿಯ ಸೈನಿಕರೆಲ್ಲ ಬಂಡಾಯವೆದ್ದಿದ್ದಾರೆ. ಅಲ್ಲದೆ ಸೇನೆಯ ಹಿರಿಯ ಅಧಿಕಾರಿಗಳು, ಕರ್ನಲ್‌ಗಳು, ಮೇಜರ್‌ಗಳು ಹಾಗೂ ಸೈನಿಕರು ಸೇರಿದಂತೆ ಇಡೀ ಸೇನೆಯೇ ಪತ್ರ ಬರೆದು ಹೋರಾಟದ ಎಚ್ಚರಿಕೆ ನೀಡಿದೆ. ಇನ್ನೂ ಜನರಲ್ ಆಸಿಮ್ ಮುನೀರ್ ನಾಯಕತ್ವವು ದೇಶದ ಹಿತವನ್ನು ಕಾಪಾಡಲು ವಿಫಲವಾಗಿದೆ. ನಮ್ಮೆಲ್ಲರನ್ನು ಅಗೌರವದಿಂದ ನಡೆಸಿಕೊಳ್ಳಲಾಗುತ್ತಿದೆ. ಅವರ ನೇತೃತ್ವದಲ್ಲಿ ಕೆಲಸ ಮಾಡಲು ನಮಗೆ ಆಗುವುದಿಲ್ಲ, ಹೀಗಾಗಿ ಈ ಕೂಡಲೇ ಮುನೀರ್ ರಾಜೀನಾಮೆ ನೀಡಿ ಸೇನೆಯಿಂದ ಹೊರಗೆ ಹೋಗಬೇಕು. ಇಲ್ಲವಾದರೆ ಅವರು ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಸೇನೆಯ ಅಧಿಕಾರಿಗಳ ಒಂದು ವರ್ಗ ವಾರ್ನ್ ಮಾಡಿದೆ.
ಅಲ್ಲದೆ ಅಲ್ಲಿ ಪ್ರಸ್ತುತ ಆಡಳಿತದಲ್ಲಿರುವ ಶೆಹಬಾಜ್ ಷರೀಪ್ ಸರ್ಕಾರ ಉರುಳಿಸುವುದರ ಜೊತೆಗೆ ಇಡೀ ಪಾಕಿಗಳ ಅಧಿಕಾರವನ್ನು ತನ್ನ ತೆಕ್ಕೆಗೆ ಪಡೆಯುವ ಹಪಾಹಪಿಯನ್ನು ಮುನೀರ್ ಮುಂದುವರೆಸಿದ್ದಾರೆ.. ಹೀಗಾಗಿ ಸೇನೆಯಲ್ಲಿ ಆತ ರಾಜಕೀಯ ಮಾಡುತ್ತಿದ್ದಾನೆ, ಅವನ ಸ್ವ ಹಿತಾಸಕ್ತಿಯಿಂದ ಪಾಕಿಸ್ತಾನದ ಸೇನೆಯ ಐಕ್ಯತೆ ಹಾಳಾಗುತ್ತಿದೆ. ಅಲ್ಲದೆ ಈ ಎಲ್ಲದರ ಪರಿಣಾಮ ಪಾಕಿಗಳ ಲೋಕದಲ್ಲಿ ಈಗ ಅರಾಜಕತೆಯ ಸನ್ನಿವೇಶ ನಿರ್ಮಾಣವಾಗುತ್ತಿದೆ. ಇನ್ನೂ ಬಲೂಚಿ ಬಂಡುಕೋರರ ಹೋರಾಟದ ನಡುವೆಯೇ ಸೇನಾ ದಂಗೆಯ ಭೀತಿಯಿಂದ ಅಕ್ಷರಶಃ ಶತ್ರು ರಾಷ್ಟ್ರ ಕಂಗಾಲಾಗಿ ಹೋಗಿದೆ. ಅಲ್ಲದೆ ಪಾಕಿಸ್ತಾನದಲ್ಲಿ ಸೈನಿಕರ ಸ್ಥಿತಿ ಹದಗೆಟ್ಟು ಹೋಗಿದೆ. ಬಲೂಚಿಸ್ತಾನ, ಕರಾಚಿ ಸೇರಿ ಹಲವೆಡೆ ಉಗ್ರರು ಸೈನಿಕರನ್ನೇ ಗುರಿಯಾಗಿಸಿ ದಾಳಿ ಮಾಡುತ್ತಿರುವ ಕಾರಣ ಸೈನಿಕರು ಸಾಮೂಹಿಕವಾಗಿ ಸೇನೆಯನ್ನು ತೊರೆಯುತ್ತಿದ್ದಾರೆ. ನಾಗರಿಕರು ಜೀವ ಭಯದಲ್ಲಿ ಓಡಾಡುವಂತಾಗಿದೆ.
ಸಿಂಧ್ ಪ್ರಾಂತ್ಯ ಸುತ್ತುವರೆದ ಚೀನಾ ಸೇನೆ..
ಇನ್ನೂ ಪಾಕಿಸ್ತಾನದಲ್ಲಿ ಸಂಭವನೀಯ ಸೇನಾ ದಂಗೆಯನ್ನು ಅವಲೋಕಿಸಿರುವ ಚೀನಾ ದೇಶವು, ಪಾಕ್‌ನಲ್ಲಿ ಇರುವ ನಮ್ಮ ಜನರಿಗೆ ನೀವು ಭದ್ರತೆ ನೀಡಲು ವಿಫಲರಾಗಿದ್ದೀರಿ ಎಂದು ಚೀನಾ ತನ್ನ ಸೇನೆಯನ್ನು ಅಲ್ಲಿಗೆ ಕಳುಹಿಸಿಕೊಟ್ಟಿದೆ. ಖಾಸಗಿ ಯೂನಿಫಾರ್ಮ್‌ನಲ್ಲಿ ಚೀನಾ 60 ಜನ ತನ್ನ ಸೇನಾಧಿಕಾರಿಗಳನ್ನು ಪಾಕಿಸ್ತಾನಕ್ಕೆ ರವಾನೆ ಮಾಡಿದೆ. ಅಂದಹಾಗೆ ಅವರು ಸಿಂಧ್ ಪ್ರಾಂತ್ಯದಲ್ಲಿ ಇದ್ದುಕೊಂಡು ಸಿಪಕಲ್ಲಿ ಪ್ರದೇಶ ವ್ಯಾಪ್ತಿಯಲ್ಲಿ ದುಡಿಯುತ್ತಿರುವ ಚೀನಾ ಜನರಿಗೆ ಪಾಕಿಸ್ತಾನ ನೀಡುತ್ತಿರುವ ಭದ್ರತೆಯ ಮೇಲುಸ್ತುವಾರಿ ಮಾಡಲಿದ್ದಾರೆ. ಇನ್ನೂ ಈ ಚೀನಾ ಪಾಕಿಸ್ತಾನಕ್ಕೆ ಆಗಾಗ ಬಂದು ಹೋಗುವ ಅತಿಥಿ ರೀತಿಯಾಗಿದ್ದು, ಅಲ್ಲಿನ ಅರಾಜಕತೆಯ ಬಗ್ಗೆ ಅರಿತುಕೊಂಡಿರುವ ಡ್ರ್ಯಾಗನ್ ರಾಷ್ಟ್ರ ಪಾಕಿಸ್ತಾನಕ್ಕೆ ಶಾಕ್ ನೀಡಿದರೂ ಅಚ್ಚರಿಯಿಲ್ಲ.
ಮರ್ಯಾದೆಯಿಂದ ರಾಜೀನಾಮೆ ನೀಡು..
ಅಂದಹಾಗೆ 1971ರಲ್ಲಿ ಬಾಂಗ್ಲಾ ವಿಮೋಚನೆಯ ಸಂದರ್ಭದಂತೆಯೇ ಈ ಬಾರಿಯೂ ಕೆಟ್ಟ ವಾತಾವರಣ ಸೃಷ್ಟಿಯಾಗುತ್ತಿದೆ. ಆದರೆ ಅದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ. ಅಲ್ಲದೆ ನಾವು ಯಾವುದೇ ಕಾರಣಕ್ಕೂ ನಿಮ್ಮೊಂದಿಗೆ ಸಂಧಾನಕ್ಕೆ ಬರುವುದಿಲ್ಲ. ನೀವೇ ಗೌರವಯುತವಾಗಿಯೇ ಇಲ್ಲಿಂದ ಕಾಲಿಗೆ ಬುದ್ದಿ ಹೇಳಿ ಎಂದು ಸೇನೆಯ ಅಧಿಕಾರಿಗಳು ಮುನೀರ್ ವಿರುದ್ಧ ಗುಡುಗಿದ್ದಾರೆ. ಅಲ್ಲದೆ ಪಾಕಿಸ್ತಾನವು ಆರ್ಥಿಕವಾಗಿ ದಿವಾಳಿಯಾಗುತ್ತಿದೆ. ಅಸಮರ್ಥ ನಾಯಕತ್ವ , ಭಯೋತ್ಪಾದಕರ ಪಾಲನೆ-ಪೋಷಣೆಯಿಂದಾಗಿ ಪಾಕ್ ಅರಾಜಕತೆಯ ಮಡುವಿನಲ್ಲಿ ಸಿಲುಕಿದೆ. ಹಾಗೆ ನೋಡಿದರೆ, ಪಾಕಿಸ್ತಾನದಲ್ಲಿ ಸರ್ಕಾರಕ್ಕಿಂತ ಸೇನೆಯೇ ಬಲಿಷ್ಠವಾಗಿರುತ್ತಿದೆ. ಆದರೀಗ, ಸೇನೆಯಲ್ಲಿಯೇ ಮುಖ್ಯಸ್ಥನ ವಿರುದ್ಧ ಯೋಧರು ಬಂಡಾಯ ಎದ್ದಿದ್ದು, ಮತ್ತೊಂದು ಕ್ಷಿಪ್ರಕ್ರಾಂತಿ ಉಂಟಾದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.
ಗಲಭೆಗಳೇ ರಾಜಕಾರಣಿಗಳ ಬಂಡವಾಳಗಳು..
ಇದರ ನಡುವೆ ಗಮನಿಸಬೇಕಾದ ವಿಚಾರವೆಂದರೆ ಇಲ್ಲಿ ಸರ್ಕಾರ ರಚಿಸಿದವರು ಐದು ವರ್ಷ ಅವಧಿ ಪೂರ್ಣಗೊಳಿಸಿರುವ ಇತಿಹಾಸವೇ ಇಲ್ಲ. ಈ ಪಾಕಿಸ್ತಾನಕ್ಕೆ ಗಲಭೆಗಳು ಹಾಗೂ ಹಿಂಸಾಚಾರಗಳು ಹೊಸದೇನಲ್ಲ ಇಲ್ಲಿ ಅಧಿಕಾರಕ್ಕೆ ಬಂದವರೆಲ್ಲರೂ ಸಹ ತಮ್ಮ ರಾಜಕೀಯ ಲಾಭಕ್ಕಾಗಿ ದೇಶದಲ್ಲಿ ದಂಗೆಗಳನ್ನು ಹುಟ್ಟು ಹಾಕುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿಯೇ ಇಲ್ಲಿ ಮತ್ತೆ ದೊಡ್ಡ ಸಂಘರ್ಷವೇ ನಡೆಯುವ ಸಾಧ್ಯತೆ ಇದೆ. ಇನ್ನೂ ಪಾಕ್‌ನಲ್ಲಿ ಮೊದಲ ಬಾರಿಗೆ, 1958ರಲ್ಲಿ ಜನರಲ್ ಅಯೂಬ್ ಖಾನ್ ಸೇನಾದಂಗೆ ನಡೆಸಿ ಆಡಳಿತ ಸೂತ್ರ ಹಿಡಿದಿದ್ದರು. ಇದು ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಿಕ್ಕು ಎಂಟು ವರ್ಷಗಳ ಬಳಿಕ ನಡೆದ ಘಟನೆಯಾಗಿತ್ತು. ಇದಾದ ಬಳಿಕ ಜನರಲ್ ಜಿಯಾ ಉಲ್ ಹಕ್ ಮತ್ತು ಪರ್ವೇಜ್ ಮುಷರಫ್ ಕೂಡ ಸೇನಾದಂಗೆಯ ಮೂಲಕವೇ ಅಧಿಕಾರಕ್ಕೆ ಬಂದಿದ್ದರು. ಇಲ್ಲಿ, ರಾಜಕೀಯ ಮತ್ತು ಚುನಾವಣೆಗಳಲ್ಲಿ ಸೈನ್ಯದ ಹಸ್ತಕ್ಷೇಪವು ತುಂಬಾ ಇದೆ, ಇದರಿಂದಾಗಿ ಉಂಟಾಗುವ ರಾಜಕೀಯ ಅಸ್ಥಿರತೆಯ ಲಾಭವನ್ನು ಸೇನೆ, ಸೇನಾಧಿಕಾರಿಗಳು ಬಳಸಿಕೊಳ್ಳುತ್ತಿದ್ದಾರೆ.
ಒಟ್ನಲ್ಲಿ.. ಭಾರತದ ವಿರುದ್ಧ ಕಾಲು ಕೆದರಿ ಜಗಳಕ್ಕಿಳಿಯುತ್ತಿದ್ದ ಪಾಕಿಗಳ ಲೋಕದಲ್ಲೀಗ ಎಲ್ಲವೂ ಹದಗೆಡುತ್ತಿದೆ, ತನ್ನ ಭಯೋತ್ಪಾದಕ ಕೃತ್ಯಗಳಿಂದ ಭಾರತವಲ್ಲದೆ ಹಲವು ದೇಶಗಳ ನೆಮ್ಮದಿ ಕಸಿದುಕೊಂಡಿದ್ದ ಪಾಕಿಸ್ತಾನವೀಗ ತನ್ನದೇ ಆದ ಸ್ವಯಂ ಕೃತ ಅಪರಾಧದಿಂದ ಉಗ್ರರ ಉಪಟಳ ಹಾಗೂ ಅರಾಜಕತೆಯಿಂದ ಬೇಸತ್ತು ಹೋಗಿದೆ. ಅಲ್ಲದೆ ಪ್ರತ್ಯೇಕ ಬಲೂಚಿಸ್ತಾನಕ್ಕಾಗಿ ಒತ್ತಾಯಿಸಿ ಪಾಕಿಸ್ತಾನದ ವಿರುದ್ಧವೇ ಸೆಟೆದು ನಿಂತಿದ್ದು ಒಂದೆಡೆಯಾದರೆ, ಇನ್ನೂ ಸೇನೆಯ ಮುಖ್ಯಸ್ಥನ ವಿರುದ್ಧ ಹಿರಿಯ ಸೇನಾಧಿಕಾರಿಗಳು ಬಂಡಾಯವೆದ್ದು ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದು ಇನ್ನೊಂದೆಡೆಯಾಗಿದೆ. ಅದೇನೆ ಇರಲಿ… ತಮ್ಮ ರಾಜಕೀಯ ಲಾಭ, ಸ್ವಂತ ಹಿತಾಸಕ್ತಿಗಾಗಿ ಇಡೀ ದೇಶಾದ್ಯಂತ ಗಲಭೆ, ಹಿಂಸಾಚಾರ ಸೃಷ್ಟಿಸುವ ಮೂಲಕ ಆಡಳಿತಕ್ಕೆ ಬರುವ ದುಷ್ಟ ಸಂಪ್ರದಾಯ ಇಲ್ಲಿನದ್ದಾಗಿದೆ. ಅಂದಹಾಗೆ ಅಲ್ಲಿನ ಅಲಿಖಿತ ಈ ಪದ್ಧತಿಯೇ ಇದೀಗ ಪಾಕಿಸ್ತಾನಕ್ಕೆ ಗಂಡಾಂತರ ತರುತ್ತಿರುವುದು ಸುಳ್ಳಲ್ಲ..

