ಆಪರೇಷನ್ ಸಿಂಧೂರ್ ವಿಶೇಷ :
ಬೆಂಗಳೂರು : ಪಹಲ್ಗಾಮ್ ದಾಳಿಯ ಬಳಿಕ ಪ್ರತೀಕಾರವಾಗಿ ಪಾಕಿಸ್ತಾನದ ಭಯೋತ್ಪಾದಕ ಅಡಗುತಾಣಗಳ ಮೇಲೆ ಏರ್‌ಸ್ಟ್ರೈಕ್ ನಡೆಸಿ ಭಾರತೀಯ ಸೇನೆಯು 100ಕ್ಕೂ ಅಧಿಕ ಉಗ್ರರನ್ನು ಹೊಡೆದುರುಳಿಸಿತ್ತು. ಈ ಮೂಲಕ ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಪಾಕ್‌ಗೆ ನೇರವಾಗಿ ರವಾನಿಸಿತ್ತು. ಅಲ್ಲದೆ ಭಾರತದ ಈ ದಿಟ್ಟ ಹೆಜ್ಜೆಯು ಜಾಗತಿಕ ಮಟ್ಟದಲ್ಲಿಯೂ ಕೂಡ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ವಿಶ್ವದ ಬಲಿಷ್ಠ ರಾಷ್ಟ್ರಗಳು ಭಾರತದ ಬೆಂಬಲಕ್ಕೆ ನಿಂತಿದ್ದು, ಯಾವುದೇ ಕ್ಷಣದಲ್ಲಿ ಇನ್ನಷ್ಟು ಶಾಕ್ ನೀಡಬಹುದು ಎಂಬ ಹೆದರಿಕೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಬಿಲ ಸೇರಿದೆ.
ಆಪರೇಷನ್ ಸಿಂಧೂರ್‌ಗೆ ಪ್ರಮುಖ ಪಾತ್ರ ವಹಿಸಿದ್ದ ಇಸ್ರೋ..
ಇನ್ನೂ ಅಮಾಯಕ ಪ್ರವಾಸಿಗರ ಬಲಿ ಪಡೆದ ರಕ್ತ ಪಿಪಾಸುಗಳ ವಿರುದ್ಧದ ಬೃಹತ್ ಕಾರ್ಯಾಚರಣೆಗೆ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆಯಾಗಿರುವ ನಮ್ಮ ಬೆಂಗಳೂರಿನಲ್ಲಿರುವ ಇಸ್ರೋ ಕೂಡ ಸೇನೆಗೆ ನೆರವಾಗಿತ್ತು ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಇನ್ನೂ ಈ ಕುರಿತು ಮಣಿಪುರದ ಇಂಫಾಲ್‌ನಲ್ಲಿ ಖುದ್ದು ಮಾಹಿತಿ ಬಿಚ್ಚಿಟ್ಟಿರುವ ಇಸ್ರೋ ಅಧ್ಯಕ್ಷ ವಿ. ನಾರಾಯಣನ್, ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶ ನಿರ್ಮಾಣ ಆಗುತ್ತಿದ್ದಂತೆಯೇ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಭಾರತೀಯ ಸೇನೆಯು ಇಸ್ರೋದ ಸಹಾಯ ಕೇಳಿತ್ತು. ಈ ಹಿನ್ನೆಲೆಯಲ್ಲಿ 10 ಉಪಗ್ರಹಗಳಿಂದ ಸತತ ನಿಗಾ ವಹಿಸಿದ್ದ ಇಸ್ರೋ, ಉಗ್ರರ ನೆಲೆಗಳ ಫೋಟೋಗಳನ್ನು ರವಾನಿಸಿತ್ತು. ಪಾಕಿಸ್ತಾನದ ಸೇನಾ ನೆಲೆಗಳು, ಡೋನ್ ಲಾಂಚ್ ಪ್ಯಾಡ್ಗಳ ಮಾಹಿತಿಯನ್ನು ಚಿತ್ರ ಸಮೇತ ಸಂಗ್ರಹಿಸಿಕೊಟ್ಟಿತ್ತು. ಹೀಗಾಗಿ ನಿಖರ ಗುರಿಯಿಟ್ಟ ಭಾರತೀಯ ಸೇನೆಯು ಉಗ್ರರ ಸೇನಾ ನೆಲೆಗಳು ಹಾಗೂ ವಾಯು ನೆಲೆಗಳನ್ನು ಛಿದ್ರಗೊಳಿಸಲು ಸಾಧ್ಯವಾಗಿದೆ ಎಂದು ಅವರು ಇಂಟ್ರೆಸ್ಟಿಂಗ್ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
127 ಭಾರತೀಯ ಉಪಗ್ರಹಗಳನ್ನು ಉಡಾವಣೆ ಮಾಡಿದೆ..
ನಮ್ಮ ನೆರೆಹೊರೆಯವರ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ನಮ್ಮ ದೇಶದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕಾದರೆ, ನಾವು ನಮ್ಮ ಉಪಗ್ರಹಗಳ ಮೂಲಕವೇ ತಿಳಿಯಬೇಕು. ನಮ್ಮ 7,000 ಕಿಲೋ ಮೀಟರ್ ಸಮುದ್ರ ತೀರದ ಪ್ರದೇಶಗಳನ್ನು ನಾವು ಮೇಲ್ವಿಚಾರಣೆ ಮಾಡಬೇಕು. ಸಂಪೂರ್ಣ ಉತ್ತರ ಭಾಗದ ಮೇಲೆ ನಿರಂತರವಾಗಿ ನಿಗಾ ಇಡಬೇಕು. ಉಪಗ್ರಹ ಮತ್ತು ಡ್ರೋನ್ ತಂತ್ರಜ್ಞಾನವಿಲ್ಲದೆ, ನಾವು ಭದ್ರತೆಯ ಖಚಿತತೆ ಸಾಧಿಸಲು ಸಾಧ್ಯವಿಲ್ಲ. ಇಲ್ಲಿಯವರೆಗೆ, ಇಸ್ರೋ ಖಾಸಗಿ ನಿರ್ವಾಹಕರು ಮತ್ತು ಶೈಕ್ಷಣಿಕ ಸಂಸ್ಥೆಗಳ ಉಪಗ್ರಹಗಳನ್ನು ಒಳಗೊಂಡಂತೆ 127 ಭಾರತೀಯ ಉಪಗ್ರಹಗಳನ್ನು ಉಡಾವಣೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.
22 ಕೆಳ ಭೂ ಕಕ್ಷೆಯಲ್ಲಿದ್ದರೆ, 29 ಕೇಂದ್ರ ಸರ್ಕಾರದ ಸ್ವಾಮ್ಯದ ಜಿಯೊ ಸಿಂಕ್ರನೈಸ್ ಕಕ್ಷೆಯಲ್ಲಿ..
ಒಟ್ಟು ಉಡಾವಣೆಯಾಗಿರುವ ಉಪಗ್ರಹಗಳ ಪೈಕಿ 22 ಕೆಳ ಭೂ ಕಕ್ಷೆಯಲ್ಲಿದ್ದರೆ, 29 ಕೇಂದ್ರ ಸರ್ಕಾರದ ಸ್ವಾಮ್ಯದ ಜಿಯೊ ಸಿಂಕ್ರನೈಸ್ ಕಕ್ಷೆಯಲ್ಲಿವೆ. ಭಾರತ ಸುಮಾರು 12 ಬೇಹುಗಾರಿಕೆ ಉಪಗ್ರಹಗಳನ್ನು ಹೊಂದಿದೆ. ಇದರಲ್ಲಿ ನಿರ್ದಿಷ್ಟ ಕಣ್ಗಾವಲು ಉದ್ದೇಶಗಳಿಗಾಗಿ ತಯಾರಿಸಿದ ಕಾರ್ಟೊಸ್ವಾಟ್ ಮತ್ತು ಆರ್‌ಐಎಸ್ಎಟಿ ಸರಣಿಯ ಉಪಗ್ರಹಗಳು, ಇಎಂಐಎಸ್ಎಟಿ ಮತ್ತು ಮೈಕ್ರೋಸ್ಯಾಟ್ ಸರಣಿಯ ಉಪಗ್ರಹಗಳು ಸೇರಿವೆ ಎಂದು ನಾರಾಯಣನ್ ವಿವರಣೆ ನೀಡಿದ್ದಾರೆ.
ಭಾರತದ ರಕ್ಷಣಾ ವ್ಯವಸ್ಥೆ ಬಲವರ್ಧನೆಗೆ ಇಸ್ರೋ ಪ್ರಮುಖ ಪಾತ್ರ ವಹಿಸುತ್ತೆ..!
ಭಾರತದ ಕಣ್ಗಾವಲು ಸಾಮರ್ಥ್ಯದ ಅಭಿವೃದ್ಧಿಗಾಗಿ ಮುಂದಿನ ಐದು ವರ್ಷಗಳಲ್ಲಿ ಭಾರತ 52 ಉಪಗ್ರಹಗಳನ್ನು ಉಡಾಯಿಸಲಿದೆ ಎಂದು ಕೆಲ ದಿನಗಳ ಹಿಂದೆ ಭಾರತದ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನಾ ಮತ್ತು ಅನುಮತಿ ಕೇಂದ್ರದ ಅಧ್ಯಕ್ಷ ಪವನ್ ಕುಮಾರ್ ಗೋಯಂಕಾ ತಿಳಿಸಿದ್ದರು.
ಬಾಹ್ಯಾಕಾಶ ಪರಿಶೋಧನೆ ಮತ್ತು ವೈಜ್ಞಾನಿಕ ಸಂಶೋಧನೆಯನ್ನು ಸುಧಾರಿಸುವುದು ಇದರ ಪ್ರಮುಖ ಗುರಿಯಾಗಿದ್ದರೂ, ಇದು ಉಪಗ್ರಹ ಸಂವಹನ, ಉಪಗ್ರಹ ವಿರೋಧಿ ಸಾಮರ್ಥ್ಯಗಳು, ಮುಂಚಿನ ಎಚ್ಚರಿಕೆ ವ್ಯವಸ್ಥೆಗಳು, ಸಂಚರಣೆ ಮತ್ತು ಇತರವುಗಳನ್ನು ಒಳಗೊಂಡಂತೆ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆಗೆ ಕೊಡುಗೆ ನೀಡುತ್ತದೆ. ಭಾರತದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಇಸ್ರೋ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷದ ಸಂದರ್ಭದಲ್ಲಿ ಇಸ್ರೋ ಮುಖ್ಯಸ್ಥರ ಈ ಹೇಳಿಕೆಯು ವಿಶೇಷ ಮಹತ್ವ ಪಡೆದಿದೆ.
ಕಾವಾ ಸ್ಪೇಸ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ..
ಇನ್ನೂ ಭಾರತವು ಪಾಕಿಸ್ತಾನದ ಪ್ರದೇಶದೊಳಗೆ ಆಯ್ದ ಮಿಲಿಟರಿ ನೆಲೆಗಳ ಮೇಲೆ ನಿಖರ ದಾಳಿಗಳನ್ನು ನಡೆಸಿತ್ತು. ಇವುಗಳಲ್ಲಿ ರಫಿಕಿ, ಚಕ್ಸಾಲಾ, ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಸಿಯಾಲ್ ಕೋಟ್‌ನಲ್ಲಿರುವ ರಾಡಾರ್ ಕೇಂದ್ರಗಳು, ಕಮಾಂಡಿಂಗ್ ಸ್ಥಾನಗಳು ಮತ್ತು ನಿಯಂತ್ರಣ ಕೇಂದ್ರಗಳು ಹಾಗೂ ಮದ್ದುಗುಂಡು ಡಿಪೋಗಳನೆಲ್ಲ ಭಾರತೀಯ ಸೇನೆಯು ಉಡೀಸ್ ಮಾಡಿಬಿಟ್ಟಿದೆ. ಪಾಕಿಸ್ತಾನದ ಭೋಲಾರಿಯಲ್ಲಿರುವ ಪಿಎಎಫ್ ನೆಲೆಯ ಬಿಡಿಎ ಅಂದರೆ ಬಾಂಬ್ ಹಾನಿಮೌಲ್ಯ ಮಾಪನ ಅಧಿಕವಾಗಿದೆ ಇದನ್ನು ಕಾವಾ ಸ್ಪೇಸ್ ಕಂಪನಿ ಹಂಚಿಕೊಂಡಿದೆ. ಭಾರತೀಯ ಎಎಎಂ ಅಂದರೆ ವಾಯು-ಉಡಾವಣಾ ಕ್ರೂಸ್ ಕ್ಷಿಪಣಿ ನಡೆಸಿದ ನಿಖರ ದಾಳಿಯ ಕುರಿತು ಸಾಕ್ಷಿ ಸಮೇತ ಮಾಹಿತಿ ಹಂಚಿಕೊಳ್ಳಲಾಗಿದೆ. ಪಿಎಎಫ್ ಅಂದರೆ ಪಾಕಿಸ್ತಾನ ವಾಯುಪಡೆ ಹ್ಯಾಂಗರ್ ಮೇಲೆ ಆಗಿದೆ.
ಏನಿದು ಕಾವಾ ಸ್ಪೇಸ್..?
ಸರ್ಗೋಧಾದಲ್ಲಿರುವ ಪಿಎಎಫ್ ನೆಲೆ ಮುಷಾಫ್‌ನ ಬಿಡಿಎ ವಿಶ್ಲೇಷಣೆ ಎಂಬ ಫೋಟೊವೊಂದನ್ನು ಒಸಿಂಟ್ ಹ್ಯಾಂಡಲ್ ಕಾವಾ ಸ್ಪೇಸ್ ಹಂಚಿಕೊಂಡಿದೆ. ದಾಳಿಯ ನಂತರದ ಚಿತ್ರಣ ವಿಶ್ಲೇಷಣೆಯು ಭಾರತೀಯ ಪಡೆಗಳಿಂದ ನಾಶವಾದ ರನ್ ವೇಯನ್ನು ತೋರಿಸುತ್ತದೆ ಎಂದು ಕಾವಾ ಸ್ಪೇಸ್ ಹೇಳಿದೆ.
ಜಾಕೋಬಾಬಾದ್‌ನಲ್ಲಿರುವ ಪಿಎಎಫ್ ಬೇಸ್ ಶಹಬಾಜ್‌ನ ಕಾವಾ ಸ್ಪೇಸ್ ನಡೆಸಿದ ಬಿಡಿಎ ವಿಶ್ಲೇಷಣೆಯು, ಪಿಎಎಫ್ ಹ್ಯಾಂಗರ್ ಮೇಲೆ ಭಾರತೀಯ ಎಎಲ್ಸಿಎಂ ನಡೆಸಿದ ನಿಖರ ದಾಳಿಯ ಪರಿಣಾಮವನ್ನು ತೋರಿಸುತ್ತದೆ. ಕಾವಾ ಸ್ಪೇಸ್ ಇದೊಂದು ಮುಂಬೈ ಮೂಲದ ಸ್ಟಾರ್ಟಪ್ ಕಂಪನಿಯಗಿದ್ದು, ಇದು ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಮಾಡುತ್ತದೆ. ಇನ್ನೂ ಜಾಗತಿಕವಾಗಿ ದೊಡ್ಡ ಸವಾಲಾಗಿರುವ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಇಸ್ರೋ ಪಾತ್ರವಹಿಸಿದ್ದು ನಿಜಕ್ಕೂ ನಮಗೆ ಸಂತೋಷದ ಸಂಗತಿ, ಅದರಲ್ಲೂ ತನ್ನ ಕೇಂದ್ರ ಕಚೇರಿಯನ್ನು ಬೆಂಗಳೂರಲ್ಲೇ ಹೊಂದಿರುವ ಸಂಸ್ಥೆಯ ಈ ದೇಶ ಸೇವೆಯ ಕಾರ್ಯವು ಕನ್ನಡಿಗರಿಗೆ ಇನ್ನಷ್ಟು ಹೆಮ್ಮೆಯಾಗುವಂತೆ ಮಾಡಿದೆ.