ಆಪರೇಷನ್ ಸಿಂಧೂರ್ ವಿಶೇಷ :
ನವದೆಹಲಿ : ಭಾರತೀಯರ ಅಸಮಾಧಾನ ಹಾಗೂ ಆಕ್ರೋಶಗಳ ಹೊರತಾಗಿಯೂ ನಾವು ಮುಸ್ಲಿಂ ಸಹೋದರ ರಾಷ್ಟ್ರವಾಗಿರುವ ಪಾಕಿಸ್ತಾನಕ್ಕೆ ನಮ್ಮ ಬೆಂಬಲವನ್ನು ಮುಂದುವರಿಸಲಿದ್ದೇವೆ ಎಂದು ಟರ್ಕಿ ಹೇಳಿದೆ. ಈ ಕುರಿತು ತುರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಒಳ್ಳೆಯ ಹಾಗೂ ಕೆಟ್ಟ ಎರಡೂ ಟೈಮ್ನಲ್ಲೂ ನಾವು ಪಾಕಿಸ್ತಾನದೊಂದಿಗೆ ನಿಲ್ಲಲಿದ್ದೇವೆ ಅಂತ ಕೊಚ್ಚಿಕೊಂಡಿದ್ದಾನೆ. ಈ ಮೂಲಕ ಭಾರತದಿಂದ ಟರ್ಕಿ ದೇಶವು ಇನ್ನಷ್ಟು ದೂರ ಸರಿದಂತೆ ಆಗಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷ ಎದುರಾಗಿತ್ತು. ಈ ಸಮಯದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡುವ ಮೂಲಕ ಟರ್ಕಿ ಭಾರತದ ಸಹಾಯ ಪಡೆದು ದ್ರೋಹ ಬಗೆದಿರುವುದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ ಇದೀಗ ಭಾರತದಾದ್ಯಂತ ನಡೆಯುತ್ತಿರುವ ಯಾವುದೇ ಬಾಯ್ಕಾಟ್ ಅಂದರೆ ಬಹಿಷ್ಕಾರಗಳಿಗೆ ನಾವು ತಲೆಕೆಸಿಕೊಳ್ಳುವುದಿಲ್ಲ ಎಂದು ಎರ್ಡೊಗನ್ ಉದ್ದಟತನದ ಹೇಳಿಕೆ ನೀಡಿದ್ದಾನೆ.
ನಾವು ಯಾವುದೇ ನಷ್ಟಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ..
ಭಾರತದ ವಿರುದ್ಧ ಕಾಲು ಕೆದರಿ ಪಾಕಿಸ್ತಾನ ದಾಳಿ ಮಾಡಲು ಇದೇ ಟರ್ಕಿಯ ಕಂತ್ರಿ ಬುದ್ಧಿಯೇ ನೆರವಾಗಿತ್ತು. ಹೀಗಾಗಿ ನಮ್ಮಿಂದಲೇ ಅಪಾರ ಆದಾಯವನ್ನು ಗಳಿಸುತ್ತಿರುವ ಟರ್ಕಿ ನಮ್ಮ ಬೆನ್ನಿಗೆ ಚೂರಿ ಹಾಕುವ ನೀಚ ಕೆಲಸ ಮಾಡಿದೆ. ಇದರಿಂದ ಭಾರತದಲ್ಲಿ ಟರ್ಕಿ ಹಾಗೂ ಅಜರ್ಬೈಜಾನ್ ವಿರುದ್ಧ ಆಕ್ರೋಶ ಹೆಚ್ಚಾಗಿದ್ದು, ಆ ಸ್ಥಳಗಳ ಬಾಯ್ಕಾಟ್ ಅಭಿಯಾನ ಜೋರಾಗಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಈಚೆಗೆ ನಡೆದ ಭಾರೀ ಸಂಘರ್ಷದಲ್ಲಿ ಟರ್ಕಿ ದೇಶವು ಪಾಕಿಸ್ತಾನದ ಬೆಂಬಲಕ್ಕೆ ಬಂದಿರುವುದು ಭಾರೀ ವಿರೋಧಕ್ಕೆ ಕಾರಣವಾಗಿದೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಟರ್ಕಿಗೆ ಇದರಿಂದ ಭಾರೀ ಸಂಕಷ್ಟ ಎದುರಾಗಿದೆ. ಆದರೆ, ಇದರ ನಡುವೆಯೂ ಟರ್ಕಿಯ ದ್ರೋಹಿ ಅಧ್ಯಕ್ಷ, ನಾವು ಯಾವುದೇ ನಷ್ಟಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಧಿಮಾಕಿನ ಮಾತುಗಳನ್ನಾಡಿದ್ದಾನೆ.
ಪ್ರವಾಸಕ್ಕೆ ಬನ್ನಿ ಎಂದು ಅಂಗಲಾಚಿಕೊಂಡಿದ್ದ ತುರ್ಕಿ..
ಅಲ್ಲದೆ ಪ್ರಮುಖವಾಗಿ ಅಲ್ಲಿನ ಪ್ರವಾಸೋದ್ಯಮ ಇಲಾಖೆಯು ಪ್ರಕಟಣೆಯ ಮೂಲಕ ಟರ್ಕಿಗೆ ಬರುವವರು ದಯವಿಟ್ಟು ಪ್ರವಾಸವನ್ನು ಕ್ಯಾನ್ಸಲ್ ಮಾಡಬೇಡಿ. ಇಲ್ಲಿ ಎಲ್ಲಾ ಮಾದರಿಯ ಸೌಲಭ್ಯಗಳನ್ನು ನಾವು ನೀಡಲಿದ್ದೇವೆ. ಹೋಟೆಲ್ಗಳಲ್ಲಿ ಬುಕ್ಕಿಂಗ್ ಸೇರಿದಂತೆ ಎಲ್ಲವೂ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ಅಂಗಲಾಚಿಕೊಂಡಿದೆ. ಇದರ ಬೆನ್ನಲ್ಲೇ ಟರ್ಕಿ ಅಧ್ಯಕ್ಷ ಯೂಟರ್ನ್ ಹೊಡೆದಿಡಿದ್ದಾನೆ. ಅಲ್ಲದೆ ಪಾಕಿಸ್ತಾನದೊಂದಿಗೆ ನಾವು ಸದಾ ನಿಲ್ಲಲಿದ್ದೇವೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಅವರು ನನ್ನ ಪ್ರಿಯ ಸಹೋದರ ಎಂದು ತಮ್ಮ ಕುತಂತ್ರಿ ಸ್ನೇಹದ ಬಗ್ಗೆ ಬಾಯಿ ಬಡಿದುಕೊಂಡಿದ್ದಾನೆ.
ಇನ್ನೂ ಟರ್ಕಿ ದೇಶವು ಪಾಕ್ನೊಂದಿಗೆ ಒಳ್ಳೆಯ ಸಮಯ ಮತ್ತು ಕೆಟ್ಟ ಸಮಯದಲ್ಲಿ ಭದ್ರವಾಗಿ ನಿಲ್ಲಲಿದೆ ಎಂದು ಎರ್ಡೊಗನ್ ಹೇಳಿರುವುದು ಭಾರತೀಯರ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಆಪರೇಷನ್ ದೋಸ್ತ್ ಎಂಬ ಕಾರ್ಯಾಚರಣೆ ನಡೆಸಿ ವಿನಾಶದ ಅಂಚಿನಲ್ಲಿದ್ದ ಟರ್ಕಿಗೆ ಭಾರತ ಅಪಾರ ಪ್ರಮಾಣದ ನೆರವು ನೀಡಿತ್ತು. ಆದರೂ ಅದನೆಲ್ಲ ಮರೆತ ಟರ್ಕಿ ಉಂಡ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡಿದೆ.
ಭಾರತದ ವಿರುದ್ಧ ದಾಳಿಗೆ ಪಾಕ್ಗೆ ಟರ್ಕಿ ಡ್ರೋನ್..!
ಭಾರತ ಹಾಗೂ ಪಾಕಿಸ್ತಾನದ ನಡುವೆ ಈಗಲೂ ಪರಿಸ್ಥಿತಿ ಬೂದಿ ಮುಚ್ಚಿರುವ ಕೆಂಡದಂತೆಯೇ ಇದೆ. ಇನ್ನೂ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು 26 ಜನ ಭಾರತೀಯರು ಹಾಗೂ ವಿದೇಶಿ ಪ್ರಜೆಗಳ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದರು. ಇದಾದ ಮೇಲೆ ಭಾರತವು ಪಾಕಿಸ್ತಾನದ ಉಗ್ರರ ತಾಣಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿ ದಾಳಿ ಮಾಡಿತ್ತು. ಈ ದಾಳಿಯಲ್ಲಿ ನೂರಾರು ಉಗ್ರರು ಹತ್ಯೆಯಾಗಿದ್ದರು.
ಆದರೆ ಇದಾದ ಮೇಲೆ ಟರ್ಕಿ ದೇಶವು ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಂತಿದ್ದು ಬಹಿರಂಗವಾಗಿತ್ತು. ತನ್ನಲ್ಲಿಯ ಡ್ರೋನ್ಗಳನ್ನು, ಮಿಸೈಲ್ಗಳು, ವಿಮಾನ ಹಾಗೂ ಸೈನಿಕರನ್ನು ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನಕ್ಕೆ ಕಳುಹಿಸಿಕೊಟ್ಟಿತ್ತು. ಭಾರತದ ಮೇಲೆ ದಾಳಿ ಮಾಡಿದಾಗ ಅವುಗಳನ್ನು ಹೊಡೆದುರುಳಿಸಿದ್ದ ಭಾರತೀಯ ಸೇನೆಯು ಡ್ರೋನ್ಗಳ ಅವಶೇಷಗಳನ್ನು ಪರೀಕ್ಷಿಸಿದಾಗ ಟರ್ಕಿಯ ಮೂಲವನ್ನು ಹೊಂದಿದ್ದವು. ಹೀಗಾಗಿ ಪಾಕಿಸ್ತಾನದ ಕೊಳಕು ಕೆಲಸಕ್ಕೆ ಚೀನಾ ಜೊತೆಗೆ ಟರ್ಕಿ ಎರಡೂ ದೇಶಗಳು ಕೈ ಜೋಡಿಸಿ ಹೇಸಿಗೆ ತಿಂದಿವೆ ಎನ್ನುವುದು ಬಯಲಾಗಿತ್ತು.
ಏನಿದು ಆಪರೇಷನ್ ದೋಸ್ತ್..?
ಕಳೆದ 2023ರ ಫೆಬ್ರವರಿ 6ರಂದು ಟರ್ಕಿಯ ಆಗ್ನೇಯ ಭಾಗ ಮತ್ತು ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ಭೀಕರ ಭೂಕಂಪದಲ್ಲಿ 50,000ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಜಗತ್ತಿನ ಮೊಟ್ಟ ಮೊದಲ ದೇಶವಾಗಿ ಈ ಸಂದರ್ಭದಲ್ಲಿ ಭಾರತ ಸರ್ಕಾರವು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ತಕ್ಷಣವೇ ಆಪರೇಷನ್ ದೋಸ್ತ್ ಅನ್ನು ಟರ್ಕಿಗಾಗಿ ಆರಂಭಿಸಿತ್ತು. ಭೂಕಂಪದ ಮಾಹಿತಿ ತಿಳಿಯುತ್ತಿದ್ದಂತೆಯೇ ಭಾರತೀಯ ವಾಯುಪಡೆಯ ಸಿ-17 ಗ್ಲೋಬ್ಮಾಸ್ಟರ್ ವಿಮಾನಗಳ ಮೂಲಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಅಂದರೆ ಎನ್ಡಿಆರ್ಎಫ್ ತಂಡ, ವೈದ್ಯಕೀಯ ತಂಡಗಳು, ಔಷಧಿಗಳು, ಆಹಾರ ಸಾಮಗ್ರಿಗಳು ಮತ್ತು ತಾತ್ಕಾಲಿಕ ಆಸ್ಪತ್ರೆಗಳನ್ನು ಸಹ ಭಾರತದಿಂದ ಟರ್ಕಿಗೆ ರವಾನಿಸಲಾಗಿತ್ತು.
ಕೋಟ್ಯಾಂತರ ರೂಪಾಯಿ ಪರಿಹಾರ ಸಾಮಗ್ರಿ ರವಾನಿಸಿತ್ತು..
ಕೇವಲ 12 ಗಂಟೆಗಳಲ್ಲಿ ರಕ್ಷಣಾತ್ಮಕ ವಸ್ತುಗಳನ್ನು ಒಳಗೊಂಡ 3 ಟ್ರಕ್ ಲೋಡ್ ಪರಿಹಾರ ಸಾಮಗ್ರಿಗಳನ್ನು ಟರ್ಕಿಗೆ ತಲುಪಿಸಲಾಗಿತ್ತು. ಇವುಗಳ ಮೌಲ್ಯ ಸುಮಾರು 2 ಕೋಟಿ ರೂಪಾಯಿಗಳಷ್ಟಾಗಿತ್ತು. ಸಿರಿಯಾ ಮತ್ತು ಟರ್ಕಿಗೆ ಕಳುಹಿಸಲಾಗಿದ್ದ 7.3 ಟನ್ಗಳಷ್ಟು ವಿವಿಧ ಸರಕು, 72 ನಿರ್ಣಾಯಕ ಆರೈಕೆ ಔಷಧಗಳು, ಆಹಾರ ಸಾಮಗ್ರಿಗಳು ಒಳಗೊಂಡಿತ್ತು, ಇದರ ಮೌಲ್ಯ 1.4 ಕೋಟಿ ರೂಪಾಯಿಗಳಷ್ಟಾಗಿತ್ತು.
ಇನ್ನೂ ಟರ್ಕಿಗೆ ಕಳುಹಿಸಲಾದ ಪರಿಹಾರ ಸಾಮಗ್ರಿಗಳಲ್ಲಿ 14 ರೀತಿಯ ವೈದ್ಯಕೀಯ ಮತ್ತು ನಿರ್ಣಾಯಕ ಆರೈಕೆ ಉಪಕರಣಗಳು ಸೇರಿದ್ದವು, ಇದರ ಮೌಲ್ಯ 4 ಕೋಟಿ ರೂಪಾಯಿಗಳಷ್ಟಾಗಿತ್ತು. ಅಲ್ಲದೆ ಭಾರತೀಯ ಸೇನೆಯು ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಟರ್ಕಿಯ ವಿನಾಶದ ಕಾಲದಲ್ಲಿ ನೆರವಾಗಿತ್ತು. ಆದರೆ ಅದೇ ಟರ್ಕಿ ಪಡೆದ ಸಹಾಯವನ್ನೇ ಮರೆತು ಈಗ ಭಾರತದ ವಿರುದ್ಧ ಶತ್ರುಗಳ ಜೊತೆ ಕೈ ಜೋಡಿಸಿದೆ. ಆದರೂ ಸಹ ಮಾನವೀಯತೆಯ ನೆಲೆ ಗಟ್ಟಿನಲ್ಲಿ ಮಾಡಿದ ಸಹಾಯವನ್ನು ಯಾವತ್ತೂ ಭಾರತ ಹೇಳಿಕೊಂಡಿಲ್ಲ. ಅಲ್ಲದೆ ನೆರವಾಗುವುದು ನಮ್ಮ ಬುದ್ಧಿ, ಮೋಸ ಮಾಡುವುದು ಅವರ ಮನಸ್ಥಿತಿ ಎನ್ನುವುದು ಕೂಡ ಅಷ್ಟೇ ಸತ್ಯವಾಗಿದೆ. ಅದೇನೆ ಇರಲಿ.. ಶತ್ರುಗಳಿಗೂ ಸಹಾಯ ಮಾಡಿ ಮಾನವೀಯತೆ ಉಳಿಸುತ್ತಿರುವ ನಮ್ಮ ದೇಶದ ಕುರಿತು ನಮಗೆ ಮತ್ತಷ್ಟು ಹೆಮ್ಮೆಯಾಗಲೇಬೇಕು..