ಆಪರೇಷನ್ ಸಿಂಧೂರ್ ವಿಶೇಷ :
ನವದೆಹಲಿ : ಪಹಲ್ಗಾಮ್ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಶುರುವಾಗಿದ್ದ ಸಂಘರ್ಷವನ್ನು ಕಳೆದ ಮೇ 10ರಂದು ಭಾರತ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಆ ವೇಳೆ ಇದೇ ವಿಚಾರವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸುದೀರ್ಘ ಸಮಯದ ನಿರಂತರ ಮಾತುಕತೆಗಳ ಮೂಲಕ ಭಾರತ ಹಾಗೂ ಪಾಕಿಸ್ತಾನದ ನಡುವಿನ ಕದನ ವಿರಾಮದ ಕುರಿತು ಘೋಷಿಸಲು ನನಗೆ ಸಂತಸವಾಗುತ್ತಿದೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇದಾದ ಬಳಿಕ ಪಾಕಿಸ್ತಾನವು ಕದನ ವಿರಾಮಕ್ಕೆ ಸಿದ್ಧವಾಗಿದೆ ಎಂದು ಹೇಳಿಕೊಂಡಿತ್ತು. ಅದರಂತೆ ಭಾರತವು ಕೂಡ ಕೇವಲ ನಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದಷ್ಟೇ ಹೇಳಿಕೊಂಡಿತ್ತು.
ಟ್ರಂಪ್ ಹೇಳಿಕೆಯಿಂದ ಭಾರತದಲ್ಲಿ ಆಕ್ರೋಶ..
ಇನ್ನೂ ಇದಾದ ಬಳಿಕ ಟ್ರಂಪ್, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವಿನ ಅದರಲ್ಲೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಎರಡು ದೇಶಗಳ ನಡುವಿನ ಯುದ್ಧವನ್ನು ತಡೆದಿರುವ ತೃಪ್ತಿ ನನಗಿದ. ಇಂತಹ ದೊಡ್ಡ ಕಾರ್ಯವನ್ನು ಅಮೆರಿಕ ಮಾಡಿದ ಎಂದು ಹೇಳಿಕೊಂಡಿದ್ದರು. ಅಮೆರಿಕ ಅಧ್ಯಕ್ಷರ ಈ ಹೇಳಿಕೆಯು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ವಿಪಕ್ಷಳು ನೇರವಾಗಿ ಕೇಂದ್ರ ಸರ್ಕಾರ ಹಾಗೂ ಟ್ರಂಪ್ ವಿರುದ್ಧ ಕಿಡಿ ಕಾರುತ್ತಿವೆ. ಅಮೆರಿಕದ ಮಾತು ಕೇಳಿ ಕದನ ವಿರಾಮವನ್ನು ಮಾಡಿರುವುದಕ್ಕೆ ಸೂಕ್ತ ಕಾರಣವನ್ನು ಕೇಳುತ್ತಿವೆ.
ಯಾರ ಮಧ್ಯಸ್ಥಿಕೆಯು ಬೇಡವೆಂದಿದ್ದ ಮೋದಿ..
ಅಲ್ಲದೆ ಕಾಶ್ಮೀರದ ವಿಚಾರದಲ್ಲಿ ಅಮೆರಿಕ ಮಧ್ಯಸ್ಥಿಕೆ ವಹಿಸುವುದಾಗಿ ಟ್ರಂಪ್ ಹೇಳಿರುವುದು ಕೂಡ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನೂ ಕಾಶ್ಮೀರ ವಿಚಾರ ನಮ್ಮ ಆಂತರಿಕ ಸಮಸ್ಯೆಯಾಗಿದೆ ಅದನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ನಮ್ಮ ನಡುವೆ ಯಾರ ಮಧ್ಯಸ್ಥಿಕೆಯ ಅವಶ್ಯಕತೆಯಿಲ್ಲ ಎಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಹೇಳುವ ಮೂಲಕ ಪರೋಕ್ಷವಾಗಿ ಟ್ರಂಪ್ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ನಾನೇ ಕದನ ವಿರಾಮಕ್ಕೆ ಕಾರಣ ಎಂದು ಹೇಳಲ್ಲ..
ಆದರೆ ಈ ಎಲ್ಲದರ ಕುರಿತು ಇದೀಗ ಟ್ರಂಪ್ ಉಲ್ಟಾ ಹೊಡೆದಿದ್ದಾರೆ. ಕತಾರ್‌ನಲ್ಲಿ ಮಾತನಾಡಿರುವ ಅವರು, ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ನಾನು ಪಾತ್ರ ವಹಿಸಿದ್ದೇನೆ. ಆದರೆ ನಾನೇ ಪೂರ್ತಿಯಾಗಿ ಇದಕ್ಕೆ ಕಾರಣ ಎಂದು ಹೇಳಲು ಬಯಸುವುದಿಲ್ಲ. ಆದರೆ ಕಳೆದ ವಾರ ಪಾಕಿಸ್ತಾನ ಮತ್ತು ಭಾರತದ ನಡುವಿನ ಸಮಸ್ಯೆಯನ್ನು ಪರಿಹರಿಸಲು ನಾನು ಖಂಡಿತವಾಗಿಯೂ ಸಹಾಯ ಮಾಡಿದ್ದೆ. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ಆ ಎರಡೂ ದೇಶಗಳ ನಡುವಿನ ಗಲಭೆ ಹೆಚ್ಚಾಗುತ್ತಿತ್ತು ಎಂದಿದ್ದಾರೆ. ಅಲ್ಲದೆ ಕದನ ವಿರಾಮದಿಂದ ಪಾಕಿಸ್ತಾನ ಮತ್ತು ಭಾರತ ಎರಡೂ ಸಂತೋಷಗೊಂಡಿವೆ. ಸಂಘರ್ಷಕ್ಕಿಂತ ವ್ಯಾಪಾರಕ್ಕೆ ಆದ್ಯತೆ ನೀಡಬೇಕೆಂದು ಎರಡೂ ರಾಷ್ಟ್ರಗಳನ್ನು ಕೇಳಿಕೊಂಡಿದ್ದೇನೆ ಎಂದು ಹೇಳುವ ಮೂಲಕ ಟ್ರಂಪ್ ತಮ್ಮ ಹೇಳಿಕೆಯಿಂದ ಯೂಟರ್ನ್ ಹೊಡೆದಿದ್ದಾರೆ.
ಮೇ 10ರಂದು ಟ್ರಂಪ್ ಏನು ಹೇಳಿದ್ದರು..?
ಭಾರತ ಹಾಗೂ ಪಾಕಿಸ್ತಾನದ ನಡುವಿನ ಕದನ ವಿರಾಮದ ಮೊದಲೇ ಘೋಷಿಸಿಕೊಂಡಿದ್ದ ಟ್ರಂಪ್, ಅಮೆರಿಕದ ಮಧ್ಯಸ್ಥಿಕೆಯಲ್ಲಿ ರಾತ್ರಿಯಿಡೀ ನಡೆದ ಸುದೀರ್ಘ ಮಾತುಕತೆಯ ನಂತರ ಭಾರತ ಮತ್ತು ಪಾಕಿಸ್ತಾನಗಳು ಸಂಪೂರ್ಣ ಮತ್ತು ತಕ್ಷಣದ ಒಪ್ಪಂದಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಸಾಮಾನ್ಯ ಜ್ಞಾನ ಮತ್ತು ಉತ್ತಮ ಬುದ್ಧಿಮತ್ತೆಯನ್ನು ಬಳಸಿದ್ದಕ್ಕಾಗಿ ಎರಡೂ ದೇಶಗಳಿಗೆ ಅಭಿನಂದನೆಗಳು ಎಂದು ಬರೆದುಕೊಂಡು ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಕದನ ವಿರಾಮವನ್ನು ಖಚಿತ ಪಡಿಸಿಕೊಂಡಿದ್ದರು.