National News: ದೇಶಾದ್ಯಂತ ಭಾರಿ ಸುದ್ದಿಯಾಗಿದ್ದ ನವ ಜೋಡಿಯ ನಾಪತ್ತೆ ಪ್ರಕಣಕ್ಕೆ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ಹೆಂಡತಿಯೇ ತನ್ನ ಗಂಡನಿಗೆ ಮುಹೂರ್ತವಿಟ್ಟ ಆಘಾತಕಾರಿ ಅಂಶ ಬಯಲಾಗಿದೆ. ಈ ಮೂಲಕ ಮಧ್ಯಪ್ರದೇಶ ಇಂದೋರ್ ಮೂಲದ ರಾಜಾ ರಘವಂಶಿಯ ಕೊಲೆಗೆ ಆತನ ಪತ್ನಿಯೇ ಸುಪಾರಿ ಕಿಲ್ಲರ್ಗಳ ಜೊತೆಯಾಗಿ ಸ್ಕೆಚ್ ಹಾಕಿದ್ದಳು ಎನ್ನುವುದು ಬೆಳಕಿಗೆ ಬಂದಿದೆ.
ಇನ್ನೂ ಕಳೆದ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ರಾಜಾ ರಘುವಂಶಿ ಹಾಗೂ ಸೋನಮ್ ಎಂಬ ನವಜೋಡಿಯು ಬಳಿಕ ಮೇ 23ರಂದು ಹನಿಮೂನ್ ಸಲುವಾಗಿ ಮೇಘಾಲಯದ ಚಿರಾಪುಂಜಿಗೆ ಪ್ರಯಾಣ ಬೆಳೆಸಿದ್ದರು. ಅಲ್ಲದೆ ಶಿಲ್ಲಾಂಗ್‌ನ ಬಾಲಾಜಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಅವರು ಮೇ 22ರ ಬೆಳಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದು ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ತೆರಳಿದ್ದರು. ಈ ವೇಳೆ ಅವರು 2 ಲಗೇಜ್ ಬ್ಯಾಗ್ ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿ ಹೋಗಿದ್ದರು.
ಬಳಿಕ ಮೇ 23ರಂದು ಮೌಲಾಖಿಯಾತ್ ಗ್ರಾಮ ತಲುಪಿದ್ದ ನವಜೋಡಿಯು, ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ಉಳಿದುಕೊಂಡಿದ್ದರು. ಆ ಬಳಿಕ ದಂಪತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ 1 ದಿನದ ನಂತರ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿತ್ತು. ಬಳಿಕ ಕುಟುಂಬವು ಪೊಲೀಸರಿಗೆ ದೂರು ನೀಡಿದಾಗ, ದಂಪತಿಗಾಗಿ ಹುಡುಕಾಟ ಪ್ರಾರಂಭವಾಯಿತು.
ಆಳವಾದ ಕಂದಕದಲ್ಲಿ ಪತ್ತೆಯಾಗಿತ್ತು, ರಾಜಾ ರಘುವಂಶಿ ಶವ..
ಬಳಿಕ ಜೂನ್ 2 ರಂದು ರಾಜಾ ರಘುವಂಶಿ ಅವರ ಶವ ಪತ್ತೆಯಾಗಿತ್ತು. ಆದರೆ ಸೋನಮ್ ಬಗ್ಗೆ ಯಾವುದೇ ಸುಳಿವು ದೊರೆತಿರಲಿಲ್ಲ. ಸತತ 11 ದಿನಗಳ ಹುಟುಕಾಟದ ಬಳಿಕ ಶಿಲ್ಲಾಂಗ್ ಪೊಲೀಸರು ಆಳವಾದ ಕಂದಕವೊಂದರಲ್ಲಿ ರಾಜಾ ರಘುವಂಶಿ ಅವರ ಮೃತದೇಹವನ್ನು ಡ್ರೋನ್ ಮೂಲಕ ಪತ್ತೆ ಹಚ್ಚಲಾಗಿತ್ತು. ಬಳಿಕ ಈ ವಿಚಾರವನ್ನು ತಿಳಿದ ಪೊಲೀಸರಿಗೆ ರಾಜಾ ರಘುವಂಶಿಯವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂಬ ಅನುಮಾನ ಮೂಡಿತ್ತು.
ಅಲ್ಲದೆ ಆ ಸ್ಥಳದಲ್ಲಿ ಏನಾಗಿತ್ತು, ಇದಕ್ಕೆ ಯಾರು ಕಾರಣ ಎಂಬೆಲ್ಲ ಪ್ರಶ್ನೆಗಳ ಉತ್ತರಕ್ಕಾಗಿ ಪೊಲೀಸರಿಗೆ ರಾಜಾ ರಘುವಂಶಿ ಪತ್ನಿ ಸೋನಮ್ಳ ವಿಚಾರಣೆಯು ಅಗತ್ಯವಾಗಿತ್ತು. ಹೀಗಾಗಿ ಸೋನಮ್ ಹುಡುಕಾಟ ನಡೆಸಿದ್ದರೂ ಸಿಕ್ಕಿರಲಿಲ್ಲ ಆದರೆ ಅಂತಿಮವಾಗಿ ಸೋನಂ ಜೊತೆಗೆ ಓರ್ವ ವ್ಯಕ್ತಿಯನ್ನು ಉತ್ತರ ಪ್ರದೇಶದಿಂದ ಮತ್ತು ಇನ್ನಿಬ್ಬರು ಆರೋಪಿಗಳನ್ನು ಇಂದೋರ್‌ನಿಂದ ಎಸ್‌ಐಟಿ ಬಂಧಿಸಿದೆ.
ಸೋನಮ್ ಉತ್ತರ ಪ್ರದೇಶದ ನಂದಗಂಜ್ ಪೊಲೀಸ್ ಠಾಣೆಯಲ್ಲಿ ಶರಣಾದ ನಂತರ ಬಂಧಿಸಲಾಗಿದೆ. ರಘುವಂಶಿಯನ್ನು ಕೊಲ್ಲಲು ಪತ್ನಿ ಸೋನಂ ತಮ್ಮನ್ನು ನೇಮಿಸಿಕೊಂಡಿದ್ದಳು ಎಂದು ಇತರ ಮೂವರು ಬಂಧಿತರು ಬಾಯಿಬಿಟ್ಟಿದ್ದಾರೆ. ಇನ್ನೂ ಪ್ರಮುಖವಾಗಿ ಸೊಹ್ರಾ ಪ್ರದೇಶದಲ್ಲಿ ಪ್ರವಾಸಿಗರು ನಾಪತ್ತೆಯ ಪ್ರಕರಣಗಳು ನಡೆದು ಈ ಹಿಂದೆ ಮೇಘಾಲಯದಲ್ಲಿ ಭಾರಿ ಸುದ್ದಿಯಾಗಿದ್ದವು. ಅಲ್ಲದೆ ಇದರಿಂದಾಗಿ ರಾಜಾ ರಘುವಂಶಿ ಪ್ರಕರಣವೂ ಕಣಿವೆ ರಾಜ್ಯದಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. ಹೀಗಾಗಿ ಈ ಪ್ರಕರಣವನ್ನೂ ಭೇದಿಸುವುದು ಪೊಲೀಸರಿಗೂ ಕೂಡ ಸಾಕಷ್ಟು ತಲೆನೋವಾಗಿ ಪರಿಣಮಿಸಿತ್ತು.
ಟೂರಿಸ್ಟ್ ಗೈಡ್ ನೀಡಿದ್ದ ಸ್ಫೋಟಕ ಮಾಹಿತಿಯಿಂದ ಬದಲಾಯ್ತು ತನಿಖೆ ದಿಕ್ಕು..!
ಆದರೆ ಟೂರಿಸ್ಟ್ ಗೈಡ್ ನೀಡಿದ್ದ ಸ್ಪೋಟಕ ಮಾಹಿತಿಯು ಇಡೀ ಪೊಲೀಸ್ ತನಿಖೆಯ ದಿಕ್ಕನ್ನೇ ಬದಲಾಯಿಸಿಬಿಟ್ಟಿತ್ತು. ಮದುವೆಯಾಗಿದ್ದ ನೂತನ ಜೋಡಿಯು ತಮ್ಮ ಖಾಸಗಿ, ಸಂತಸದ ಕ್ಷಣಗಳನ್ನು ಕಳೆಯಲು ಕಣಿವೆ ರಾಜ್ಯಕ್ಕೆ ಆಗಮಿಸಿತ್ತು. ಆದರೆ ಮುಂದೆ ನಡೆದಿದ್ದೆ ದುರಂತ ಘಟನೆಯಾಗಿತ್ತು. ಇನ್ನೂ ಮುಖ್ಯವಾಗಿ ಮೇ 23 ರಂದು ನೊಂಗ್ರಿಯಾತ್ನಿಂದ ಮಾವ್ಲಾಖಿಯಾತ್ಗೆ 3 ಸಾವಿರ ಮೆಟ್ಟಿಲುಗಳನ್ನು ಏರುತ್ತಿದ್ದಾಗ ಮೂರು ಜನ ಪುರುಷರ ಜೊತೆಗೆ ಜೋಡಿಯು ಕಾಣಿಸಿಕೊಂಡಿತ್ತು. ಇದಕ್ಕೂ ಮುನ್ನವೇ ನಾನು ಆ ಜೋಡಿಯನ್ನು ಗೈಡೇಡ್ ಟೂರ್ಗಾಗಿ ನೊಂಗ್ರಿಯಾಟ್ಗೆ ಕರೆದೊಯ್ಯುವುದಾಗಿ ಹೇಳಿದ್ದೆ, ಆದರೆ ಅವರು ನಯವಾಗಿಯೇ ನನ್ನ ಮನವಿಯನ್ನು ತಿರಸ್ಕರಿಸಿದ್ದರು. ಬಳಿಕ ನನ್ನಂತೆಯೇ ಪ್ರವಾಸಿಗರಿಗೆ ಗೈಡ್ ಮಾಡುವ ಇನ್ನೋರ್ವ ಗೈಡ್ ಭಾ ವಾನ್ಸಾಯಿಯನ್ನು ನೇಮಿಸಿಕೊಂಡಿದ್ದರು ಎಂದು ಗೈಡ್ ಒಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅಲ್ಲದೆ ಅವತ್ತು ರಾತ್ರಿ ಶಿವಾರಾ ಹೋಂಸ್ಟೇಯಲ್ಲಿ ರಾತ್ರಿ ತಂಗಿದ್ದರು, ಮಾರನೇ ದಿನ ಅವರೊಬ್ಬರೇ ಹೊರ ಬಂದಿದ್ದರು. ಆದರೆ ಪುನಃ ಅವರನ್ನು ನಾನು ನೋಡಿದಾಗ ನಾಲ್ಕು ಜನ ಪುರುಷರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಆದರೆ ಅದು ನನಗೆ ಅರ್ಥವಾಗುತ್ತಿರಲಿಲ್ಲ, ಆ ಪುರುಷರು ಮೌಲಖಿಯಾತ್ಗೆ ಬಂದಿದ್ದಾಗ, ಅವರ ಬಳಿ ಯಾವುದೇ ಸ್ಕೂಟರ್ ವಾಹನ ಇರಲಿಲ್ಲ ಎಂದು ಗೈಡ್ ಪೊಲೀಸರಿಗೆ ತಿಳಿಸಿದ್ದರು.
ರಾಜಾ ಕೊಲೆ ಕೇಸ್ 7 ದಿನಗಳಲ್ಲಿ ಪೊಲೀಸರು ಭೇದಿಸಿದ್ದಾರೆ, ಸಂಗ್ಮಾ ಹರ್ಷ..
ಒಬ್ಬ ಗೈಡ್ ನೀಡಿದ್ದ ಮಾಹಿತಿಯು ಒಬ್ಬ ಪ್ರವಾಸಿಗನ ಕೊಲೆಯ ಪ್ರಕರಣವನ್ನು ಭೇದಿಸುವುದಕ್ಕೆ ನೆರವಾಗಿದ್ದು, ಈ ಕುರಿತು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಪೊಲೀಸರನ್ನು ಅಭಿನಂದಿಸಿದ್ದಾರೆ. ರಾಜಾ ಕೊಲೆ ಪ್ರಕರಣದಲ್ಲಿ ಮೇಘಾಲಯ ಪೊಲೀಸರು 7 ದಿನಗಳಲ್ಲಿ ಪ್ರಗತಿ ಸಾಧಿಸಿದ್ದಾರೆ. ಮಧ್ಯಪ್ರದೇಶದ 3 ಹಂತಕರನ್ನು ಬಂಧಿಸಲಾಗಿದೆ, ಪತ್ನಿ ಶರಣಾಗಿದ್ದಾಳೆ ಮತ್ತು ಇನ್ನೂ ಓರ್ವ ಹಂತಕನನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಮುಂದುವರೆದಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮೇಘಾಲಯ ಪೊಲೀಸ್ ಮಹಾನಿರ್ದೇಶಕಿ ಇದಶಿಶಾ ನೊಂಗ್ರಾಂಗ್, ಸೋನಮ್ ತನ್ನ ಪತಿಯ ಕೊಲೆಯ ಪಿತೂರಿಯಲ್ಲಿ ಭಾಗಿಯಾಗಿದ್ದಾಳೆ ಮತ್ತು ಕೊಲೆಗೆ ಬಾಡಿಗೆ ಹಂತಕರನ್ನು ನೇಮಿಸಿಕೊಂಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿ ಸೋನಮ್ ಮತ್ತು ಮಧ್ಯಪ್ರದೇಶ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೋರ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಜಾ ರಘುವಂಶಿ ಕೊಲೆಗೆ ಕಾರಣ ಏನು..?
ಅಲ್ಲದೆ ರಾಜಾ ರಘುವಂಶಿ ಕೊಲೆಗೆ ಕಾರಣವನ್ನು ನೋಡುವುದಾದರೆ, ಅಕ್ರಮ ಸಂಬಂಧದ ವಾಸನೆ ಬರುತ್ತದೆ. ಘಾಜಿಪುರದ ನಂದಗಂಜ್‌ನಲ್ಲಿರುವ ರಾಜ್ ಕುಶ್ವಾಹಾ ಎಂಬ ಯುವಕ ಮತ್ತು ಸೋನಮ್ ಸಹೋದ್ಯೋಗಿಯಾಗಿದ್ದರು. ಆತ ಮದುವೆಗೂ ಮುನ್ನ ಎರಡೂವರೆ ತಿಂಗಳಿಂದ ನಿರಂತರ ಫೋನ್ ಕರೆಗಳನ್ನು ಮಾಡುತ್ತಿದ್ದ, ಇವರಿಬ್ಬರ ನಡುವೆ ಅನುಮಾನಾಸ್ಪದ ಅಕ್ರಮ ಸಂಬಂಧವಿತ್ತು. ಹೀಗಾಗಿ ತನ್ನ ಪತಿಯನ್ನು ಮೇಘಾಲಯದ ಚಿರಾಪುಂಜಿ ಬೆಟ್ಟದ ಮೇಲಕ್ಕೆ ಕೊಂಡೊಯ್ದು ಅಲ್ಲಿ ತಾನು ಮೊದಲೇ ಪ್ಲ್ಯಾನ್ ಮಾಡಿದಂತೆ ಮಧ್ಯಪ್ರದೇಶದ ಮೂವರು ಕಿರಾತಕರ ಸಹಾಯದಿಂದ ಕೊಂದು ಬೆಟ್ಟದ ಮೇಲಿನಿಂದ ಆತನನ್ನು ತಳ್ಳಿದ್ದಾಳೆ. ಆನಂತರ ಅಲ್ಲಿಂದ ಸೋನಮ್ ಎಸ್ಕೆಪ್ ಆಗಿದ್ದಳು ಈ ಮೂಲಕ ಕಿರಾತಕಿ ಗಂಡನಿಗೆ ಚಟ್ಟ ಕಟ್ಟಿದ್ದಾಳೆ ಎಂಬ ಕಳವಳಕಾರಿ ಅಂಶ ಬಯಲಾಗಿದೆ.
ನನ್ನ ಮಗಳು ಅಪರಾಧಿಯಲ್ಲ, ಇದು ಪೊಲೀಸರ ಸುಳ್ಳು ಕಥೆಯಾಗಿದೆ..
ಇನ್ನೂ ರಾಜಾ ರಘುವಂಶಿ ಕೊಲೆಯನ್ನು ನನ್ನ ಮಗಳು ಸೋನಮ್ ಮಾಡಿರುವುದಕ್ಕೆ ಸಾಧ್ಯವೇ ಇಲ್ಲ ಎಂದು ಸೋನಮ್ ತಂದೆ ದೇವಿ ಸಿಂಗ್ ಮಗಳ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಂಗ್, ನನ್ನ ಮಗಳು ನಿರಪರಾಧಿ, ಅವಳು ಮುಗ್ಧೆ ನನ್ನ ಮಗಳು ತನ್ನ ಗಂಡನನ್ನು ಕೊಲ್ಲಲು ಯಾರನ್ನಾದರೂ ನೇಮಿಸುತ್ತಾಳೆ ಎಂಬುದೇ ನಂಬಲಾಗದ ವಿಷಯ. ಅವರು ಇಬ್ಬರೂ ಕುಟುಂಬಗಳ ಒಪ್ಪಿಗೆಯೊಂದಿಗೆ ವಿವಾಹ ಮಾಡಿಕೊಂಡಿದ್ದರು. ಮೇಘಾಲಯ ಪೊಲೀಸರು, ಹನಿಮೂನ್ ಗೆಂದು ಬಂದ ದಂಪತಿಗಳ ಪತಿಯ ಶವ ಜೂನ್ 2ರಂದು ಚಿರಾಪುಂಜಿಯ ಬಳಿ ಪತ್ತೆಯಾಗಿದೆಯೆಂದು ಮತ್ತು ಇದರಲ್ಲಿ ಸೋನಮ್ ಪಾತ್ರವಿದೆ ಎಂಬ ಆರೋಪ ಹೊರಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಪೊಲೀಸರು ಹೇಳುವುದರಲ್ಲಿ ಸತ್ಯಾಂಶವಿಲ್ಲ. ಸೋನಮ್ ಅವರನ್ನು ಮೇಘಾಲಯದಲ್ಲಿ ಬಂಧಿಸಲೇ ಇಲ್ಲ. ಬದಲಿಗೆ, ಆಕೆ ಸ್ವಯಂ ಗಾಜಿಪುರಕ್ಕೆ ತೆರಳಿದ್ದಾಳೆ ಮತ್ತು ಅಲ್ಲಿ ರಸ್ತೆ ಬದಿಯ ಡಾಬಾದಿಂದ ತನ್ನ ಸಹೋದರನಿಗೆ ಕರೆ ಮಾಡಿದ್ದಾಳೆ. ಮೇಘಾಲಯ ಪೊಲೀಸರು ಈಗಾಗಲೇ ತಮಗೆ ಬೇಕಾದ ರೀತಿಯಲ್ಲಿ ಕಥೆ ಕಟ್ಟಿ, ಅದನ್ನು ಸಾರ್ವಜನಿಕರು ನಂಬುವಂತೆ ಮಾಡುತ್ತಿದ್ದಾರೆ. ಆದರೆ ಸತ್ಯವೇ ಬೇರೆ. ನನ್ನ ಮಗಳ ಮೇಲೆ ನಗೆ ಸಂಪೂರ್ಣ ನಂಬಿಕೆ ಇದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಲು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡುತ್ತೇವೆ ಎಂದು ದೇವಿಸಿಂಗ್ ಹೇಳಿದ್ದಾರೆ.
ನನ್ನ ಮಗನನ್ನು ಕೊಂದವರು ಯಾರೇ ಆಗಿರಲಿ ಅವರಿಗೆ ಕಠಿಣ ಶಿಕ್ಷೆಯಾಗಲಿ..
ಮಗನನ್ನು ಕೊಂದವರು ಯಾರೇ ಆಗಿರಲಿ, ಅವರಿಗೆ ಮರಣದಂಡನೆ ಆಗಬೇಕು. ಸೋನಮ್ ಇದರಲ್ಲಿ ಭಾಗಿಯಾಗಿದ್ದರೆ, ಅವಳಿಗೂ ಕೂಡ ಕಠಿಣ ಶಿಕ್ಷೆ ಬೇಕು. ಆದರೆ ನಮಗೆ ಸೋನಮ್ ಹಾಗೆ ಮಾಡಿರಬಹುದೆಂದು ನಂಬಲು ಆಗುತ್ತಿಲ್ಲ. ಅವಳು ಯಾವಾಗಲೂ ನಮ್ಮೊಂದಿಗೆ ಸ್ನೇಹಪೂರ್ಣವಾಗಿ ವರ್ತಿಸುತ್ತಿದ್ದಳು. ಫೋನ್ ಕ್ಯಾಂಟೆಕ್ಟ್‌ಗಳಲ್ಲೂ ಯಾವುದೇ ಅನುಮಾನ ಬಂದಿರಲಿಲ್ಲ. ನಾನು ಅವಳನ್ನು ನನ್ನ ಮಗಳಂತೆಯೇ ನೋಡಿಕೊಂಡಿದ್ದೆ. ಆದರೂ, ನಿಜವಾಗಿಯೂ ಅವಳು ತಪ್ಪು ಮಾಡಿದ್ದರೆ, ಆಕೆಗೂ ಕೂಡ ಮರಣದಂಡನೆಯಷ್ಟು ಗಂಭೀರ ಶಿಕ್ಷೆ ಇರಬೇಕು. ಆದರೆ ಅವಳು ನಿರಪರಾಧಿ ಎಂದು ಹೊರಬಂದರೆ, ನಾನು ಅವಳನ್ನು ತಪ್ಪಾಗಿ ಆರೋಪಿಸುವುದಿಲ್ಲ ಎಂದು ಹತ್ಯೆಯಾದ ರಾಜಾ ರಘುವಂಶಿ ತಾಯಿ ಉಮಾ ರಘುವಂಶಿ ಮಗನನ್ನು ನೆನೆದು ಕಣ್ಣೀರಾಗಿದ್ದಾರೆ.
ಇನ್ನೂ ಹೊಸದಾಗಿ ಮದುವೆಯಾಗಿ ಹೆಂಡತಿಯ ಜೊತೆ ಸುಂದರ ಸಂಸಾರ ಕಟ್ಟಿಕೊಳ್ಳಬೆಂಕೆಂದುಕೊಂಡಿದ್ದ ರಾಜಾ ರಘುವಂಶಿ ಅವರ ನೂತನ ಜೀವನ ಆರಂಭದಲ್ಲಿ ಅಂತ್ಯವಾಗಿದ್ದು ದುರಂತ.! ನವ ಜೋಡಿಯಾಗಿ ಹನಿಮೂನ್ ಕನಸು ಬೆನ್ನತ್ತಿ ಹೋಗಿದ್ದವ ಇದೀಗ ದಾರುಣವಾಗಿ ಹತ್ಯೆಯಾಗಿ ಬಿದ್ದಿದ್ದಾನೆ. ಹೆಂಡತಿಯ ಚಪಲಕ್ಕೆ, ಅಕ್ರಮಕ್ಕೆ ಅನ್ಯಾಯವಾಗಿ ರಾಜಾ ತನ್ನ ಜೀವನ ಪಯಣವನ್ನು ಅರ್ಧದಲ್ಲಿಯೇ ಕೊನಗೊಳಿಸಿರುವುದು ಅವರ ಕುಟುಂಬಕ್ಕೆ ಬರ ಸಿಡಿಲೇ ಅಪ್ಪಳಿಸಿದಂತಾಗಿದೆದ.
ಇನ್ನೂ ಮಗನನ್ನು ಕಳೆದುಕೊಂಡ ಹೆತ್ತ ಕರುಳುಗಳು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದ್ದು, ನ್ಯಾಯ ಸಿಗುವ ನಿರೀಕ್ಷೆಯಲ್ಲಿ ದಿನಗಳನ್ನು ಕಳೆಯುವಂತಾಗಿದೆ. ಏನೇ ಇರಲಿ.. ಹೆಂಡತಿಯಿಂದಲೇ ಗಂಡನ ಕೊಲೆಯಾಗಿರುವುದು ಮಾತ್ರ ನಿಜಕ್ಕೂ ವಿಪರ್ಯಾಸವೇ ಸರಿ..!