ಸಿಎಂ ಬದಲಾವಣೆಯ ರಾಜಕೀಯದ ಮಧ್ಯೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಇನ್ನೂ ದೆಹಲಿಯಲ್ಲೇ ಇದ್ದಾರೆ. ಸಾರಿಗೆ ಸಚಿವರು ಈ ಬಗ್ಗೆ ಯಾವುದೇ ಮಾಹಿತಿ ನೀಡುವುದಕ್ಕೂ ಮೊದಲೇ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬಸ್ ಭಾಗ್ಯ ಘೋಷಿಸಿದ್ದಾರೆ. ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಎಲ್‌ಕೆಜಿಯಿಂದ ಪಿಯುಸಿ ತನಕ ಓದುತ್ತಿರುವ ಮಕ್ಕಳಿಗೆ ಉಚಿತ ಬಸ್ ಸೌಲಭ್ಯ ಒದಗಿಸಲಾಗುತ್ತಿದೆ ಎಂದಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡು, ಸರ್ಕಾರಿ ಶಾಲಾ ಮಕ್ಕಳ ಭವಿಷ್ಯ ಉಜ್ವಲಕ್ಕೆ ಸರ್ಕಾರ ಬದ್ಧ. ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಎಲ್’ಕೆಜಿಯಿಂದ ಪಿಯುಸಿ ತನಕ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸುವ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಪ್ರಮುಖ ಒತ್ತು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಯೋಜನೆಯ ಮೂಲ ಉದ್ದೇಶವೇನೆಂದರೆ ಬಡ ಮಕ್ಕಳಿಗೆ ಶಿಕ್ಷಣದ ಅನುಕೂಲತೆಯನ್ನು ಒದಗಿಸುವುದು, ಶಾಲಾ ಹಾಜರಾತಿ ಪ್ರಮಾಣ ಹೆಚ್ಚಿಸುವುದು, ಊರಿನಿಂದ ದೂರವಿರುವ ಮಕ್ಕಳಿಗೂ ಸರಳವಾಗಿ ಶಾಲೆಗೆ ಹೋಗುವ ಅವಕಾಶ ಕಲ್ಪಿಸುವುದು, ಶಿಕ್ಷಣದ ಗುಣಮಟ್ಟ ಹಾಗೂ ಸಮಾನ ಅವಕಾಶಗಳನ್ನು ಒದಗಿಸುವುದು ಸೇರಿ ಹೀಗೆ ಕರ್ನಾಟಕ ಸರ್ಕಾರ ಮಹತ್ತರ ಹೆಜ್ಜೆ ಇಟ್ಟಿದೆ ಎಂದು ಡಿಕೆಶಿ ತಿಳಿಸಿದ್ದಾರೆ.
ಈ ಹಿಂದೆ ಜಾರಿಗೊಂಡ “ಶಕ್ತಿ ಯೋಜನೆ” ಮೂಲಕ ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡಲಾಗುತ್ತಿದೆ. ಈ ಯೋಜನೆಯು ಈಗಾಗಲೇ ಯಶಸ್ವಿಯಾಗಿ ಜಾರಿಯಾಗಿದೆ. ಈಗ, ಮಕ್ಕಳಿಗೂ ಇದೇ ರೀತಿಯ ಯೋಜನೆ ಜಾರಿ ಮಾಡಿದ್ದಾರೆ. ಶಿಕ್ಷಣವೇ ಶಕ್ತಿ, ಶಿಕ್ಷಣವೇ ಬೆಳಕು ಅನ್ನೋಹಾಗೆ ಆ ಬೆಳಕನ್ನು ಪ್ರತಿಯೊಬ್ಬ ಮಕ್ಕಳು ಪಡೆಯಲು ಈ ಉಚಿತ ಬಸ್ ಬಾಗ್ಯವನ್ನ ಪೋಷಕರು, ಮಕ್ಕಳು ಸದುಪಯೋಗ ಪಡೆದುಕೊಳ್ಳಿ.
ವರದಿ : ಲಾವಣ್ಯ ಅನಿಗೋಳ