ಅಮೃತಧಾರೆ ಸೀರಿಯಲ್ ನಟಿ ಮಂಜುಳಾ ಅಲಿಯಾಸ್ ಶ್ರುತಿ ಕೌಟುಂಬಿಕ ಕಲಹಕ್ಕೆ ಸಿಲುಕಿ ನರಳಾಡಿದ್ದಾರೆ. ಶ್ರುತಿ ಪತಿ ಅಮರೀಶ್ ಪೆಪ್ಪರ್ ಸ್ಪ್ರೇ ಹೊಡೆದು, ಚಾಕುವಿನಿಂದ ಇರಿದಿದ್ದಾರೆ ಅನ್ನೋ ದೂರು ದಾಖಲಾಗಿದೆ. ಪತ್ನಿಯ ಶೀಲ ಶಂಕಿಸಿ ಗಂಡ ಹಲ್ಲೆ ಮಾಡಿದ್ದು, ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಕಿರುತೆರೆ ನಟಿ ಮಂಜುಳಾ ಅಲಿಯಾಸ್ ಶ್ರುತಿ ಅಮೃತಧಾರೆ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಪ್ರತಿಭಾನ್ವಿತ ನಟಿಯಾಗಿರುವ ಶ್ರುತಿ ಅವರು ಪತಿ ಅಮರೇಶ್ ಎಂಬಾತನಿಂದ ದೈಹಿಕ ಹಲ್ಲೆ ಮತ್ತು ಚಾಕು ಇರಿತಕ್ಕೊಳಗಾಗಿದ್ದಾರೆ. ಅಮರೇಶ್ ಅವರು ಪೆಪ್ಪರ್ ಸ್ಪ್ರೇ ಬಳಸಿ, ನಂತರ ಚಾಕು ಇರಿಸಿ, ಹಿಟ್ಟಿನ ಕೋಲಿನಿಂದ ಹೊಡೆದು, ಜುಟ್ಟು ಹಿಡಿದು ಎಳೆದಾಡಿ, ತಲೆಯನ್ನು ಗೋಡೆಗೆ ಬಡಿದಿದ್ದಾರೆ. ಇದು ಯಾವುದೇ ಸಿನಿಮಾ ಸೀನ್ ಗಳಲ್ಲ – ನಿಜ ಜೀವನದ ಭೀಕರ ಸತ್ಯ.
ಮಂಜುಳಾ ಅಲಿಯಾಸ್ ಶ್ರುತಿ, ಪತಿ ಅಮರೇಶ್ 20 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವೆ ಹೊಂದಾಣಿಕೆ ಕೂಡ ಸರಿಯಿರಲಿಲ್ಲ ಎನ್ನಲಾಗಿದೆ.
ಹೀಗಾಗಿ ಗಂಡನಿಂದ ದೂರಾಗಿ ಶ್ರುತಿ ಅಣ್ಣನ ಮನೆಯಲ್ಲಿ ವಾಸವಿದ್ದರು. ಕಳೆದ ಏಪ್ರಿಲ್‌ನಲ್ಲಿ ಶ್ರುತಿ ಗಂಡನಿಂದ ದೂರವಾಗಿದ್ದರು. ಇಬ್ಬರ ನಡುವೆ ಲೀಸ್ ಹಣಕ್ಕಾಗಿ ಸಹ ಜಗಳ ನಡೆದಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತಂತೆ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಶ್ರುತಿ ದೂರು ನೀಡಿದ್ದಳು.
ಇದಾದ ಬಳಿಕ ಕಳೆದ ಗುರುವಾರ ರಾಜಿ ಸಂದಾನ ಮಾಡಿ ಗಂಡ-ಹೆಂಡತಿ ಒಂದಾಗಿದ್ದರು. ಆದರೆ, ಇಬ್ಬರೂ ಒಂದಾದ ಮಾರನೇ ದಿನವೇ ಗಂಡ ಪತ್ನಿಗೆ ಚಾಕು ಇರಿದಿದ್ದಾನೆ. ಅಮರೇಶ್ ತನ್ನ ಪತ್ನಿ ಶ್ರುತಿ ಮನೆಗೆ ಬಂದು, ಮನೆಯ ಡೋರ್ ತೆಗೆದ ಕೂಡಲೇ ಪೆಪ್ಪರ್ ಸ್ಪ್ರೇ ಮುಖಕ್ಕೆ ಹೊಡೆದು, ತಕ್ಷಣವೇ ಚಾಕುವಿನಿಂದ ಅವರ ತೊಡೆ, ಪಕ್ಕೆಲುಬು ಮತ್ತು ಕುತ್ತಿಗೆಗೆ ಇರಿದು ಹಲ್ಲೆ ನಡೆಸಿದ್ದಾನೆ. ಈ ವೇಳೆ ಶ್ರುತಿ ಕೂಗಿದ ಶಬ್ದ ಕೇಳಿ ನೆರೆಹೊರೆಯವರು ಓಡಿ ಬಂದು, ಅವರನ್ನು ರಕ್ಷಿಸಿದ್ದಾರೆ. ಶ್ರುತಿ ಅವರು ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂಬ ಮಾಹಿತಿ ದೊರೆತಿದೆ.
ವರದಿ : ಲಾವಣ್ಯ ಅನಿಗೋಳ