Sandalwood: ಸರೆಗಮಪ ಕನ್ನಡ ಶೋ ಜ್ಯೂರಿ ಮೋಹನ್‌ರ ಪುತ್ರ ಹೃತಿಕ್ ಆತ್ಮಹ*..

Sandalwood: ಸರಿಗಮಪ ಕನ್ನಡ ರಿಯಾಲಿಟಿ ಶೋ ಜ್ಯೂರಿ ಮೋಹನ್‌ ಅವರ ಪುತ್ರ ಹೃತಿಕ್ ತಮ್ಮ ಮನೆಯ ಕೋಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈಗಾಗಲೇ ಸ್ಥಳೀಯ ಪೋಲೀಸ್ ಸ್ಟೇಶನ್‌ನಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ.

ಈ ಬಗ್ಗೆ ಹಿರಿಯ ಕಲಾವಿದರಾಗಿರುವ ಮಂಡ್ಯ ರಮೇಶ್ ಅವರು, ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದಿದ್ದು, ಸಂತಾಪ ಸೂಚಿಸಿದ್ದಾರೆ.

ಮತ್ತೊಂದು ಯಾತನೆ!
ನಟನದ ನಾಟಕಗಳನ್ನು ನೋಡಿದವರಿಗೆ ಈ ಹುಡುಗ ಪರಿಚಿತ. ಹೃತಿಕ್ (ಜಿ‌‌ ಸರಿಗಮಪ ದ ಜೂರಿಯಾಗಿರುವ ಮೋಹನ್ ಅವರ ಏಕ ಮಾತ್ರ ಪುತ್ರ) ಮೊನ್ನೆ ಮೊನ್ನೆ ನಡೆದ ‘ಸುಬ್ಬಣ್ಣ ಸ್ಮರಣೆ’ಯ ಎರಡೂ ನಾಟಕಗಳಲ್ಲಿ ಮುಖ್ಯ ಪಾತ್ರವಹಿಸಿ, ಅತ್ಯುತ್ತಮವಾಗಿ ಅಭಿನಯಿಸಿ ಪ್ರೇಕ್ಷಕರ ಅತಿ ಮೆಚ್ಚಿನ ನಟ ಆಗಿದ್ದ.
ರಂಗಗೀತೆಗಳಲ್ಲಿ ಸೊಗಸಾಗಿ ಹಾಡಿದ. ಚೆಕ್ ಪೋಸ್ಟ್ ನಂಬರ್ 840 ಯ ರಾಜಕಾರಣಿ, ಚೋರ ಚರಣದಾಸದ ಕುಡುಕ , ಅಂಧಯುಗದ ಸಂಜಯ, ಅಡುಗೆ ಮನೆಯಲ್ಲಿ ಹುಲಿಯ ಸಕ್ಸೆನಾ ಮತ್ತು ಶೆಟ್ಟಿ, ಬೆತ್ತಲೆ ಅರಸನ ರಾಜ ರಹಸ್ಯ ನಾಟಕದ ಕಾರಬಾರಿ…. ಅಸಂಖ್ಯ ನಾಟಕಗಳಲ್ಲಿ ಅನೇಕ ಪಾತ್ರಗಳನ್ನು ಮಾಡಿ ನಟನ ತಂಡದ ದೊಡ್ಡ ಶಕ್ತಿಯಾಗಿದ್ದ. ಗಾಯನ, ನೃತ್ಯ, ಪ್ರಾಣಿಗಳನ್ನು ಸಾಕುವುದು ಮತ್ತು ಮಾರಾಟ ಮಾಡುವುದು, ಅದರ ಬಗ್ಗೆ ಅತೀವ ಅಧ್ಯಯನ ಮಾಡಿ ಮಕ್ಕಳಿಗೆ ಪರಿಸರದ ಬಗ್ಗೆ ಎಚ್ಚರ ಮೂಡಿಸುವುದರ ಜೊತೆಗೆ ಸದಾ ನಗುತ್ತಾ ಹಸನ್ಮುಖನಾಗಿ ಗೆಳೆಯರ ಗುಂಪಿನಲ್ಲಿ ಚಂದವಾಗಿದ್ದ. ನಟನದ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಕೊಂಡು ಪ್ರೀತಿ, ನಿಷ್ಠೆಗಳಿಂದ ಎಲ್ಲರ ಮನ ಗೆದ್ದಿದ್ದ.
ಧುತ್ತೆಂದು ಇವತ್ತು ಕಣ್ಮರೆಯಾಗಿ ಬಿಟ್ಟ. ಈ ವಾರದಲ್ಲಿ ನನ್ನ ಎರಡನೇ ಸ್ಮಶಾನ ಯಾತ್ರೆ. ಬೆಂಗಳೂರಿನ ಅವನ ಮನೆಯಲ್ಲಿ, ರಸ್ತೆಯಲ್ಲಿ, ಮಸಣದಲ್ಲಿ ಅವನ ಕುಟುಂಬದವರ, ರಂಗ ಸಹಪಾಠಿಗಳ, ಅವನ ಅಭಿಮಾನಿಗಳ, ಅಪಾರ ಬಂಧು ವರ್ಗದವರ ರೋಧನ ಮುಗಿಲು ಮುಟ್ಟಿತ್ತು! ಈ ಹುಡುಗ ಹ್ರೃತಿಕ್ ನ ಸಾವು.
ಮತ್ತು ಬೆಂಕಿಯ ನಡುವೆ ಅವನು ಬೆಂದು ಹೋಗುವ ಚಿತ್ರ ನನ್ನಂತೆ ಅವನನ್ನು ಪ್ರೀತಿಸುವ ಎಲ್ಲರನ್ನೂ ಬಹುಕಾಲ ನೋವಿನಲ್ಲಿ ತಳ್ಳಿ ಮನಸ್ಸಿನ ತುಂಬಾ ಸಂಕಟ ತುಂಬಿಬಿಡುತ್ತಿದೆ.
ಈ ಯವ್ವನಿಗರ ಸಾವು ನನ್ನನ್ನು ಕಾಡುತ್ತಲೆ ಇದೆ. ಅವನ ಪ್ರೀತಿಯ ತಂದೆಗೆ ಮತ್ತು ಕುಟುಂಬಕ್ಕೆ ನೋವನ್ನು ಕಳೆಯುವ ಶಕ್ತಿ ಸಿಗಲಿ. ನಟನದ ಎಲ್ಲರ ಪರವಾಗಿ ಈ ಮಗುವಿಗೆ ನಮನಗಳು ಎಂದು ಬರೆದಿರುವ ಮಂಡ್ಯ ರಮೇಶ್ ಸಂತಾಪ ಸೂಚಿಸಿದ್ದಾರೆ.

 

About The Author