Hubli News: ಹುಬ್ಬಳ್ಳಿ: ಮಹದಾಯಿ ಹೋರಾಟ ಇದು ನಿನ್ನೆ ಮೊನ್ನೆಯದಲ್ಲ. ರೈತರಿಗೆ ಮಾತ್ರವೇ ಇರುವ ಯೋಜನೆಯಂತೂ ಅಲ್ಲವೇ ಅಲ್ಲ. ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರ ಕುಡಿಯುವ ನೀರಿನ ಭವಣೆ ನೀಗಿಸುವ ಮಹತ್ವದ ಯೋಜನೆ. ಈ ಯೋಜನೆಯ ಹೋರಾಟ ಈಗ ಹೊಸ ಸ್ವರೂಪವನ್ನು ಪಡೆದುಕೊಳ್ಳಲಿದೆ.
ಮಹದಾಯಿ ನೀರಿಗಾಗಿ ಕಳೆದ ಸರಿಸುಮಾರು 10 ವರ್ಷದಿಂದ ನಿರಂತರ ಧರಣಿ ನಡೆಸುತ್ತಿರುವ ರೈತಸೇನೆ, ಮಹದಾಯಿ, ಕಳಸಾ ಬಂಡೂರಿ, ಕನ್ನಡಪರ ಸಂಘಟನೆಗಳು ಹೋರಾಟ ಮಾಡುತ್ತಲೇ ಬಂದಿದೆ. ಆದರೆ ಈಗ ಮಹದಾಯಿ ಹೋರಾಟಗಾರರು ವಿನೂತನ ರೀತಿಯಲ್ಲಿ ಧರಣಿ ನಡೆಸಲು ಮುಂದಾಗಿದ್ದಾರೆ. ಹೌದು.. ಜುಲೈ 31ಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಕಚೇರಿಯ ಮುಂದೆ ಅನಿರ್ಧಿಷ್ಟಾವಧಿ ಧರಣಿ ಮಾಡಲು ಮುಂದಾಗಿದ್ದಾರೆ. ರೈತ ಹೋರಾಟಗಾರರು ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದೂ ಆಯ್ತು. ನ್ಯಾಯಾಧೀಕರಣದ ತೀರ್ಪಿ ನಂತೆ ನೀರು ಹರಿಸಲು ಬೇಕಾದ ಅನುಮತಿ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದು, ಆಯ್ತು ಈಗ ಕೇಂದ್ರ ಸಚಿವರ ಕಚೇರಿಯ ಮುಂದೆ ಮತ್ತೇ ಹೋರಾಟದ ಕಹಳೆ ಮೊಳಗಿಸಲು ಮುಂದಾಗಿದ್ದಾರೆ.
ಇನ್ನೂ ಮಹದಾಯಿ ನೀರು ಹಂಚಿಕೆ ಕುರಿತಂತೆ 2018ರಲ್ಲೇ ನ್ಯಾಯಾಧೀಕರಣ ತೀರ್ಪು ನೀಡಿದೆ. ಕೇಂದ್ರ ಸರ್ಕಾರವೂ ಅದಕ್ಕೆ ಗೆಜೆಟ್ ನೋಟಿಫಿಕೇಶನ್ ಕೂಡ ಮಾಡಿದೆ. ಆದರೆ ಈವರೆಗೂ ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯದಿಂದ ಅನುಮತಿ ಸಿಗುತ್ತಿಲ್ಲ. ಇದಕ್ಕೆ ಕಾರಣ ಕೇಂದ್ರ ಸರ್ಕಾರ ಕೊಡುತ್ತಿಲ್ಲ. ಮಹದಾಯಿಯಲ್ಲಿ ನಿರ್ಲಕ್ಷ್ಯ ತೋರಿದ ಈ ಭಾಗದ ಕೇಂದ್ರ ಸಚಿವರು ರಾಜೀನಾಮೆ ನೀಡಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಮಹದಾಯಿ ಯೋಜನೆಗೆ ಈ ಭಾಗದ ಜನರು, ರೈತರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಹೀಗಿದ್ದರೂ ಈ ಸಮಸ್ಯೆ ಇತ್ಯರ್ಥಕ್ಕೆ ಮುಹೂರ್ತ ಕೂಡಿ ಬಂದಿಲ್ಲ. ಮಹದಾಯಿ ನೀರಿಗಾಗಿ ಮತ್ತೇ ಹೋರಾಟದ ಹಾದಿಯನ್ನು ತುಳಿದಿರುವುದು ನಿಜಕ್ಕೂ ಚಿಂತಾಜನಕವಾಗಿದೆ.
ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ




