Hubli News: ಹೆಸರು ಬೆಳೆ ಬೆಳೆದ ರೈತರಿಗೆ ಸಂಕಷ್ಟ: ಗಿಡದಲ್ಲಿ‌ ಮೊಳಕೆ‌ ಒಡೆಯುತ್ತಿದೆ ಬೆಳೆ..!

Hubli News: ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಬಿಡದೇ ಸುರಿಯುವ ಮಳೆಗೆ ಅನ್ನದಾತ ಕಂಗಾಲಾಗಿದ್ದಾನೆ. ಮಳೆಯ ಹೊಡೆತಕ್ಕೆ ರೈತ ಸಮುದಾಯವೇ ಬೆಂಡಾಗಿ ಹೋಗಿದೆ. ಮಳೆ ಅವಾಂತರ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಬೆಳೆಯನ್ನು ಎದುರು ನೋಡುತ್ತಿದ್ದ ರೈತನ ಬದುಕಿನಲ್ಲಿ ಈಗ ಬರಸಿಡಿಲು ಬಡೆದಂತಾಗಿದೆ.

ಧಾರವಾಡ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಕೆಯಾಗಿದೆ. ಜಿಲ್ಲೆಯಲ್ಲಿ 13 ಸಾವಿರ ಹೆಕ್ಟೇರ್ ಬಿತ್ತನೆ ಪ್ರದೇಶ ಹಾನಿಯಾಗಿದ್ದು, ಬೆಣ್ಣೆ ಹಳ್ಳ, ತುಪ್ಪರಿ ಹಳ್ಳ ಮತ್ತು ಇತರೆ ಹಳ್ಳಗಳಲ್ಲಿ ಪ್ರವಾಹ ಭೀತಿ ಕೂಡ ಎದುರಾಗಿದೆ. 4 ತಾಲೂಕುಗಳಲ್ಲಿ ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಜೊತೆಗೆ ಕೈಗೆ ಬಂದ ಹೆಸರು ಬೆಳೆಯನ್ನು, ಕಟಾವು ಮಾಡಲು ಬಿಡದ ರೀತಿಯಲ್ಲಿ ಮಳೆ ಸುರಿಯುತ್ತಿದೆ. ಅಲ್ಲದೆ ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೆಸರು ಬೆಳೆ ಗಿಡದಲ್ಲಿ ಮೊಳಕೆ ಒಡೆಯುತ್ತಿದೆ.

ಒಟ್ಟಿನಲ್ಲಿ ಜಿಲ್ಲೆಯಾದ್ಯಂತ ಈ ಬಾರಿ ಸಕಾಲಕ್ಕೆ ಮುಂಗಾರು ಪ್ರವೇಶವಾಗಿದ್ದರಿಂದ ಉತ್ತಮವಾಗಿ ಬೆಳೆ ಬೆಳೆದ ರೈತರಿಗೆ ಈಗ ಆತಂಕ ಎದುರಾಗಿದೆ. ಬೆಳೆ ಬೆಳೆದ್ರು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಕಂಗಾಲಾದ ಅನ್ನದಾತರು ಈಗ ಮಳೆರಾಯನ ಅಬ್ಬರಕ್ಕೆ ತತ್ತರಿಸಿ ಹೋಗಿದ್ದಾರೆ.

ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

About The Author