ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12 ಬಗ್ಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಬಂದಿದೆ. ಹಿಂದಿ ಬಿಗ್‌ಬಾಸ್ ಈಗಾಗಲೇ ಪ್ರಾರಂಭವಾಗಿದ್ದರೆ, ಕನ್ನಡ ಬಿಗ್‌ಬಾಸ್‌ನ ಮೊದಲ ಪ್ರೋಮೊ ಕೂಡ ಬಿಡುಗಡೆಯಾಗಿತ್ತು. ಆದರೆ ದಿನಾಂಕ ಘೋಷಣೆ ಮಾತ್ರ ಬಾಕಿ ಇತ್ತು. ಈ ನಡುವೆ ಚಾನೆಲ್ ಘೋಷಣೆ ಮಾಡುವ ಮುಂಚೆಯೇ, ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಸುದೀಪ್ ಅವರು ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಮೈಸೂರಿನಲ್ಲಿ ನಡೆದ ನಿರ್ಮಾಪಕ ಹಾಗೂ ರಾಜಕಾರಣಿ ಸಂದೇಶ್ ನಾಗರಾಜ್ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ವೇದಿಕೆ ಮೇಲೆ ಮಾತನಾಡಿದ ಸುದೀಪ್, ಅಭಿಮಾನಿಗಳ ಹರ್ಷೋದ್ಗಾರದ ನಡುವೆ, ಶೀಘ್ರವೇ ತೆರೆ ಮೇಲೆ ಬರಲಿದ್ದೇನೆ. ಸೆಪ್ಟೆಂಬರ್ 28ರಿಂದ ಕಿರುತೆರೆಗೆ ಬರಲಿದ್ದೇನೆ, ಆಶೀರ್ವಾದ ಮಾಡಿ ಎಂದು ಘೋಷಿಸಿದರು. ಇದರಿಂದ ಬಿಗ್‌ಬಾಸ್ ಸೀಸನ್ 12 ಸೆಪ್ಟೆಂಬರ್ 28ರಿಂದ ಆರಂಭವಾಗಲಿದೆ ಎಂಬುದು ಸ್ಪಷ್ಟವಾಯಿತು.
ಹಿಂದಿನ ಬಾರಿಗೆ ಬಿಗ್‌ಬಾಸ್ ಸೀಸನ್ 11 ಸೆಪ್ಟೆಂಬರ್ 29ರಂದು ಪ್ರಾರಂಭವಾಗಿತ್ತು. ಈ ಬಾರಿ ಒಂದು ದಿನ ಮುಂಚೆಯೇ ಅಂದರೆ 28ರಂದು ಪ್ರಾರಂಭವಾಗುತ್ತಿದೆ. ಮೂಲಗಳ ಪ್ರಕಾರ ಸ್ಪರ್ಧಿಗಳ ಆಯ್ಕೆ ಬಹುತೇಕ ಮುಗಿದಿದ್ದು, ಕೆಲವರ ಮಾತ್ರ ಬಾಕಿ ಇದೆ. ಕಳೆದ ಸೀಸನ್‌ನಲ್ಲಿ ಇದು ನನ್ನ ಕೊನೆಯ ಬಿಗ್‌ಬಾಸ್ ಎಂದು ಘೋಷಿಸಿದ್ದ ಸುದೀಪ್, ಆಯೋಜಕರ ಮನವೊಲಿಕೆಗೆ ಮಣಿದು ಮತ್ತೆ ನಿರೂಪಣೆಗೆ ಒಪ್ಪಿಕೊಂಡಿದ್ದಾರೆ. ಈ ಬಾರಿಯೂ ಅವರು ನಿರೂಪಕರಾಗಿ ಬಿಗ್‌ಬಾಸ್‌ಗೆ ಮತ್ತಷ್ಟು ಮೆರಗು ತುಂಬಲಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ