H.C ಮಹದೇವಪ್ಪ ಹೆಸ್ರಲ್ಲಿ ಲಕ್ಷ, ಲಕ್ಷ ವಂಚನೆ!

ಮೈಸೂರು ಜಿಲ್ಲೆಯ ಟಿ. ನರಸಿಪುರ ತಾಲ್ಲೂಕಿನ ಕೊಳತ್ತೂರು ಗ್ರಾಮದಲ್ಲಿ ಮಹತ್ತರ ವಂಚನೆಯೊಂದು ಬೆಳಕಿಗೆ ಬಂದಿದೆ. ಸಚಿವ ಹೆಚ್‌.ಸಿ. ಮಹದೇವಪ್ಪ ಅವರ ಹೆಸರಿನಲ್ಲಿ ಮಹಿಳೆಯೊಬ್ಬಳು ₹27 ಲಕ್ಷ ಹಣ ವಂಚಿಸಿರುವ ಘಟನೆ ನಾಡಿನ ಗಮನ ಸೆಳೆದಿದೆ.

ಕೊಳತ್ತೂರು ಗ್ರಾಮದ ಜ್ಯೋತಿ ಎಂಬ ಮಹಿಳೆ, ವಿವಿಧ ಸರ್ಕಾರಿ ಯೋಜನೆಗಳ ಸವಲತ್ತು ಮತ್ತು ಸಾಲ ಕೊಡಿಸಿಕೊಡುವುದಾಗಿ ನಂಬಿಸಿದ್ದಾಳೆ. ನೂರಾರು ಮಹಿಳೆಯರು ಹಾಗೂ ಯುವಕರಿಂದ ಲಕ್ಷಾಂತರ ರೂಪಾಯಿಗಳನ್ನು ವಸೂಲಿ ಮಾಡಿದ್ದಾಳೆ. ಈ ಮಹಿಳೆ ಅಧಿಕಾರಿಗಳ ಜೊತೆ ಸಂಪರ್ಕವಿದೆ. ನೆರವು ನೀಡುತ್ತಾರೆ ಎಂಬ ನಂಬಿಕೆಯನ್ನು ಸೃಷ್ಟಿಸಿ ಜನರನ್ನು ಮೋಸಗೊಳಿಸಿದ್ದಾಳೆ.

ಕೆಲವರು ತಮ್ಮ ಮನೆಯ ಬೆಲೆಬಾಳುವ ಆಭರಣಗಳನ್ನು ಮಾರಾಟ ಮಾಡಿ ಹಣ ಕೊಟ್ಟಿದ್ದರು. ಇನ್ನು ಕೆಲವರು ಕೃಷಿ ಕೆಲಸಕ್ಕೆ ಬೇಕಾದ ಸಾಲದ ಹಣವನ್ನು ಈಕೆಗೆ ನೀಡಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಆರ್ಥಿಕ ನಷ್ಟವೊಂದೆ ಅಲ್ಲ, ಭರವಸೆಗೂ ಹೊಡೆತ ಬಿದ್ದಂತಾಗಿದೆ.

ಸದ್ಯ ಸ್ಥಳೀಯ ಮೂಲಗಳ ಪ್ರಕಾರ, ಈಕೆ ಒಟ್ಟು ₹27 ಲಕ್ಷಕ್ಕೂ ಹೆಚ್ಚು ಮೊತ್ತದ ವಂಚನೆ ಮಾಡಿದ್ದಾಳೆ ಅನ್ನೋದು ಗೊತ್ತಾಗಿದೆ. ವಂಚಿತರಾದ ಗ್ರಾಮಸ್ಥರು ತಲಕಾಡು ಪೊಲೀಸ್ ಠಾಣೆ ಮುಂದೆ ಭಾರೀ ಪ್ರತಿಭಟನೆ ನಡೆಸಿದ್ದಾರೆ. ನ್ಯಾಯ ದೊರಕಿಸಿಕೊಡಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಪ್ರಕರಣದ ಬಗ್ಗೆ ತೀವ್ರ ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಗ್ರಾಮದಲ್ಲಿ ಆತಂಕ ಮತ್ತು ಆಕ್ರೋಶ ಉಂಟಾಗಿದ್ದು, ತಪ್ಪಿತಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

About The Author