ನರೇಂದ್ರ ಮೋದಿಗೆ ಶುಭಾಶಯಗಳ ಸುರಿಮಳೆ

ನರೇಂದ್ರ ಮೋದಿ ಅವರಿಗೆ ಇಂದು, 75ನೇ ಹುಟ್ಟುಹಬ್ಬದ ಸಂಭ್ರಮ. ಪ್ರಧಾನಮಂತ್ರಿಗೆ ಅಂತಾರಾಷ್ಟ್ರೀಯ ನಾಯಕರೂ ಕೂಡ, ಶುಭಾಶಯ ಸಂದೇಶ ಕಳಿಸಿದ್ದಾರೆ. ಪ್ರಮುಖವಾಗಿ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ, ಮೋದಿಯವರಿಗೆ ಕರೆ ಮಾಡಿ, ಜನುಮದಿನದ ಶುಭ ಕೋರಿದ್ದಾರೆ. ಈ ವಿಚಾರವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನನ್ನ ಸ್ನೇಹಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ, ದೂರವಾಣಿ ಕರೆ ಮಾಡಿದ್ದೆ. ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದೇನೆ. ರಷ್ಯಾ, ಉಕ್ರೇನ್‌ ನಡುವಿನ ಯುದ್ಧ ನಿಲ್ಲುವಲ್ಲಿ, ನಿಮ್ಮೆಲ್ಲಾ ಬೆಂಬಲಕ್ಕೆ ಧನ್ಯವಾದಗಳು ಅಂತಾ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಧನ್ಯವಾದ ತಿಳಿಸಿದ್ದಾರೆ. ಭಾರತ-ಅಮೆರಿಕ ಸಮಗ್ರ ಮತ್ತು ಜಾಗತಿಕ ಸಹಭಾಗಿತ್ವವನ್ನು, ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ, ನಿಮ್ಮ ಉಪಕ್ರಮಗಳನ್ನು ನಾವು ಬೆಂಬಲಿಸುತ್ತೇವೆ ಅಂತಾ ಟ್ವೀಟ್‌ ಮಾಡಿದ್ದಾರೆ.

 

ಮೋದಿ ಅವರ ಹುಟ್ಟುಹಬ್ಬಕ್ಕೆ ಆಡಳಿತ ಪಕ್ಷ, ವಿಪಕ್ಷಗಳ ನಾಯಕರೂ ಕೂಡ, ಪಕ್ಷಾತೀತವಾಗಿ ಶುಭಾಶಯ ಕೋರಿದ್ದಾರೆ. ರಾಜ್ಯ ಬಿಜೆಪಿ ಕೂಡ ಟ್ವೀಟ್‌ ಮೂಲಕ ಶುಭ ಕೋರಿದ್ದು, ವಿಕಸಿತ ಭಾರತ ನಿರ್ಮಾಣದ ಮಹತ್ವಾಕಾಂಕ್ಷೆಯೊಂದಿಗೆ, ದೇಶಕ್ಕಾಗಿ ದುಡಿಯುತ್ತಿರುವ ನಿಸ್ವಾರ್ಥ ಕರ್ಮಯೋಗಿ, ಅಭಿವೃದ್ದಿಯ ಹರಿಕಾರ, ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಅಂತಾ ಪೋಸ್ಟ್‌ ಮಾಡಿದ್ದಾರೆ.

 

ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಕೂಡ ಶುಭ ಕೋರಿದ್ದಾರೆ. ಸರಿಸಾಟಿ ಇಲ್ಲದ ವಿಶ್ವನಾಯಕರಾಗಿ ವಿಶ್ವವೇ ನಿಬ್ಬೆರಗಾಗುವಂತೆ, ಭಾರತವನ್ನು ಮುನ್ನಡೆಸುತ್ತಿರುವ ಹಾಗೂ ಆತ್ಮನಿರ್ಭರತೆಯ ಮೂಲಕ ವಿಕಸಿತ ಭಾರತ ಸಾಕಾರಗೊಳಿಸುವ ನಿಮ್ಮ ಸಂಕಲ್ಪವು, ಸಮಸ್ತ ಭಾರತೀಯರು ಹೆಮ್ಮೆಯಿಂದ ತಲೆ ಎತ್ತಿ ನಿಲ್ಲುವಂತೆ ಮಾಡಿದೆ. ನಿಮ್ಮ ದೃಷ್ಟಿಕೋನವು ಭರವಸೆಯ ಬೆಳಕು ಮತ್ತು ದುರ್ಬಲರ ಕಲ್ಯಾಣ, ಸಬಲೀಕರಣಕ್ಕಾಗಿ ತಾವು ರೂಪಿಸಿರುವ ಕಾರ್ಯಕ್ರಮಗಳು ಜನಪರತೆಯ ಅನನ್ಯ ಮಾದರಿ ಹಾಗೂ ಪ್ರೇರಣೆ. ಭಾರತವನ್ನು ಪ್ರಗತಿಯ ಉನ್ನತಿಯತ್ತ ಮುನ್ನಡೆಸಿ ಜಾಗತಿಕ ಶಕ್ತಿಯನ್ನಾಗಿಸಲು ಸರ್ವಶಕ್ತಿಯನ್ನೂ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಅಂತಾ ಪೋಸ್ಟ್‌ ಮಾಡಿದ್ದಾರೆ

 

About The Author