Monday, October 20, 2025

Latest Posts

ಪ್ರೀತಂಗೌಡ ಸಂಧಾನಕ್ಕೆ ಒಂದಾದ BJP ನಾಯಕರು

- Advertisement -

2028ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಾಳಯ, ಈಗಿನಿಂದಲೇ ಅಖಾಡ ಸಜ್ಜುಗೊಳಿಸುತ್ತಿದೆ. 2023ರಲ್ಲಾದ ತಪ್ಪು ಮತ್ತೆ ಮರುಕಳಿಸದಂತೆ ಎಚ್ಚರಿಕೆಯ ಹೆಜ್ಜೆ ಇಡೋದಕ್ಕೆ ಹೈಕಮಾಂಡ್‌ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಮೊದಲ ಹಂತವಾಗಿ ನಾಯಕರ ನಡುವಿನ ಭಿನ್ನಾಭಿಪ್ರಾಯ ಶಮನಕ್ಕೆ ಮುಂದಾಗಿದೆ.

ಕೆಲ ತಿಂಗಳ ಹಿಂದೆ ಜನಾರ್ದನ ರೆಡ್ಡಿ, ಶ್ರೀರಾಮುಲು ನಡುವಿನ ಮನಸ್ತಾಪ ಸರಿ ಮಾಡಿತ್ತು. ಇಬ್ಬರೂ ನಾಯಕರನ್ನು ದಿಲ್ಲಿಗೆ ಕರೆಸಿಕೊಂಡಿದ್ದ ಹೈಕಮಾಂಡ್‌, ಮದ್ದು ಅರೆಯುವ ಕೆಲಸ ಮಾಡಿತ್ತು. ಬಳಿಕ ವರಿಷ್ಠರ‌ ನಿರ್ದೇಶನದ ಮೇರೆಗೆ ಸ್ವತಃ ಬಿ.ವೈ. ವಿಜಯೇಂದ್ರ ಬಳ್ಳಾರಿಗೆ ಎಂಟ್ರಿ ಕೊಟ್ಟಿದ್ರು. ಇಬ್ಬರೂ ನಾಯಕರ ಜೊತೆ ಸುದೀರ್ಘ ಚರ್ಚೆ ಮಾಡಿ, ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಕೂರಿಸಿಕೊಂಡು ಎಲ್ಲವೂ ಸರಿ ಹೋಗಿದೆ ಅನ್ನೋ ಸಂದೇಶ ಕೊಟ್ಟಿದ್ರು.

ಇದೀಗ ತುಮಕೂರು ಸರದಿ. ವಿ. ಸೋಮಣ್ಣ ಕೇಂದ್ರ ಸಚಿವರಾದ ಬಳಿಕ, ಜಿಲ್ಲಾ ನಾಯಕರ ನಡುವಿನ ಸಂಬಂಧ ತೀರಾ ಹದಗೆಟ್ಟಿದೆ. ಹಲವು ಸಂದರ್ಭಗಳಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ಸೆಪ್ಟೆಂಬರ್‌ 17ರಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು, ಪ್ರತ್ಯೇಕವಾಗಿ ಆಚರಿಸಿದ್ರು. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ್ದ ಹೈಕಮಾಂಡ್‌, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಪರಿಸ್ಥಿತಿ ತಿಳಿಗೊಳಿಸುವಂತೆ ಆದೇಶಿಸಿತ್ತು.

ಇದೀಗ ಬಿವೈ ವಿಜಯೇಂದ್ರ ಅವರ ಸೂಚನೆ ಮೇರೆಗೆ ತುಮಕೂರು ಜಿಲ್ಲೆಗೆ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಎಂಟ್ರಿ ಕೊಟ್ಟಿದ್ದಾರೆ. ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸಭೆ ನಡೆಸಿದ್ದು, ಜಿಲ್ಲಾ ನಾಯಕರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಇಷ್ಟು ದಿನ ಸೋಮಣ್ಣರಿಂದ ದೂರವೇ ಉಳಿದಿದ್ದ ಶಾಸಕರಾದ ಸುರೇಶ್‌ ಗೌಡ, ಜ್ಯೋತಿ ಗಣೇಶ್‌, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್‌, ಸಭೆಗೆ ಹಾಜರಾಗಿದ್ರು.

ಪ್ರೀತಂ ಗೌಡ ಅವರ ಸುದೀರ್ಘ ಮಾತುಕತೆಯ ಬಳಿಕ ಕೋಪ ತಣ್ಣಗಾಗಿದೆ. ಸಂಧಾನದ ಬಳಿಕ ಮುನಿಸು ಮರೆತು ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಸೋಮಣ್ಣ ಜೊತೆ ಎಲ್ಲಾ ಶಾಸಕರು, ಸ್ಥಳೀಯ ನಾಯಕರು ವೇದಿಕೆ ಹಂಚಿಕೊಂಡಿದ್ದಾರೆ. ಒಟ್ನಲ್ಲಿ ಶೀಘ್ರವೇ ಸ್ಥಳೀಯ ಪಂಚಾಯಿತಿ ಚುನಾವಣೆಗಳೂ ನಡೆಯಲಿದ್ದು, ಬಿಜೆಪಿ ಹೈಕಮಾಂಡ್‌ ಗೆಲುವಿನ ದಾಳ ಉರುಳಿಸಲು ಸಜ್ಜಾಗುತ್ತಿದೆ.

- Advertisement -

Latest Posts

Don't Miss