ಪ್ರಖ್ಯಾತ ಹಾಸನಾಂಬ ಉತ್ಸವ ಆರಂಭವಾಗಿ 11 ದಿನಕ್ಕೆ ಕಾಲಿಟ್ಟರೂ, ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇನ್ನು, ಕೇವಲ 2 ದಿನ ಮಾತ್ರ ಹಾಸನಾಂಬ ದರ್ಶನ ಸಿಗಲಿದೆ. ಈಗ ಬಿಟ್ರೆ ಮುಂದಿನ ವರ್ಷದವರೆಗೂ ಕಾಯಲೇಬೇಕು. ಹೀಗಾಗಿ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸುತ್ತಿದ್ದು, ಪ್ರತಿ ದಿನ ಭಕ್ತರ ಸಂಖ್ಯೆ ಎರಡ್ಮೂರು ಲಕ್ಷ ದಾಟುತ್ತಿದೆ.
ಇಂದು ಕೂಡ ಮುಂಜಾನೆ 5 ಗಂಟೆಯಿಂದಲೇ ದೇವರ ದರ್ಶನ ಆರಂಭವಾಗಿದೆ. ದೀಪಾವಳಿ ಹಬ್ಬ ಇದ್ದರೂ ಜನರು 10 ಕಿಲೋ ಮೀಟರ್‌ಗಟ್ಟಲೆ ಸರತಿ ಸಾಲಿನಲ್ಲಿ ನಿಂತುಕೊಂಡು ಬಂದು, ದೇವರ ದರ್ಶನ ಪಡೆಯುತ್ತಿದ್ದಾರೆ.
ಧರ್ಮ ದರ್ಶನಕ್ಕೆ ಬರುವವರು ದೇವರ ಸ್ತುತಿ ಮಾಡಲೆಂದೇ, ಭಜನಾ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಪ್ರತಿದಿನ ಹಲವು ಸಂಘಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ಬಂದು ದೇವರ ಪಾರಾಯಣ ಮಾಡುತ್ತಿದ್ದಾರೆ.
ಇನ್ನು, ರಾಜಕಾರಣಿಗಳು ಕೂಡ ಹಾಸನಾಂಬೆ ದರ್ಶನ ಪಡೆಯುತ್ತಿದ್ದಾರೆ. ಇಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕೂಡ, ಕುಟುಂಬ ಸಮೇತರಾಗಿ ಹಾಸನಕ್ಕೆ ಆಗಮಿಸಿದ್ದು, ದೇವರ ದರ್ಶನ ಮಾಡಿದ್ದಾರೆ. ಜೊತೆಗೆ ವಿಐಪಿಗಳ ವ್ಯವಸ್ಥೆಯನ್ನು ಶ್ಲಾಘಿಸಿದ್ದಾರೆ. ರಾಜ್ಯ ಸರ್ಕಾರ, ಸಚಿವ ಕೃಷ್ಣಭೈರೇಗೌಡ, ಜಿಲ್ಲಾಡಳಿತ ಮತ್ತು ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ಹೇಳಿದ್ರು.
ಅಕ್ಟೋಬರ್ 9ರಂದು ಹಾಸನಾಂಬ ದೇಗುಲ ಓಪನ್ ಆಗಿತ್ತು. ಅಕ್ಟೋಬರ್ 10ರಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮತ್ತು ಅಕ್ಟೋಬರ್ 22ರವರೆಗೆ ದೇವರ ದರ್ಶನ ಸಿಗಲಿದ್ದು, ಅಕ್ಟೋಬರ್ 23ರಂದು ಅಂತಿಮ ಪೂಜೆಯ ನಂತರ ದೇವಾಲಯದ ಬಾಗಿಲು ಕ್ಲೋಸ್ ಆಗಲಿದೆ. ಇನ್ನು 1 ವರ್ಷದ ಬಳಿಕವಷ್ಟೇ ಹಾಸನಾಂಬೆ ದರ್ಶನ ಸಿಗಲಿದೆ.

