Monday, October 27, 2025

Latest Posts

ರಂಗೇರಿದ ಬಿಹಾರ ಚುನಾವಣೆ ಕಣ, ಮೋದಿ – ಅಮಿತ್ ಶಾ ಭರ್ಜರಿ ಪ್ರಚಾರ!

- Advertisement -

ಬಿಹಾರ: ಬಿಹಾರ ವಿಧಾನಸಭೆ ಚುನಾವಣೆಯ ತಯಾರಿಗಳು ತಾರಕಕ್ಕೇರುತ್ತಿವೆ. ಈ ವೇಳೆ, ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದ ವಿವಿಧ ಭಾಗಗಳಲ್ಲಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಪ್ರಧಾನಿ ಮೋದಿ ಅವರು ಸಮಷ್ಟಿಪುರ್ ಮತ್ತು ಬೇಗುಸರಾಯ್ ಜಿಲ್ಲೆಗಳಲ್ಲಿ ಆಯೋಜಿಸಲಾದ ಎರಡು ಪ್ರಮುಖ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ಸಭೆಗೂ ಮುನ್ನ ಸಮಾಜವಾದಿ ನಾಯಕ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ದಿವಂಗತ ಕರ್ಪೂರಿ ಠಾಕೂರ್ ಅವರ ಜನ್ಮಸ್ಥಳವಾದ ಕರ್ಪುರಿಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಅವರಿಗೆ ಗೌರವ ಸಲ್ಲಿಸಲಿದ್ದಾರೆ. ಕಳೆದ ವರ್ಷ ಎನ್‌ಡಿಎ ಸರ್ಕಾರ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು.

ಮತ್ತೊಂದೆಡೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಸಿವಾನ್ ಮತ್ತು ಬಕ್ಸಾರ್ ಜಿಲ್ಲೆಗಳಲ್ಲಿ ಚುನಾವಣೆ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಎನ್‌ಡಿಎಗೆ ಶಕ್ತಿ ತುಂಬುವ ಉದ್ದೇಶದಿಂದ ಪ್ರಧಾನಿ ಮತ್ತು ಶಾ ಒಟ್ಟಾಗಿ ಇಂದು ನಾಲ್ಕು ಬೃಹತ್ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಇದು ಪ್ರಚಾರದ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸಲಿದೆ.

ಪಕ್ಷ ಸಂಪೂರ್ಣ ಸಜ್ಜಾಗಿದೆ. ಪ್ರಧಾನಿ ಮತ್ತು ಶಾ ಅವರ ಪ್ರಚಾರ ಎನ್‌ಡಿಎಗೆ ಮತ್ತಷ್ಟು ಬಲ ನೀಡಲಿದೆ ಎಂದು ಬಿಹಾರ ಬಿಜೆಪಿ ಘಟಕದ ವಕ್ತಾರ ನಿರಾಜ್ ಕುಮಾರ್ ಅವರು ತಿಳಿಸಿದ್ದಾರೆ. ಗುರುವಾರ ನಡೆದ ‘ಮೇರಾ ಬೂತ್ ಸಬ್ಸೆ ಮಜ್ಬೂತ್ ಯುವ ಸಂವಾದ ಕಾರ್ಯಕ್ರಮದಲ್ಲಿ ಆಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಬಿಹಾರದ ಜಂಗಲ್ ರಾಜ್ ಚರ್ಚೆ ಇನ್ನು 100 ವರ್ಷಗಳ ಕಾಲ ಸಾಗುತ್ತದೆ.

ವಿರೋಧ ಪಕ್ಷಗಳು ತಮ್ಮ ದುಷ್ಕೃತ್ಯಗಳನ್ನು ಮರೆಮಾಡಲು ಪ್ರಯತ್ನಿಸಿದರೂ ಜನರು ಅವರನ್ನು ಕ್ಷಮಿಸುವುದಿಲ್ಲ ಎಂದು ವ್ಯಂಗ್ಯವಾಗಿ ಹೇಳಿದರು. ದೇಶದಲ್ಲಿ ಅಭಿವೃದ್ಧಿಯ ಮಹಾಯಜ್ಞ ನಡೆಯುತ್ತಿದೆ. ಕೇಂದ್ರ ಮತ್ತು ಬಿಹಾರದಲ್ಲಿ ಸ್ಥಿರ ಸರ್ಕಾರ ಇರುವುದರಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗಿದೆ ಎಂದಿದ್ದಾರೆ. ಮಹಾಘಟಬಂಧನ್‌ನ ಮುಖ್ಯಮಂತ್ರಿ ಅಭ್ಯರ್ಥಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ ಇಂದು ಸತತ ಮೂರು ಪ್ರಚಾರ ಸಭೆಗಳನ್ನು ನಡೆಸಲಿದ್ದಾರೆ.

ಅವರ ಕೊನೆಯ ಸಭೆ ಸಮಷ್ಟಿಪುರ್ ಜಿಲ್ಲೆಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 14ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಬಿಹಾರದ ರಾಜಕೀಯ ಕಣ ಈಗ ಸಂಪೂರ್ಣ ಬಿಸಿಯಾಗಿದೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಪ್ರಚಾರ ಎನ್‌ಡಿಎಗೆ ಎಷ್ಟು ಬಲ ತುಂಬುತ್ತದೆ ಎಂಬುದನ್ನು ನೋಡಬೇಕಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss