ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಪವರ್ ಶೇರಿಂಗ್ ವಿಚಾರ ತೀವ್ರಗೊಂಡಿರುವ ಹೊತ್ತಲ್ಲಿ, ಎಂಎಲ್‌ಸಿ ರಾಜೇಂದ್ರ ರಾಜಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆ ಬಳಿಕ, ರಾಜ್ಯದಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರು ಶಾಸಕರ ಬಲದ ಮೇಲೆ ಸಿಎಂ ಸ್ಥಾನ ನಿರ್ಧಾರವಾಗುವುದಿಲ್ಲ. ವರಿಷ್ಠರು ಹೇಳಿದ್ದನ್ನು ನಾವು ಕೇಳಲೇಬೇಕು, ಒಪ್ಪಿಕೊಳ್ಳಲೇಬೇಕು. ಕಾಂಗ್ರೆಸ್‌ನಲ್ಲಿ ಎಲ್ಲವೂ ಹೈಕಮಾಂಡ್ ಮಟ್ಟದಲ್ಲೇ ನಿರ್ಧಾರ ಆಗುತ್ತದೆ ಅಂತಾ ಡಿಕೆಶಿ ಹೇಳಿದ್ರು. ಇದಕ್ಕೆ ಎಂಎಲ್‌ಸಿ ರಾಜೇಂದ್ರ ಕೌಂಟರ್ ಕೊಟ್ಟಿದ್ದಾರೆ.
ಶಾಸಕಾಂಗ ಸಭೆಯಲ್ಲಿ ಆಯ್ಕೆಯಾದವರೇ ಮುಖ್ಯಮಂತ್ರಿ ಆಗ್ತಾರೆ. ಇನ್ನೂ ಶಾಸಕಾಂಗ ಸಭೆಯೂ ಕರೆಯಬೇಕಿದೆ. ಅಲ್ಲಿ ಸಿಎಲ್‌ಪಿ ನಾಯಕ ಯಾರ್ ಆಗ್ತಾರೋ, ಅವರೇ ಮುಂದಿನ ಮುಖ್ಯಮಂತ್ರಿ ಆಗ್ತಾರೆ. ಶಾಸಕರ ಬಲ ಇದ್ದವರೇ ಮುಖ್ಯಮಂತ್ರಿ ಆಗೋದು ಎಂದು ರಾಜೇಂದ್ರ ಹೇಳಿದ್ರು. ಇದೇ ವೇಳೆ ಡಿಕೆಶಿ ಟೆಂಪಲ್ ರನ್ ಬಗ್ಗೆಯೂ ಮಾತನಾಡಿದ್ದು, ದೇವಸ್ಥಾನಗಳಿಗೆ ಹೋಗೋದ್ರಲ್ಲಿ ತಪ್ಪೇನಿಲ್ಲ. ನಾವು ಹೋಗ್ತೀವಿ, ನೀವು ಹೋಗ್ತೀರಾ. ಹರಕೆ ತೀರಿಸಲು ಹೋಗಬಹುದು. ಒಳ್ಳೆಯ ಅಧಿಕಾರ ಸಿಗಲಿ ಎಂದುಕೊಂಡು ಹೋಗಬಹುದು.
ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯಲ್ಲಿ ತಪ್ಪೇನಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ. ಸತೀಶ್ ಜಾರಕಿಹೊಳಿ ಹೆಸರನ್ನು ಉತ್ತರಾಧಿಕಾರಿಯಾಗಿ ಪ್ರಸ್ತಾಪಿಸಿದ್ದಾರೆ. ತಂದೆಯ ರಾಜಕೀಯ ಜೀವನ ಕೊನೆಗೊಳ್ಳುವ ನಂತರ, ಅಹಿಂದ ನಾಯಕರಲ್ಲಿ ಸತೀಶ್ ಜಾರಕಿಹೊಳಿ ಅವರೇ ಸಿಎಂ ಸ್ಥಾನಕ್ಕೆ ಯೋಗ್ಯರೆಂದು ಅವರು ಹೇಳಿದ್ದಾರೆ.
2 ವರ್ಷಗಳ ನಂತರ ನಾವು ಸತೀಶ್ ಅವರನ್ನು ಸಿಎಂ ಮಾಡಬೇಕು ಎಂದು ಸೂಚಿಸಿದ್ದಾರೆ. 2028ರ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾಗಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸತೀಶ್ ಜಾರಕಿಹೊಳಿ ಅವರೂ ಸ್ಪಂದಿಸಿದ್ದಾರೆ. ಇದೀಗ ನನಗೆ ಸಿಎಂ ಆಕಾಂಕ್ಷೆ ಇಲ್ಲ. ಆದರೆ 2028ರಲ್ಲಿ ನಾನು ಸಿಎಂ ಆಗುತ್ತೇನೆ ಎಂದು ಹೇಳಿದ್ದಾರೆ. ಈ ದೃಷ್ಟಿಯಿಂದಲೇ ಯತೀಂದ್ರ ಆ ಮಾತು ಹೇಳಿರಬಹುದು ಎಂದು ಎಂಎಲ್‌ಸಿ ರಾಜೇಂದ್ರ ಸಮರ್ಥಿಸಿದ್ದಾರೆ.
ಇದೇ ವೇಳೆ ತಂದೆ ರಾಜಣ್ಣ ಅವರಿಗೆ ಮತ್ತೆ ಮಂತ್ರಿ ಸ್ಥಾನ ನೀಡಬೇಕೆಂದು ಪರೋಕ್ಷವಾಗಿ ಹೇಳಿದ್ದಾರೆ. ಏನೂ ತಪ್ಪು ಮಾಡದೇ ಇದ್ದಿದ್ರಿಂದ, ಮುಂದೆ ಸಂಪುಟ ಪುನಾರಚನೆ ವೇಳೆ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದೇವೆ ಅನ್ನೋದನ್ನು ಬಹಿರಂಗಪಡಿಸಿದ್ದಾರೆ.

