Sandalwood News: 90ರ ದಶಕದಲ್ಲಿ ಹಿಟ್ ಸಿನಿಮಾಗಳು, ಹಾಡುಗಳನ್ನು ನೀಡಿದ ನಾಗತೀಹಳ್ಳಿ ಚಂದ್ರಶೇಖರ್ ಅವರು ಕರ್ನಾಟಕ ಟಿವಿ ಜೊತೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮ್ಮ ಕಾಲದ ಹಾಡಿಗೂ ಇಂದಿನ ಕಾಲದ ಹಾಡಿಗೂ ಇರುವ ವ್ಯತ್ಯಾಸದ ಬಗ್ಗೆ ವಿವರಿಸಿದ್ದಾರೆ.
ಮೊದಲೆಲ್ಲ ಹಾಡು ಕೇಳಲು ಹಿತವಾಗಿತ್ತು. ಸಾಹಿತ್ಯ ಅರ್ಥಪೂರ್ಣವಾಗಿತ್ತು. ಹಾಗಾಗಿಯೇ ಜನ ಅಂದಿನ ಹಾಡನ್ನು ಇಂದು ಕೂಡ ಮೈಮರೆತು ಕೇಳುತ್ತಾರೆ. ಆದರೆ ಇಂದಿನ ಕೆಲವು ಹಾಡುಗಳಲ್ಲಿ ಅಂಥ ಸಾಹಿತ್ಯವಿರುವುದಿಲ್ಲ. ಆದರೂ ಆ ಹಾಡುಗಳು ಗೆಲ್ಲುತ್ತಿದೆ. ಕಾರಣ ಜನ ಸಾಹಿತ್ಯಕ್ಕಿಂತ, ಶಬ್ದಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ನಾಗತೀಹಳ್ಳಿ ಚಂದ್ರಶೇಖರ್ ಅವರು ಜನ ಇತ್ತೀಚೆಗೆ ಸಾಹಿತ್ಯಕ್ಕಿಂತ ಹಾಡಿನ ಶಬ್ದಕ್ಕೆ ಹೆಚ್ಚು ಬೆಲೆ ನೀಡುತ್ತಿದ್ದಾರೆ. ಹಾಗಾಗಿಯೇ ತುಂಬಾ ಸಂಗೀತ ನಿರ್ದೇಶಕರು ಶಬ್ದ ಮಾಡುವುದರ ಮೂಲಕ ತಾವು ಸಂಗೀತ ನಿರ್ದೇಶಕರು ಅಂತಾ ಘೋಷಿಸಿಕೊಳ್ಳುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಗೀತ ಸದ್ದಾದರೂ ಕೂಡ ಅದೊಂದು ಮಧುರವಾದ ಶಬ್ದ. ಹಾಗಾಗಿ ಇಂದು ಸಂಗೀತ ಮತ್ತು ಸಾಹಿತ್ಯ ಸಿನಿಮಾ ಎಂಬ ಸಮುದ್ರದಲ್ಲಿ ಬೆರೆಯಲಾಗದ ನದಿಗಳ ಹಾಗೆ ಚಡಿಪಡಿಸುತ್ತಿದೆ. ಮೊದಲೆಲ್ಲ ಕಾವ್ಯ, ಕಥೆ, ಸಂಗೀತ, ಸಾಹಿತ್ಯ ಎಲ್ಲ ನದಿಗಳು ಸೇರಿ ಸಿನಿಮಾ ಎಂಬ ಸಮುದ್ರವಾಗುತ್ತಿತ್ತು. ಬಹುಶಃ ವೇಗದ ಕಾಲಕ್ಕೆ ಇದು ಬೇಕಾಗಿಲ್ಲ. ಅಲ್ಲದೇ ಜನರಿಗೆ ಆಯ್ಕೆಯ ಪ್ರಶ್ನೆ ಇಲ್ಲ. ಏನು ಕೊಡುತ್ತಾರೆ ಅದನ್ನು ನೋಡಬೇಕಾದ ಪರಿಸ್ಥಿತಿ ಇದೆ. ಆದರೆ ಕಾಲ ಬದಲಾಗುತ್ತದೆ. ಜನ ಮತ್ತೆ ಮೊದಲಿನಂತೆ ಸಾಹಿತ್ಯ ಇಷ್ಟಪಡುತ್ತಾರೆ ಎಂದು ನಾಗತೀಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

