ದೆಹಲಿ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಭದ್ರತಾ ಪಡೆಗಳ ಮುಖ್ಯಸ್ಥರ ಜತೆ ಅಮಿತ್ ಶಾ ಸಭೆ ನಡೆಸಲಿದ್ದಾರೆ. ನಿನ್ನೆಯೇ ಘಟನಾ ಸ್ಥಳಕ್ಕೆ ಅಮಿತ್ ಶಾ ಭೇಟಿ ನೀಡಿದ್ದರು. ಇಂದು ಮಹತ್ವದ ಉನ್ನತ ಮಟ್ಟದ ಸಭೆ ನಡೆಸಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಈ ಸಭೆಯು ದೇಶದ ಆಂತರಿಕ ಭದ್ರತಾ ಸನ್ನಿವೇಶವನ್ನು ಪರಿಶೀಲಿಸುವ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸುವ ಕುರಿತು ಕೇಂದ್ರೀಕೃತವಾಗಲಿದೆ.
ಸಭೆಯಲ್ಲಿ ಭದ್ರತಾ ಪಡೆಗಳ ಮುಖ್ಯಸ್ಥರು, ದೆಹಲಿ ಪೊಲೀಸ್ ಆಯುಕ್ತರು, ಗುಪ್ತಚರ ಬ್ಯೂರೋ ಮುಖ್ಯಸ್ಥರು ಮತ್ತು ಆಂತರಿಕ ಭದ್ರತೆಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ದೆಹಲಿಯಲ್ಲಿ ಸಂಭವಿಸಿದ ಕಾರು ಬಾಂಬ್ ಸ್ಫೋಟದಂತಹ ಘಟನೆಗಳ ನಂತರ ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸುವ ಅಗತ್ಯತೆಯ ಕುರಿತು ವ್ಯಾಪಕ ಚರ್ಚೆ ನಡೆಸಲಾಗುತ್ತದೆ.
ದಿಲ್ಲಿಯಲ್ಲಿ ನಡೆದಿದ್ದು ಆತ್ಮಾಹುತಿ ದಾಳಿಯೋ? ಆಕಸ್ಮಿಕವೋ? ಎಂಬುದು ಇನ್ನೂ ಖಚಿತವಾಗಿಲ್ಲ. ಭಯೋತ್ಪಾದಕ ದಾಳಿ ಬಗ್ಗೆ ತನಿಖಾ ಸಂಸ್ಥೆ ಅನುಮಾನ ವ್ಯಕ್ತಪಡಿಸಿದೆ. ಕಾರಿನಲ್ಲಿ ಸ್ಪೋಟಕ ಇರಿಸಿ ಸ್ಫೋಟಿಸಿರುವ ಸಾಧ್ಯತೆಯೂ ಇದೆಯಂತೆ. ಸ್ಫೋಟಗೊಂಡ ಕಾರಿನಲ್ಲಿ ಸಿಕ್ಕ ಮೃತದೇಹದ ಡಿಎನ್‌ಎ ಪರೀಕ್ಷೆಗೆ ಸಿದ್ಧತೆ ನಡೆಸಲಾಗಿದೆ. ಮತ್ತೊಂದೆಡೆ ಕಾರ್ ಡೀಲರ್‌ನಿಂದ ಐ20 ಕಾರು ತಾರೀಕ್ ಎಂಬಾತ, ನಕಲಿ ದಾಖಲೆಗಳನ್ನು ನೀಡಿ ಕಾರು ಖರೀದಿಸಿದ್ದನಂತೆ. ಸದ್ಯ ತಾರಿಕ್‌ನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ತನಿಖೆ ವೇಳೆ ಶಾಕಿಂಗ್ ಅಂಶವೊಂದು ಬಯಲಾಗಿದೆ. ವೈಟ್ ಕಾಲರ್ ಉಗ್ರರ ಕೈವಾಡ ಇದ್ದು, ಸ್ಫೋಟಕ್ಕೆ ಜಮ್ಮುಕಾಶ್ಮೀರ-ಫರಿದಾಬಾದ್-ದೆಹಲಿಯ ನಂಟು ಇರುವ ಬಗ್ಗೆ ಹೇಳಲಾಗ್ತಿದೆ.




