Mysuru: ಮೈಸೂರಿನಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯನವರು, ಇಡೀ ರಾಜ್ಯದ ಬೆಳವಣಿಗೆಯನ್ನು ಬಜೆಟ್ ನಲ್ಲಿ ನಿರೀಕ್ಷಿಸಬಹುದಾಗಿದ್ದು, ಸಮಾಜದ ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶ ನೀಡುವುದೇ ಈ ಬಾರಿಯ ಬಜೆಟ್ ನ ಉದ್ದೇಶವಾಗಿದೆ ಎಂದಿದ್ದಾರೆ.
ಬಿಜೆಪಿಯ ಪ್ರಧಾನಿ ನರೇಂದ್ರ ಮೋದಿ ಅವರು ಸಾಲ ಮಾಡಿದ್ದಾರೆ. ಸಾಲ ಮಾಡದೇ ಅಭಿವೃದ್ಧಿ ಸಾಧ್ಯವಿಲ್ಲ. ಆರ್ಥಿಕ ಹೊಣೆಗಾರಿಕೆ ಕಾಯ್ದೆ ತಿಳಿಸಿರುವ ಮಾನದಂಡಗಳ ಮಿತಿಯಲ್ಲಿ ಸಾಲದ ಪ್ರಮಾಣ ಇದೆ. ಈ ಕಾಯ್ದೆಯಂತೆ ಸಾಲವು ಶೇ. 25 ರಷ್ಟಿರಬೇಕಿದ್ದು, ನಮ್ಮ ಸಾಲದ ಪ್ರಮಾಣ 24.94 ಇದ್ದು, ಮಿತಿಯೊಳಗೇ ಇದೆ. ಕೇಂದ್ರದ ಸಾಲದ ಪ್ರಮಾಣ 214 ಲಕ್ಷ ಕೋಟಿ ಇದೆ. ಮೋದಿಯವರು ಅಧಿಕಾರಕ್ಕೆ ಬಂದ ನಂತರ ₹165 ಲಕ್ಷ ಕೋಟಿ ಸಾಲವನ್ನು ಮಾಡಿದ್ದಾರೆ. ಇದು ಸದರಿ ಕಾಯ್ದೆಯ ಪ್ರಕಾರ 55.6 % ರಷ್ಟು ಇದೆ. ಭಾರತದ ವಿತ್ತೀಯ ಕೊರತೆ 4.4 ರಷ್ಟಿದ್ದು, ಕರ್ನಾಟಕ ರಾಜ್ಯದ ವಿತ್ತೀಯ ಕೊರತೆ 2.95 ರಷ್ಟಿದ್ದು, ಕಾಯ್ದೆಯು ಸೂಚಿಸಿರುವ ಜಿಡಿಪಿಯ ಶೇ. 3 ರ ಮಿತಿಯೊಳಗೆ ಇದೆ. ಕರ್ನಾಟಕದ ಜಿಎಸ್‌ಡಿಪಿ ₹33,05,500 ಕೋಟಿ ಇದೆ. ಬಿಜೆಪಿಯವರು ನಮ್ಮ ಸರ್ಕಾರ ಹೆಚ್ಚು ಸಾಲ ಮಾಡಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಆರ್ಥಿಕ ಹೊಣೆಗಾರಿಕೆ ಕಾಯ್ದೆಯು ಸೂಚಿಸಿರುವ ಮಾನದಂಡದ ಮಿತಿಯೊಳಗೆ ಸಾಲ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಈ ಬಾರಿಯ ಬಜೆಟ್ ಸಾಮಾಜಿಕ ನ್ಯಾಯವನ್ನು ಕೇಂದ್ರೀಕರಿಸಿ ಮಾಡಲಾಗಿದ್ದು, ಇಡೀ ರಾಜ್ಯದ ಬೆಳವಣಿಗೆಯನ್ನು ಬಜೆಟ್ ನಲ್ಲಿ ನಿರೀಕ್ಷಿಸಬಹುದು. ಇದು ಸಮಾಜದ ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶ ನೀಡುವ ಉದ್ದೇಶವನ್ನು ಹೊಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯಕ್ಕೆ ನ್ಯಾಯಯುತವಾಗಿ ನೀಡಬೇಕಾಗಿದ್ದ ಅನುದಾನವನ್ನು ನೀಡದಿರುವುದರಿಂದ ರಾಜ್ಯದ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿದೆ. ಕೇಂದ್ರದ ಜಿಎಸ್‌ಟಿ ದರಪರಿಷ್ಕರಣೆಯಿಂದ ರಾಜ್ಯಕ್ಕೆ 10 ಸಾವಿರ ಕೋಟಿ ನಷ್ಟವಾಗಿದೆ.
ಪಕ್ಷದ ವರಿಷ್ಠರು ಅವಕಾಶ ನೀಡಿದರೆ ಮುಂದಿನ ಎರಡು ಬಜೆಟ್ ಗಳನ್ನೂ ನಾನೇ ಮಂಡಿಸುತ್ತೇನೆ. ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ. ದಾಖಲೆ ಮುರಿಯುವುದು ಸಾಧನೆಯಲ್ಲ. ಆದರೆ ಜನರು ಆಶೀರ್ವದಿಸಿ, ಅವಕಾಶ ನೀಡಿದರೆ, ಖಂಡಿತ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಇನ್ನೆರಡು ವರ್ಷ ಸಿಎಂ ಆಗುವ ಆಸೆಯನ್ನು ಹೇಳಿದ್ದಾರೆ.




