Political News: ಬಿಜೆಪಿ ಎಂದಿಗೂ ಮೇಲ್ವರ್ಗದವರ ಪರ, ಅದು ಶ್ರೀಮಂತರ ಪರವಾದ ಪಕ್ಷ: ಸಿಎಂ ಸಿದ್ದರಾಮಯ್ಯ

Political News: ಸಿಎಂ ಸಿದ್ದರಾಮಯ್ಯ ಇಂದು ದಾವಣಗೆರೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ್ದು, ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದ ಆರ್ಥಿಕತೆಯ ಸ್ಥಿತಿಗತಿಗಳ ಎಲ್ಲಾ ಅಂಶಗಳ ದಾಖಲೆಗಳನ್ನು ಬಜೆಟ್ ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಬಿಜೆಪಿಯವರ ಅವಧಿಯಲ್ಲಿ ₹5,30,000 ಕೋಟಿ ಸಾಲ ಮಾಡಲಾಗಿದೆ. ಗ್ಯಾರಂಟಿ ಯೋಜನೆಯು ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪುತ್ತಿದ್ದು, ಇದರಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ ಎಂದು ಸಿಎಂ ಸಿದ್ದರಾಮ್ಯ ಹೇಳಿದ್ದಾರೆ.

ಬಿಜೆಪಿ ಸರ್ಕಾರ ಗುತ್ತಿಗೆದಾರರ 29 ಸಾವಿರ ಕೋಟಿಯಷ್ಟು ಬಿಲ್ ಬಾಕಿ ಉಳಿಸಿತ್ತು. ಅದರಲ್ಲಿ 24 ಸಾವಿರ ಕೋಟಿ ಬಾಕಿ ಬಿಲ್ಲು ಪಾವತಿಸಲಾಗಿದೆ. ಈ ಬಗ್ಗೆ ದಾಖಲಾತಿಯ ಆಧಾರದಲ್ಲಿ ಸ್ಪಷ್ಟ ಉತ್ತರವನ್ನು ಅಧಿವೇಶನದಲ್ಲಿ ನೀಡಲಾಗಿದೆ ಎಂದು ಸಿಎಂ ಹೇಳಿದ್ದಾರೆ.

ಬೆಲೆ ಏರಿಕೆಯನ್ನು ನಿಯಂತ್ರಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರಕ್ಕೆ ಸೇರಿದ್ದು. ಕೇಂದ್ರ ಪೂರೈಸುವ ಗ್ಯಾಸ್, ಪೆಟ್ರೋಲ್, ಡೀಸೆಲ್ ಗಳನ್ನು ವಿತರಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ನೆರೆರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಬೆಲೆಗಳು ಕಡಿಮೆಯಿದೆ ಎಂದು ಸಿಎಂ ಇದೇ ವೇಳೆ ಹೇಳಿದ್ದಾರೆ.

ರಾಜ್ಯದಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಬಿಜೆಪಿಯವರಿಗೆ ಅಹಿಂದ ವರ್ಗಗಳ ಮೇಲೆ ಕಾಳಜಿಯಿಲ್ಲ. ಬಿಜೆಪಿಯವರು ಎಂದಿಗೂ ಶ್ರೀಮಂತರ ಪರ. ನಮ್ಮ ಸರ್ಕಾರ ಯೂನಿವರ್ಸಲ್ ಬೇಸಿಕ್ ಇನ್ಕಂ ತತ್ವದಂತೆ ನಡೆದು, ತಳಸಮುದಾಯದವರಿಗೆ ಅನುಕೂಲ ಕಲ್ಪಿಸುತ್ತಿದೆ. ಬಿಜೆಪಿ ಬೆಂಬಲಿಗ ಮತದಾರರನ್ನು ಸೇರಿಸಿ, ಸರ್ವರಿಗೂ ಗ್ಯಾರಂಟಿ ಯೋಜನೆಗಳನ್ನು ನೀಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿನ ಜನರನ್ನು ಸಬಲೀಕರಣಗೊಳಿಸಲು ಇವುಗಳು ನೆರವಾಗುತ್ತವೆ. ಈ ವರ್ಷ 56,432 ಹುದ್ದೆಗಳ ನೇಮಕಾತಿ ಮಾಡಲಿದ್ದು, ಹೀಗೆ ಹಂತ ಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

About The Author