Sirsi: ಶಿರಸಿಯ ಕೆನರಾ ಡಿಸಿಸಿ ಬ್ಯಾಂಕ್ ಲಿಮಿಟೆಡ್ 2025-26ನೇ ಆರ್ಥಿಕ ಸಾಲಿನಲ್ಲಿ ಗಮನಾರ್ಹ ಸಾಧನೆ ಮಾಡಿ 27.35 ಕೋಟಿ ರೂಪಾಯಿ ಲಾಭ ದಾಖಲಿಸಿದೆ.
ಈ ಕುರಿತು ಬ್ಯಾಂಕಿನ ಅಧ್ಯಕ್ಷ ಶಿವರಾಮ್ ಹೆಬ್ಬಾರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಈ ಅವಧಿಯಲ್ಲಿ ಬ್ಯಾಂಕ್ ಒಟ್ಟು 7576.26 ಕೋಟಿ ರೂಪಾಯಿ ವ್ಯವಹಾರ ನಡೆಸಿರುವುದಾಗಿ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ 74 ಶಾಖೆಗಳ ಮೂಲಕ ಸೇವೆ ನೀಡುತ್ತಿರುವ ಬ್ಯಾಂಕ್, ಮೊಬೈಲ್ ಬ್ಯಾಂಕಿಂಗ್ ಹಾಗೂ ಯುಪಿಐ ಸೇವೆಗಳನ್ನು ಕೂಡ ಯಶಸ್ವಿಯಾಗಿ ಜಾರಿಗೆ ತಂದಿದೆ. 106 ವರ್ಷಗಳ ಸುದೀರ್ಘ ಸೇವಾ ಇತಿಹಾಸ ಹೊಂದಿರುವ ಈ ಬ್ಯಾಂಕ್, ಗ್ರಾಹಕರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ ಎಂದು ಅವರು ಹೇಳಿದರು.
ಕಳೆದ ಸಾಲಿನಲ್ಲಿ ಕೃಷಿ ಸಾಲ ವಸೂಲಿ ಪ್ರಮಾಣ ಶೇ.99.18ಕ್ಕೆ ತಲುಪಿದ್ದು, ಬ್ಯಾಂಕಿನ ಆರ್ಥಿಕ ಸ್ಥಿರತೆಯನ್ನು ತೋರಿಸುತ್ತದೆ. ಬ್ಯಾಂಕಿನ ದುಡಿಯುವ ಬಂಡವಾಳ 5269.46 ಕೋಟಿ ರೂಪಾಯಿಯಾಗಿದ್ದು, ಬಾಕಿ ಇರುವ ಸಾಲದ ಮೊತ್ತ 3384.85 ಕೋಟಿ ರೂಪಾಯಿಯಾಗಿದೆ ಎಂದು ವಿವರಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಕೃಷ್ಣ ದೇಸಾಯಿ, ಪ್ರಧಾನ ವ್ಯವಸ್ಥಾಪಕ ಶ್ರೀಕಾಂತ ಭಟ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.




