ನಡುರಸ್ತೆಯಲ್ಲೇ ರಂಪಾಟ; ಮುಸ್ತಫಾ ಖಾದ್ರಿ ಅಟ್ಟಹಾಸ!

ಕೊಪ್ಪಳ ಜಿಲ್ಲೆಯಲ್ಲಿ ಸಂಚಲನ ಮೂಡಿಸಿರುವ ಮುಸ್ತಫಾ ಖಾದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಆತಂಕಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುವತಿಯನ್ನು ಬಲವಂತವಾಗಿ ಪ್ರೀತಿಸಲು ಹಾಗೂ ಮದುವೆಯಾಗಲು ಒತ್ತಾಯಿಸುತ್ತಿರುವ ದೃಶ್ಯ ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿದೆ.

ವೈರಲ್ ದೃಶ್ಯಗಳಲ್ಲಿ ಮುಸ್ತಫಾ ಖಾದ್ರಿ ಬೈಕ್ ಮೇಲೆ ಕುಳಿತು ಯುವತಿಯೊಂದಿಗೆ ವಾಗ್ವಾದ ನಡೆಸುತ್ತಿರುವುದು ಗೋಚರಿಸಿದೆ. ಇಷ್ಟು ದಿನ ಮಾತನಾಡಿ, ಪ್ರೀತಿ ಮಾಡಿದ್ದೇನು? ಈಗ ಯಾಕೆ ನನ್ನನ್ನು ಲವ್ ಮಾಡಲ್ಲ, ಮದುವೆಯಾಗಲ್ಲ ಅಂತೀಯಾ?ಎಂದು ಒತ್ತಾಯಿಸುತ್ತಾ ಕಿರುಕುಳ ನೀಡಿರುವುದು ಕೇಳಿಬರುತ್ತದೆ. ಅಲ್ಲದೆ, ನೀನು ಇನ್ನೊಬ್ಬರ ಜೊತೆ ಯಾಕೆ ಮಾತನಾಡುತ್ತೀಯ? ಎಂದು ಯುವತಿಯ ವೈಯಕ್ತಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಿರುವುದೂ ಕಂಡುಬಂದಿದೆ.

ಆದರೆ, ಮುಸ್ತಫಾ ಕಿರುಕುಳಕ್ಕೆ ಬಗ್ಗದ ಯುವತಿ, “ನಿನ್ನ ಬಗ್ಗೆ ಈಗ ನನಗೆ ಸಂಪೂರ್ಣವಾಗಿ ಅರ್ಥವಾಗಿದೆ. ಹಾಗಾಗಿ ನಿನ್ನನ್ನು ಪ್ರೀತಿಸಲು ಸಾಧ್ಯವಿಲ್ಲ. ನನ್ನನ್ನು ಪ್ರಶ್ನಿಸಲು ನಿನಗೆ ಯಾವುದೇ ಹಕ್ಕಿಲ್ಲ” ಎಂದು ಧೈರ್ಯವಾಗಿ ಪ್ರತಿಕ್ರಿಯಿಸಿದ್ದಾಳೆ.

ಜಗಳದ ವೇಳೆ ಮುಸ್ತಫಾ ತನ್ನ ಮೊಬೈಲ್‌ನಲ್ಲಿ ಸ್ವತಃ ವಿಡಿಯೋ ಚಿತ್ರೀಕರಿಸಿಕೊಂಡಿದ್ದು, ”ಈ ವಿಡಿಯೋ ಮುಂದೆ ಬೇಕಾಗುತ್ತದೆ, ಮಾತಾಡು” ಎಂದು ಹೇಳಿರುವುದು ಆತನ ಉದ್ದೇಶಗಳ ಬಗ್ಗೆ ಗಂಭೀರ ಅನುಮಾನ ಹುಟ್ಟಿಸಿದೆ. ಇದು ಯುವತಿಯನ್ನು ಬ್ಲಾಕ್‌ಮೇಲ್ ಮಾಡುವ ಸಂಚು ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇನ್ನೊಂದೆಡೆ, ಆರೋಪಿಯ ಮೊಬೈಲ್‌ನಲ್ಲಿ ಸಾವಿರಾರು ವಿಡಿಯೋಗಳು ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದ್ದು, ಇಷ್ಟೊಂದು ಸಾಕ್ಷ್ಯಗಳಿದ್ದರೂ ಕಠಿಣ ಕ್ರಮ ಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಸದ್ಯ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯಬೇಕಿದ್ದು, ಯುವತಿಯ ಸುರಕ್ಷತೆ ಮತ್ತು ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಹೆಚ್ಚಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author