ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣ ನಗರಕ್ಕೆ ಒಂದು ರೀತಿಯ ಆಕ್ಸಿಜನ್ ಪ್ಲಾಂಟ್ ಇದ್ದಂತೆ. 1100 ಎಕರೆಗಳ ವಿಶಾಲ ವ್ಯಾಪ್ತಿಯ ಈ ಆವರಣದಲ್ಲಿ ಈಗಾಗಲೇ ಹಲವು ಸಂಸ್ಥೆಗಳಿಗೆ ಜಾಗ ಹಂಚಿಕೆ ಮಾಡಲಾಗಿದೆ. ಇದೀಗ ಇಲ್ಲಿ ರೋಗಿಗಳ ತುರ್ತು ಚಿಕಿತ್ಸೆಗೆ ನೆರವಾಗಲು ಏರ್ ಆಂಬುಲೆನ್ಸ್ ಹೆಲಿಪ್ಯಾಡ್ ನಿರ್ಮಾಣ ಮಾಡುವ ಬೇಡಿಕೆ ಕೇಳಿಬಂದಿದೆ.
ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಅವರು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಏರ್ ಆಂಬುಲೆನ್ಸ್ ಹೆಲಿಪ್ಯಾಡ್ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಅವರು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರಿನಲ್ಲಿ ತುರ್ತು ಚಿಕಿತ್ಸೆಗೆ ಏರ್ ಆಂಬುಲೆನ್ಸ್ ಸೇವೆಯ ಅವಶ್ಯಕತೆ ಹೆಚ್ಚುತ್ತಿದೆ. ಈ ಹಿನ್ನೆಲೆ ವಿಶ್ವವಿದ್ಯಾಲಯದ ವಿಶಾಲ ಜಾಗವನ್ನು ಬಳಸಿಕೊಳ್ಳುವ ಬಗ್ಗೆ ಪ್ರಸ್ತಾವನೆ ಮುಂದಿಡಲಾಗಿದೆ.
ಆದರೆ ಈ ಪ್ರಸ್ತಾವನೆಗೆ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಸಂಘ ಆಕ್ಷೇಪ ವ್ಯಕ್ತಪಡಿಸಿದೆ. ವಿಶ್ವವಿದ್ಯಾಲಯದ ಜಾಗವನ್ನು ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಬಳಸಬೇಕು. ಏರ್ ಆಂಬುಲೆನ್ಸ್ ಹೆಲಿಪ್ಯಾಡ್ ನಿರ್ಮಾಣಕ್ಕೆ ವಿರೋಧವಿಲ್ಲ, ಆದರೆ ಅದಕ್ಕಾಗಿ ಬೇರೆಡೆ ಜಾಗ ಹುಡುಕುವುದು ಉತ್ತಮ ಎಂದು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಂದೆಡೆ ಶಾಸಕ ದಿನೇಶ್ ಗೂಳಿಗೌಡ ಅವರ ಪತ್ರಕ್ಕೆ ಸ್ಪಂದಿಸಿರುವ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಸೂಚನೆ ನೀಡಿದ್ದಾರೆ. ಒಟ್ಟಾರೆ ನಗರದಲ್ಲಿ ಏರ್ ಆಂಬುಲೆನ್ಸ್ ಹೆಲಿಪ್ಯಾಡ್ ಅವಶ್ಯಕತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದ್ದರೂ, ಅದರ ನಿರ್ಮಾಣಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಆವರಣವೇ ಆಯ್ಕೆಯಾಗುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ.
ವರದಿ : ಲಾವಣ್ಯ ಅನಿಗೊಳ




