Political News: ಮೋದಿ ಕುರ್ಚಿ ಉಳಿಸಲು ಕರ್ನಾಟಕದ ಜನರ ಬಟ್ಟೆ ಕಸಿಯುವ ಕೆಲಸ ಮಾಡಬೇಡಿ: ದಿನೇಶ್ ಗುಂಡೂರಾವ್

Political News: ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ಪಕ್ಷಗಳು ಪರಸ್ಪರ ವಾಗ್ದಾಳಿ ನಡೆಸುವುದು ಸರ್ವೇ ಸಾಮಾನ್ಯ. ಅದೇ ರೀತಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ರಾಜ್ಯ ಬಿಜೆಪಿ, ಅಸಮರ್ಥ ಆರೋಗ್ಯ ಸಚಿವ @dineshgrao ಅವರ ನಿರ್ಲಕ್ಷ್ಯದಿಂದ ಆರೋಗ್ಯ ಇಲಾಖೆ ಅಯೋಮಯವಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಹೋದರೆ ಬದುಕಿ ಬರುತ್ತೇವೆ ಎಂಬ ನಂಬಿಕೆಯೇ ಬಡ ರೋಗಿಗಳಿಗೆ ಹೊರಟು ಹೋಗಿದೆ. ಮೂಲಸೌಕರ್ಯವಿಲ್ಲದ ಆಸ್ಪತ್ರೆಗಳು ಎಂದು ಆರೋಪ ಮಾಡಿದೆ.

ಈ ಆರೋಪಕ್ಕೆ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದು, ಬಿಜೆಪಿಯ ವಾಟ್ಸಾಪ್ ಯುನಿವರ್ಸಿಟಿ ಶೂರರೇ, ಸುಳ್ಳು ಆರೋಪಗಳ ಮೂಲಕ ಜನರ ಹಾದಿ ತಪ್ಪಿಸುವುದೇ ರಾಜ್ಯ ಬಿಜೆಪಿ ನಾಯಕರ ನಿತ್ಯದ ಕಾಯಕ. ಆಡಳಿತ ಪಕ್ಷವಾಗಿ ಸರಿಯಾಗಿ ಆಡಳಿತ ನಡೆಸಲಾಗದೇ ಜನರಿಂದ ತಿರಸ್ಕಾರಗೊಂಡು ಈಗ ವಿರೋಧ ಪಕ್ಷದಲ್ಲಿ ಕೂತಿದ್ದೀರಿ. ಈಗಲೂ ಬುದ್ಧಿ ಕಲಿಯದೇ ಮತ್ತೆ ಮತ್ತೆ ಸುಳ್ಳನ್ನೇ ಹಂಚುವುದನ್ನೇ ನಂಬಿ ಕೂತಿರುವುದು ರಾಜ್ಯದ ದುರಾದೃಷ್ಟ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಕ್ಕೂಟ ವ್ಯವಸ್ಥೆಯಲ್ಲಿ ಆಡಳಿತದಲ್ಲಿರಲಿ ಅಥವಾ ವಿರೋಧ ಪಕ್ಷವಾಗಿರಲಿ ನೆಲದ ವಿಚಾರವಾಗಿ ಒಟ್ಟಾಗಿ ಹೋರಾಡುವ ಪ್ರಬುದ್ಧತೆ ಬಿಜೆಪಿ ಕರ್ನಾಟಕ ಹಾಗೂ ಅದರ ನಾಯಕರಿಗೆ ಸ್ವಲ್ಪವೂ ಇದ್ದಂತೆ ಕಾಣುತ್ತಿಲ್ಲ. ನಮ್ಮ ಇಲಾಖೆಯ ಚಿಂತೆ ನಿಮಗೆ ಬೇಡ, ಕರ್ನಾಟಕ ಆರೋಗ್ಯ ಇಲಾಖೆಯ ಸಾಧನೆಯನ್ನು ಕೇಂದ್ರದ ಮಂತ್ರಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಾಧನೆಯೆಂದು ಬಿಂಬಿಸಿಕೊಳ್ಳುತ್ತಾರೆ. ವಿದೇಶದಲ್ಲಿ ನಮ್ಮ ಸಾಧನೆಗಳನ್ನು ಹೊಗಳಿ, ಸಂಸತ್ತಿನಲ್ಲಿ ನಮ್ಮ ಹಕ್ಕುಗಳನ್ನು ಕಸಿಯುವ ಕೆಲಸವನ್ನ ಕೇಂದ್ರ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಸಚಿವರು ವಾಗ್ದಾಳಿ ನಡೆಸುತ್ತಿದ್ದಾರೆ.

ನಿಮಗೆ ಕರ್ನಾಟಕದ ಅಸ್ಮಿತೆ ನೆಲದ ಪ್ರಗತಿ ಮುಖ್ಯವಾಗಿದ್ದರೆ ಮೊದಲು ಅದನ್ನು ನಿಮ್ಮ ಕೇಂದ್ರ ನಾಯಕರಿಗೆ ಮನವರಿಕೆ ಮಾಡಿ. ಮಹಿಳಾ ಮೀಸಲಾತಿಯನ್ನ ಸರಿಯಾಗಿ ಜಾರಿ ಮಾಡಿ. ಮೋದಿ ಕುರ್ಚಿ ಉಳಿಸಲು ಕರ್ನಾಟಕದ ಜನರ ಬಟ್ಟೆ ಕಸಿಯುವ ಕೆಲಸ ಮಾಡಬೇಡಿ ಎಂದು ಬಿಜೆಪಿ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯವಾಗಿಯೇ ಚಾಟಿ ಬೀಸಿದ್ದಾರೆ.

About The Author