ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗೌಡನಕೆರೆ ಗ್ರಾಮದ ಹೊರವಲಯದಲ್ಲಿ ರೇಬಿಸ್ ಸೋಂಕಿತ ಕರಡಿ ರಂಪಾಟ ಸೃಷ್ಟಿಸಿ ಆತಂಕ ಮೂಡಿಸಿದ ಘಟನೆ ನಡೆದಿದೆ. ಗ್ರಾಮದ ಪಕ್ಕದ ರೈತರ ಜಮೀನುಗಳ ಬಳಿ ಕರಡಿ ಕಾಣಿಸಿಕೊಂಡ ಹಿನ್ನೆಲೆ ಗಾಬರಿಗೊಂಡ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಸಿಬ್ಬಂದಿಗಳ ವಾಹನದ ಮೇಲೆ ಕರಡಿ ಏಕಾಏಕಿ ದಾಳಿ ನಡೆಸಿದೆ.
ಕ್ರೂರವಾಗಿ ವರ್ತಿಸಿದ ಕರಡಿ, ತನ್ನ ಚೂಪಾದ ಉಗುರುಗಳು ಮತ್ತು ಬಾಯಿಯಿಂದ ವಾಹನದ ಟೈರ್ಗಳನ್ನು ಕಿತ್ತೊಡೆಯಲು ಯತ್ನಿಸಿದ್ದು, ಪರಿಸ್ಥಿತಿ ತೀವ್ರವಾಗಿತ್ತು. ಇದರಿಂದ ಪ್ರಾಣಭಯಗೊಂಡ ಸಿಬ್ಬಂದಿಗಳು ಜೀಪಿನಲ್ಲೇ ಕುಳಿತುಕೊಂಡು ತಮ್ಮನ್ನು ರಕ್ಷಿಸಿಕೊಂಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಕರಡಿ ಬೇರೆಡೆಗೆ ಸರಿದಾಗ, ಸಿಬ್ಬಂದಿಗಳು ವಾಹನದಿಂದ ಇಳಿದು ಸುರಕ್ಷಿತ ಸ್ಥಳಕ್ಕೆ ಓಡಿ ಪಾರಾಗಿದ್ದಾರೆ.
ನಂತರ ಅದೇ ಪ್ರದೇಶದಲ್ಲಿದ್ದ ಶೆಡ್ ಒಳಗೆ ಕರಡಿಯನ್ನು ಕೂಡಿ ಹಾಕುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಈ ನಡುವೆ, ಚಿಕಿತ್ಸೆಗಾಗಿ ಬನ್ನೇರುಘಟ್ಟದಿಂದ ತಜ್ಞರನ್ನು ಕರೆಯಲಾಗಿತ್ತು. ಆದರೆ ಶೆಡ್ ಒಳಗೆ ಸೇರಿಕೊಂಡಿದ್ದ ಕರಡಿಯಿಂದ ಯಾವುದೇ ಚಲನವಲನ ಕಾಣಿಸದ ಹಿನ್ನೆಲೆಯಲ್ಲಿ ಅನುಮಾನ ವ್ಯಕ್ತವಾಯಿತು.
ಅರವಳಿಕೆ ಮದ್ದು ನೀಡಿ ಪರಿಶೀಲನೆ ನಡೆಸಿದಾಗ, ಕರಡಿ ಈಗಾಗಲೇ ಮೃತಪಟ್ಟಿರುವುದು ದೃಢಪಟ್ಟಿದೆ. ಅರವಳಿಕೆ ನೀಡುವ ಒಂದು ಗಂಟೆ ಮುಂಚೆಯೇ ಕರಡಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ವೈದ್ಯರ ಪ್ರಾಥಮಿಕ ಪರಿಶೀಲನೆಯ ಪ್ರಕಾರ, ರೇಬಿಸ್ ರೋಗದ ಕೊನೆಯ ಹಂತದಲ್ಲಿ ಕರಡಿ ಅತಿಯಾಗಿ ಆಕ್ರಮಣಕಾರಿ ಸ್ವಭಾವ ತೋರಿಸಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅಂತಿಮ ವರದಿ ನಿರೀಕ್ಷಿಸಲಾಗುತ್ತಿದೆ. ಈ ಘಟನೆ ಸ್ಥಳೀಯರಲ್ಲಿ ಭಯ ಹುಟ್ಟಿಸಿದ್ದು, ಅರಣ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ವರದಿ : ಲಾವಣ್ಯ ಅನಿಗೋಳ




