Haveri News: ಹಾವೇರಿಯಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಮಹಿಳಾ ಮೀಸಲಾಾತಿ ಬಗ್ಗೆ ಮಾತನಾಡಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ 2023ರಲ್ಲಿಯೇ ಅಂಗೀಕಾರವಾಗಿದೆ. ಪ್ರಸ್ತುತ ಕ್ಷೇತ್ರ ಮರುವಿಂಗಡನೆಯನ್ನು ಸೇರಿಸಿ ಮಂಡಿಸಿದ್ದಾರೆ. ನಾವು ಮಹಿಳಾ ಮೀಸಲಾತಿಗೆ ವಿರೋಧಿಸಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ , ಸಂವಿಧಾನದ 73,74 ನೇ ತಿದ್ದುಪಡಿಗಳನ್ನು ರಾಜೀವ್ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ ತಂದಿದ್ದರು. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಬೇಕೆಂದು ಬಿಜೆಪಿ ಎಂದಿಗೂ ಒತ್ತಾಯಿಸಿಲ್ಲ. ಈಗ ಮಾತ್ರ ಮಹಿಳಾ ಮೀಸಲಾತಿಗೆ ಒತ್ತಾಯಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರ ಮರುವಿಂಗಡನೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ದಕ್ಷಿಣದಲ್ಲಿ 50% ಮಾಡಿದರೆ ಉತ್ತರ ಪ್ರದೇಶದಲ್ಲಿ 80 ಸ್ಥಾನಗಳಿವೆ. ಅಲ್ಲಿಗೆ 120 ಸ್ಥಾನಗಳಾಗುತ್ತವೆ. ಕರ್ನಾಟಕದಲ್ಲಿ 42 ಸ್ಥಾನಗಳಾಗುತ್ತವೆ. ಉತ್ತರ ಭಾರತದಲ್ಲಿ ಸ್ಥಾನಗಳು ಹೆಚ್ಚಾಗುವುದರ ಬಗ್ಗೆ ನಮ್ಮ ವಿರೋಧವೇ ಹೊರತು ಮಹಿಳಾ ಮೀಸಲಾತಿಗೆ ವಿರೋಧವಿಲ್ಲ. ನಾವು ಮಹಿಳಾ ಮೀಸಲಾತಿ ಪರವಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಂವಿಧಾನ ತಿದ್ದುಪಡಿಗೆ ಮೂರನೇ ಎರಡರಷ್ಟು ಬಹುಮತ ಲೋಕಸಭೆಯಲ್ಲಿ ಇರಬೇಕು. 50% ರಾಜ್ಯಗಳು ಇದಕ್ಕೆ ಒಪ್ಪಿಗೆ ನೀಡಬೇಕು. ಕ್ಷೇತ್ರ ಮರು ವಿಂಗಡಣೆಗೆ ವಿರೋಧ ಮಾಡಿದ್ದೇವೆ ಹೊರತು ಮಹಿಳಾ ಮೀಸಲಾತಿಗೆ ನಮ್ಮ ವಿರೋಧವಿಲ್ಲ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರೋಧಿಗಳು ಎಂದು ಹಸಿಹಸಿ ಸುಳ್ಳು ಹೇಳುತ್ತಿದ್ದಾರೆ. ತಮಿಳುನಾಡು, ಪಶ್ಚಿಮ ಬಂಗಾಳದ ಚುನಾವಣೆ ಇರುವುದರಿಂದ ನಮ್ಮನ್ನು ಮಹಿಳಾ ಮೀಸಲಾತಿ ವಿರೋಧಿಗಳು ಎಂದು ಬಿಂಬಿಸಿ,ರಾಜಕೀಯ ಲಾಭ ಪಡೆಯುವುದು ಅವರ ಉದ್ದೇಶವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
2023ರಲ್ಲೇ 450 ಮತಗಳನ್ನು ಪಡೆದು ಅಂಗೀಕಾರವಾಗಿರುವ ಮಸೂದೆಯನ್ನು ನರೇಂದ್ರ ಮೋದಿಯವರು ಏಕೆ ಜಾರಿಮಾಡಲಿಲ್ಲ? ಕ್ಷೇತ್ರ ಮರುವಿಂಗಡನೆಯನ್ನು ಬೇರ್ಪಡಿಸಿ ಮಸೂದೆ ತಂದಿದ್ದರೆ, ಯಾರೂ ವಿರೋಧಿಸುತ್ತಿರಲಿಲ್ಲ. ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಪಕ್ಷ ಎಂದಿಗೂ ವಿರೋಧ ಮಾಡಿಲ್ಲ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.




