ಪೊಲೀಸ್ ಠಾಣೆಯಿಂದ ಎಸ್ಕೇಪ್ ಆಗಿದ್ದ 16 ಕೋಟಿ ವಂಚಕ ಸಂತೋಷ್ ಪತ್ತೆ!

ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಠಾಣೆಯಿಂದ ಪರಾರಿಯಾಗಿದ್ದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಬಳಿಕ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು 24 ಗಂಟೆಗಳೊಳಗೆ ಆರೋಪಿಯನ್ನು ಮತ್ತೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಳ್ಳಾರಿ ನಗರದ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಸಂತೋಷ್ ಪೊಲೀಸ್ ವಶದಲ್ಲಿದ್ದಾಗಲೇ ತಪ್ಪಿಸಿಕೊಂಡಿದ್ದು, ಪೊಲೀಸರು ತಕ್ಷಣವೇ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ತಡರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಮತ್ತೆ ಬಂಧಿಸಿ ಠಾಣೆಗೆ ಕರೆತರಲಾಗಿದೆ.

ಸಂತೋಷ್ ವಿರುದ್ಧ KIADB ಕಚೇರಿಯಲ್ಲಿ ಸುಮಾರು ₹16.17 ಕೋಟಿ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪ ಕೇಳಿಬಂದಿದೆ. ಗುತ್ತಿಗೆ ನೌಕರನಾಗಿದ್ದ ಸಂತೋಷ್, ಅಧಿಕಾರಿಗಳ ನಕಲಿ ಸಹಿಗಳನ್ನು ಬಳಸಿ ಚೆಕ್‌ಗಳ ಮೂಲಕ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಖಾಸಗಿ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಒಟ್ಟು ಏಳು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

2022ರಿಂದ 2026ರವರೆಗೆ ಹಂತ ಹಂತವಾಗಿ ಹಣ ದೋಚಲಾಗಿದೆ ಎನ್ನಲಾಗಿದ್ದು, 2026ರ ಮಾರ್ಚ್ 3ರಂದು ಪ್ರಕರಣ ಬಹಿರಂಗಗೊಂಡಿತ್ತು. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದ. ನಿರಂತರ ಹುಡುಕಾಟದ ಬಳಿಕ ಏಪ್ರಿಲ್ 15ರಂದು ಪೊಲೀಸರು ಸಂತೋಷ್ ಅನ್ನು ಬಂಧಿಸಿದ್ದರು.

ಸರ್ಕಾರಿ ಹಣ ದುರ್ಬಳಕೆ ಪ್ರಕರಣವಾಗಿರುವುದರಿಂದ ತನಿಖೆಯನ್ನು Criminal Investigation Department ಗೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಸಿಐಡಿಗೆ ಒಪ್ಪಿಸುವ ಮುನ್ನವೇ ಆರೋಪಿ ಠಾಣೆಯಿಂದ ತಪ್ಪಿಸಿಕೊಂಡಿರುವುದು ಭದ್ರತಾ ಲೋಪದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಒಳಗಣ್ಣಿನಿಂದ ಪರಿಶೀಲನೆ ನಡೆಸುತ್ತಿದ್ದು, ಭದ್ರತಾ ವೈಫಲ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ವರದಿ : ಲಾವಣ್ಯ ಅನಿಗೋಳ

About The Author