Hubli News: ಹುಬ್ಬಳ್ಳಿ : ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ FLY91 ವಿಮಾನದಲ್ಲಿ ಪ್ರಯಾಣಿಕರು ಕಂಡ ಆತಂಕದ ಕ್ಷಣಗಳು ಮತ್ತು ನಂತರದ ಕಹಿ ಅನುಭವವು ಇದೀಗ ಚರ್ಚೆಯ ವಿಷಯವಾಗಿದೆ.
ನಿನ್ನೆ ಮಧ್ಯಾಹ್ನ ಸುಮಾರು 3 ಗಂಟೆಗೆ ಹೈದರಾಬಾದ್‌ನಿಂದ ಹೊರಟ FLY91 ವಿಮಾನದಲ್ಲಿ ಸುಮಾರು 15ರಿಂದ 20 ಪ್ರಯಾಣಿಕರಿದ್ದರು. ಹುಬ್ಬಳ್ಳಿಗೆ ಸಮೀಪಿಸುತ್ತಿದ್ದಂತೆ ವಿಮಾನವು ತೀವ್ರ ಟರ್ಬುಲೆನ್ಸ್‌ಗೆ ಒಳಗಾಯಿತು. ಈ ಘಟನೆ ಸುಮಾರು 15 ನಿಮಿಷಗಳ ಕಾಲ ನಡೆದಿತ್ತು ಎಂದು ಪ್ರಯಾಣಿಕರೊಬ್ಬರು ವಿವರಿಸಿದ್ದಾರೆ.
ಟರ್ಬುಲೆನ್ಸ್‌ನ ತೀವ್ರತೆ ಎಷ್ಟಿತ್ತೆಂದರೆ, ಪ್ರಯಾಣಿಕರು ತಾವು ಬದುಕುಳಿಯುತ್ತೇವೋ ಇಲ್ಲವೋ ಎಂಬ ಭಯಕ್ಕೆ ಒಳಗಾಗಿದ್ದರು. ಕೆಲವು ಪ್ರಯಾಣಿಕರು ತಮ್ಮ ಕುಟುಂಬಸ್ಥರಿಗೆ ‘ಕೊನೆಯ ಸಂದೇಶ’ ಕಳುಹಿಸಲು ವಿಡಿಯೊಗಳನ್ನು ಮಾಡಲು ಪ್ರಾರಂಭಿಸಿದರು. ಒಂದು ಕುಟುಂಬದ ಮಗುವೊಂದು ತೀವ್ರ ಅಲುಗಾಟದಿಂದಾಗಿ ಕೈಯಿಂದ ಕೆಳಗೆ ಬಿದ್ದ ಘಟನೆಯೂ ನಡೆದಿದೆ.
ಈ ಸಂದರ್ಭದಲ್ಲಿ ಪೈಲಟ್ ಬಹಳ ಸಂಯಮದಿಂದ ವಿಮಾನವನ್ನು ನಿರ್ವಹಿಸಿ, ಹುಬ್ಬಳ್ಳಿಯಲ್ಲಿ ಲ್ಯಾಂಡ್ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಂತರ ವಿಮಾನವನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ವಿಮಾನವು ಸುಮಾರು ನಾಲ್ಕು ಗಂಟೆಗಳ ಕಾಲ ಆಕಾಶದಲ್ಲೇ ಸುತ್ತಾಡಿ, ರಾತ್ರಿ 7 ಗಂಟೆಯ ಸುಮಾರಿಗೆ ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಇಳಿಯಿತು.
ವಿಮಾನ ಸುರಕ್ಷಿತವಾಗಿ ಇಳಿದ ಕೂಡಲೇ ಪ್ರಯಾಣಿಕರು ಭಯದಿಂದ ನಿಟ್ಟುಸಿರು ಬಿಟ್ಟು ಚಪ್ಪಾಳೆ ತಟ್ಟಿದರು. ವಿಮಾನದಲ್ಲಿದ್ದ ಇಬ್ಬರು ಮಹಿಳಾ ಕ್ಯಾಬಿನ್ ಸಿಬ್ಬಂದಿ ಸಹ ಅಕ್ಷರಶಃ ಅಳುತ್ತಿದ್ದರು ಎಂದು ಪ್ರಯಾಣಿಕರು ಹೇಳಿದ್ದಾರೆ. ಈ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ ಪೈಲಟ್‌ಗೆ ಪ್ರಯಾಣಿಕರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಪೈಲಟ್ ಯಾವುದೇ ತಾಂತ್ರಿಕ ದೋಷವಿಲ್ಲ, ಕೇವಲ ಟರ್ಬುಲೆನ್ಸ್‌ನಿಂದ ಹೀಗಾಯಿತು ಎಂದು ಸ್ಪಷ್ಟಪಡಿಸಿದರು.
ಆದರೆ, ವಿಮಾನ ಇಳಿದ ನಂತರ FLY91 ಏರ್‌ಲೈನ್ಸ್‌ನ ನಿಲ್ದಾಣದ ಸಿಬ್ಬಂದಿಯ ವರ್ತನೆ ಪ್ರಯಾಣಿಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಇಳಿಯುತ್ತಿದ್ದಂತೆ, ಇಬ್ಬರಿಂದ ಮೂವರು FLY91 ಸಿಬ್ಬಂದಿ (ಇಂಡಿಗೋ ಅಲ್ಲ, FLY91 ಸಿಬ್ಬಂದಿ ಎಂದು ಪ್ರಯಾಣಿಕರು ಸ್ಪಷ್ಟಪಡಿಸಿದ್ದಾರೆ) ವಾಕಿಟಾಕಿ ಹಿಡಿದುಕೊಂಡು, “ನೀವು ಇಲ್ಲೇ ಕುಳಿತಿರಿ, ಈ ವಿಮಾನ ಮುಂದಿನ ಹುಬ್ಬಳ್ಳಿಗೆ ಹೋಗುತ್ತದೆ, ಹತ್ತಬೇಕಿದ್ದರೆ ಹತ್ತಿ ಇಲ್ಲದಿದ್ದರೆ ಇಳಿದು ಹೋಗಿ” ಎಂಬ ಅಸಭ್ಯ ಧಾಟಿಯಲ್ಲಿ ಮಾತನಾಡಿದರು. ಜೀವ ಉಳಿಸಿಕೊಂಡು ಬಂದ ಪ್ರಯಾಣಿಕರಿಗೆ ಯಾವುದೇ ಸೌಜನ್ಯ ಅಥವಾ ಮಾನವೀಯತೆ ಇಲ್ಲದೆ ಸಿಬ್ಬಂದಿ ವರ್ತಿಸಿದರು ಎಂದು ಪ್ರಯಾಣಿಕರೊಬ್ಬರು ದೂರಿದ್ದಾರೆ.
ನಾನು ಮತ್ತೆ ಯಾವ ಧೈರ್ಯದ ಮೇಲೆ ಈ ವಿಮಾನವನ್ನು ಹತ್ತಲಿ?” ಎಂದು ಪ್ರಶ್ನಿಸಿದ ಪ್ರಯಾಣಿಕರು, ಇತರ ಏರ್‌ಲೈನ್ಸ್‌ಗಳಿಗಿಂತ FLY91 ಸಿಬ್ಬಂದಿಯ ವರ್ತನೆ ಕೀಳುಮಟ್ಟದ್ದಾಗಿತ್ತು ಎಂದು ಆಪಾದಿಸಿದ್ದಾರೆ. ಇಂತಹ ಘಟನೆಗಳ ನಂತರ ಪ್ರಯಾಣಿಕರಿಗೆ ಸಮಾಧಾನ ಹೇಳಿ, ಅವರಿಗೆ ಧೈರ್ಯ ತುಂಬಬೇಕಾದ ಸಿಬ್ಬಂದಿ ಅಹಂಕಾರದಿಂದ ವರ್ತಿಸಿದ್ದು, ದೇಶದಲ್ಲಿ ಇಷ್ಟೆಲ್ಲ ದೊಡ್ಡ ದುರಂತಗಳು ನಡೆಯುತ್ತಿದ್ದರೂ ಒಂದು ಮಾನವೀಯತೆ ಇಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.




