ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಆರ್.ಎಂ. ಕಲ್ಯಾಣ ಮಂಟಪದಲ್ಲಿ ಐವರಿಗೆ ಜಾಕುವಿನಿಂದ ಇರಿದ ಘಟನೆ ನಡೆದಿದೆ. ಮುಸ್ಲಿಂ ಸಮುದಾಯದ ಎರಡು ಕುಟುಂಬಗಳು ಪರಸ್ಪರ ಒಪ್ಪಿಕೊಂಡು ಅದ್ಧೂರಿಯಾಗಿ ಮದುವೆ ನಡೆಸಲು ಸಿದ್ಧವಾಗಿದ್ದವು. ಆದರೆ ಮದುವೆ ಮುನ್ನವೇ ಚಿನ್ನದ ವಿಚಾರಕ್ಕೆ ಇಬ್ಬರ ಕುಟುಂಬಗಳ ನಡುವೆ ವಾಗ್ವಾದ ಆರಂಭವಾಗಿದೆ. ವಧುವಿಗೆ ಕೇಳಿದಷ್ಟು ಚಿನ್ನ ಹಾಕಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ವರ ನ ಕುಟುಂಬದವರು ಪ್ರಶ್ನೆ ಮಾಡಿದ್ದಾರೆ.
ಈ ಮಾತಿನ ಚಕಮಕಿ ಗಲಾಟೆಗೆ ತಿರುಗಿ, ಮಾತಿಗೆ ಮಾತು ಬೆಳೆದ ಪರಿಣಾಮ ಎರಡೂ ಕುಟುಂಬಗಳ ಸಂಬಂಧಿಕರ ನಡುವೆ ಗಲಾಟೆ ಗಂಭೀರಗೊಂಡಿದೆ, ಈ ಸಂದರ್ಭದಲ್ಲಿ ಚಾಕುವಿನಿಂದ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ವರನ ಸಂಬಂಧಿಗಳಾದ ಸಮೀರ್ ಆಯಾಜ್, ಶೋಯೇಬ್ ಹಾಗೂ ವಧುಪಕ್ಷದ ಫೈರೋಜ್ ಖಾನ್, ಅಬ್ದುಲ್ ವಾಹಿದ್, ಅಬ್ದುಲ್ ಆರೀಫ್ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣ ಕೊಳ್ಳೇಗಾಲ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನೆ ಮಾಡಲಾಗಿದೆ.
ಘಟನೆ ಬಳಿಕ ಮದುವೆ ಕಾರ್ಯಕ್ರಮ ಸ್ಥಗಿತಗೊಂಡಿದ್ದು, ಮಂಟಪದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಮದುವೆಗೆ ಸಿದ್ಧವಾಗಿದ್ದ ವ್ಯವಸ್ಥೆಗಳು ಅಸ್ತವ್ಯಸ್ತಗೊಂಡಿರುವುದು ಕಂಡುಬಂದಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಚಿನ್ನದ ವಿಚಾರಕ್ಕೆ ಆರಂಭವಾದ ಗಲಾಟೆ ಹಿಂಸಾತ್ಮಕ ತಿರುವು ಪಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮದುವೆ ಮನೆ ರಣಾಂಗಣವಾದ ಈ ಘಟನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.




