ಒಂದೇ ಕುಟುಂಬದ ಮೂವರು ದುರ್ಮರಣ! ಕೌಟುಂಬಿಕ ಕಲಹಕ್ಕೆ ಕೊನೆ?

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಆಲ್ಕೆರೆ ಗ್ರಾಮದಲ್ಲಿ ತೀವ್ರ ಆತಂಕ ಮೂಡಿಸುವ ಘಟನೆ ಸಂಭವಿಸಿದೆ. ಕೌಟುಂಬಿಕ ಕಲಹದ ಹಿನ್ನೆಲೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಮೃತರನ್ನು 40 ವರ್ಷದ ಶಿವಣ್ಣ ಅವರ ಮಕ್ಕಳು 10 ವರ್ಷದ ಜೀವನ್ ಮತ್ತು 6 ವರ್ಷದ ಪ್ರಾಣೇಶ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಶಿವಣ್ಣ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಕ್ಕಳು ಮನೆಯ ಮಂಚದ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡುಬಂದಿದೆ.

ಸ್ಥಳೀಯರ ಹೇಳಿಕೆಯಂತೆ ಕೌಟುಂಬಿಕ ಕಲಹವೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ತಂದೆಯೇ ಮಕ್ಕಳನ್ನು ಕೊಂದು ನಂತರ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಗಳ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮಾಹಿತಿಯ ಪ್ರಕಾರ, ಕಳೆದ ಒಂದು ವಾರದ ಹಿಂದೆ ಶಿವಣ್ಣನ ಪತ್ನಿ ಕಾವ್ಯ ತನ್ನ ಅಕ್ಕನ ಮಗ ಹೆಮಂತ್ ಅವರೊಂದಿಗೆ ಮನೆಬಿಟ್ಟು ಹೋಗಿದ್ದಾಳೆ ಎಂಬುದು ತಿಳಿದುಬಂದಿದೆ. ಬಳಿಕ ಈ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ನಂತರ ಆಲ್ಕೆರೆ ಗ್ರಾಮಕ್ಕೆ ಮರಳಿದ್ದ ಕಾವ್ಯ ಮನೆಯಲ್ಲಿದ್ದ ಹಣ ಮತ್ತು ಚಿನ್ನಾಭರಣ ತೆಗೆದುಕೊಂಡು ಪರಾರಿಯಾಗಿದ್ದಾಳೆ ಎಂಬ ಆರೋಪವೂ ಕೇಳಿಬಂದಿದೆ.

ಈ ಘಟನೆಗಳಿಂದ ಮನನೊಂದು ಶಿವಣ್ಣ ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಜೊತೆಗೆ ಕುಟುಂಬದಲ್ಲಿ ಇತ್ತೀಚೆಗೆ ನಡೆದ ನಿರಂತರ ಗಲಾಟೆಗಳು ಮತ್ತು ಮಾನಸಿಕ ಒತ್ತಡವೂ ದುರಂತಕ್ಕೆ ಕಾರಣವಾಗಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಮತ್ತೊಂದು ಮಾಹಿತಿ ಪ್ರಕಾರ, ಶಿವಣ್ಣನ ತಾಯಿ ಹೊನ್ನಮ್ಮ ಮೂರು ವರ್ಷಗಳ ಹಿಂದೆ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕೂಡ ದಾಖಲಾಗಿತ್ತು.

ಘಟನಾ ಸ್ಥಳಕ್ಕೆ ಕುಣಿಗಲ್ ಪೊಲೀಸ್ ಠಾಣೆಯ ಸಿಪಿಐ ಮಾಧ್ಯಾನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಈ ದುರಂತದ ನಿಖರ ಕಾರಣಗಳು ಪೊಲೀಸ್ ತನಿಖೆಯ ನಂತರ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

About The Author