ಬಂಗಾಳದ ಜನತೆ ಇವರಿಗೆಲ್ಲ ‘ಜಲ್ ಮುರಿ’ ತಿನ್ನಿಸಿ ಶಾಶ್ವತವಾಗಿ ಮನೆಗೆ ಕಳುಹಿಸಿದ್ದಾರೆ!: ನಿಖಿಲ್ ಕುಮಾರ್

Political News: ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಹೋಗಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ರಾಜ್ಯದಲ್ಲಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಸಂತೋಷ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದಿರುವ ಅವರು, ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಐತಿಹಾಸಿಕ ಜಯ ದಾಖಲಿಸಿದ ಎನ್‌ಡಿಎ ಮೈತ್ರಿಕೂಟಕ್ಕೆ ಹಾರ್ದಿಕ ಅಭಿನಂದನೆಗಳು! ಈ ಅಭೂತಪೂರ್ವ ಗೆಲುವು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಹಾಗೂ ಅಮಿತ್ ಶಾ ಅವರ ಅಪ್ರತಿಮ ಚುನಾವಣಾ ತಂತ್ರಗಾರಿಕೆಗೆ ಸಂದ ಜಯ. ಮುಖ್ಯಮಂತ್ರಿ ಹಿಮಂತ್ ಬಿಸ್ವಾ  ಅವರ ಜನಪರ ಆಡಳಿತದ ಮೇಲೆ ಅಸ್ಸಾಂ ಜನತೆ ಮತ್ತೊಮ್ಮೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಗಲಿರುಳು ಶ್ರಮಿಸಿದ ಪ್ರತಿಯೊಬ್ಬ ಎನ್‌ಡಿಎ ಕಾರ್ಯಕರ್ತನಿಗೂ ನನ್ನ ಅಭಿನಂದನೆಗಳು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಈ ಗೆಲುವು ವಿಶ್ವನಾಯಕ ನರೇಂದ್ರ ಮೋದಿ ಅವರ ಅಪ್ರತಿಮ ನಾಯಕತ್ವ ಹಾಗೂ ಅವರ ಮೇಲಿರುವ ಜನರ ಅಚಲ ವಿಶ್ವಾಸಕ್ಕೆ ಸಾಕ್ಷಿ. ಅಸಾಧ್ಯವೆನಿಸಿದ್ದನ್ನು ಅತ್ಯಂತ ನಿಖರವಾಗಿ ಕಾರ್ಯರೂಪಕ್ಕೆ ತಂದ ಅಮಿತ್‌ಶಾ ಅವರ ಚುನಾವಣಾ ತಂತ್ರಗಾರಿಕೆ ಮೆಚ್ಚುವಂತಹದ್ದು. ಟಿಎಂಸಿಯ ರಕ್ತಸಿಕ್ತ ರಾಜಕಾರಣ ಮತ್ತು ದೌರ್ಜನ್ಯಗಳ ನಡುವೆಯೂ ಎದೆಯೊಡ್ಡಿ ಹೋರಾಡಿ ಕಮಲ ಅರಳಿಸಿದ ಬಿಜೆಪಿ ಕಾರ್ಯಕರ್ತರ ಶ್ರಮ ಅಪಾರ. ಈ ಗೆಲುವು ಪ್ರಜಾಪ್ರಭುತ್ವಕ್ಕಾಗಿ ಪ್ರಾಣತೆತ್ತ ಹುತಾತ್ಮ ಕಾರ್ಯಕರ್ತರಿಗೆ ಅರ್ಪಣೆ.

ಟಿಎಂಸಿಯ ಹಿಂಸಾಚಾರ ಮತ್ತು ವೋಟ್ ಬ್ಯಾಂಕ್ ರಾಜಕೀಯಕ್ಕೆ ಬಂಗಾಳದ ಜನತೆ ‘ಜಲ್ ಮುರಿ’ ತಿನ್ನಿಸಿ ಶಾಶ್ವತವಾಗಿ ಮನೆಗೆ ಕಳುಹಿಸಿದ್ದಾರೆ! ಎಂದು ನಿಖಿಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.

About The Author